
ಲಕ್ನೋ (ಜುಲೈ 18): ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಮುಮ್ತಾಜ್ ಮನ್ಸೂರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, "ಬೇರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಳ್ಳುವುದಿಲ್ಲ' ಎಂದು ಸ್ಪಷ್ಟ ಪಡಿಸಿದೆ. "ಈ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆಯಾದರೂ, ಅಂತಹ ಹಕ್ಕು ಯಾವುದೇ ನಾಗರಿಕರ ವಿರುದ್ಧ ದುರುಪಯೋಗ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ವಿಚಾರದಲ್ಲಿ ಒಳಗೊಂಡಿರುವುದಿಲ್ಲ" ಎಂದು ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್-IV ಅವರಿದ್ದ ವಿಭಾಗೀಯ ಪೀಠ ಹೇಳಿದೆ. ನಂತರ ಉತ್ತರ ಪ್ರದೇಶದ ಜಾನ್‌ಪುರ ಜಿಲ್ಲೆಯ ಮೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಮುಮ್ತಾಜ್ ಮನ್ಸೂರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಮುಮ್ತಾಜ್ ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ನಾಯಿಗಳು ಎಂದು ಕರೆದಿದ್ದ ಆರೋಪಿ: ಅರ್ಜಿದಾರರಾದ ಮುಮ್ತಾಜ್ ಮನ್ಸೂರಿ ((Mumtaz Mansoori) ) ವಿರುದ್ಧ ದಾಖಲಿಸಲಾದ ಎಫ್‌ಐಆರ್ ಪ್ರಕಾರ, ಅವರು ತಮ್ಮ ಫೇಸ್‌ಬುಕ್ ಖಾತೆಯಿಂದ ಪ್ರಧಾನಿ ಮೋದಿ, ಹೆಚ್‌ಎಂ ಅಮಿತ್ ಶಾ ಮತ್ತು ಇತರ ಕೆಲವು ಕೇಂದ್ರ ಸಚಿವರ ವಿರುದ್ಧ "ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು" (ಅವರನ್ನು ನಾಯಿಗಳು ಎಂದು ಕರೆದಿದ್ದರು) ಪೋಸ್ಟ್ ಮಾಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸಲು ಅಥವಾ ರವಾನಿಸಲು ಶಿಕ್ಷೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಎಫ್‌ಐಆರ್ ರದ್ದು ಮಾಡೋದಿಲ್ಲ: ಎಫ್‌ಐಆರ್ (FIR) ರದ್ದುಗೊಳಿಸಲು ನಿರಾಕರಿಸಿದ ವೇಳೆ ಪೀಠವು,“ಪ್ರಥಮ ಮಾಹಿತಿ ವರದಿಯು ಸೂಕ್ತ ಅಪರಾಧದ ಕಾನೂನನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಇಂಥ ಎಫ್‌ಐಆರ್‌ಅನ್ನು ಎದ್ದು ಮಾಡುವ ಯಾವುದೇ ಉತ್ತಮ ಅಂಶ ನಮ್ಮ ಎದುರಿಗೆ ಇಲ್ಲ..ಕಾನೂನಿಗೆ ಅನುಸಾರವಾಗಿ ಈ ವಿಷಯದಲ್ಲಿ ಮುಂದುವರಿಯಲು ಮತ್ತು ತನಿಖೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸ್ವಾತಂತ್ರ್ಯವಿರುತ್ತದೆ' ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ