
ನವದೆಹಲಿ(ಜ.27) ಇಬ್ಬರು ಮಕ್ಕಳು ಪೋಷಕರು ಸೇರಿದಂತೆ ನಾಲ್ವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿ ಮರಳಿದ್ದಾರೆ. ಆದರೆ ಆಗ್ರ ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯ ಫತೇಹಬಾದ್ ಬಳಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ದೆಹಲಿಯ ಉತ್ತಮ ನಗರ ನಿವಾಸಿಗಳಾದ ಈ ಕುಟುಂಬ ಸ್ಥಳದಲ್ಲಿ ಮೃತಪಟ್ಟಿದ್ದರೆ, ಮತ್ತೊಂದು ಘಟನೆಯಲ್ಲಿ ಕಾನ್ಪುರದಿಂದ ಪ್ರಯಾಗರಾಜ್‌ಗೆ ತೆರಳುತ್ತಿದ್ದ ಭಕ್ತರ ಕಾರು ರಾಷ್ಟ್ರೀಯ ಹೆದ್ದಾರಿ2ರ ಗುರುಕುಲ ಬಳಿ ಅಪಘಾತ ನಡೆದಿದೆ. ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.
ದೆಹಲಿಯ ಓಂ ಪ್ರಕಾಶ್ ಆರ್ಯ ತನ್ನ ಕುಟುಂಬದ ಜೊತೆ ಪ್ರಯಾಗರಾಜ್‌ಗೆ ತೆರಳಿದ್ದರು. ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ದೆಹಲಿಗೆ ಮರಳುತ್ತಿರುವ ವೇಳೆ ಈ ಘಟನೆ ನಡೆದಿದೆ. ಓಂ ಪ್ರಕಾರ್ ಆರ್ಯ, ಪತ್ನಿ ಪೂರ್ಣಿಮಾ, 12 ವರ್ಷಗ ಪುತ್ರಿ ಅಹನಾ ಹಾಗೂ 4 ವರ್ಷದ ಪುತ್ರ ವಿನಾಯಕ್ ಘಟನೆಯಲ್ಲಿ ಮೃತಪಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ವೇಗದ ಕಾರಣ ಪಲ್ಟಿಯಾದ ಕಾರು ಟ್ರಕ್‌ಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹರಸಾಹಸ ಮಾಡಿ ಗಾಯಗೊಂಡವರ ಹೊರತೆಗೆದಿದ್ದಾರೆ. ಆದರೆ ಭೀಕರ ಅಪಘಾತದ ಕಾರಣ ಕುಟುಂಬದ ಎಲ್ಲಾ ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಾಕುಂಭದಲ್ಲಿ ಶೃಂಗೇರಿ ಪೀಠದ ಶಂಕರಾಚಾರ್ಯರ ಭೇಟಿಯಾದ ಸಿಎಂ ಯೋಗಿ
ಕಾನ್ಪುರ ಪ್ರಯಾಗರಾಜ್ ಹೆದ್ದಾರಿಯಲ್ಲಿ ನಡೆದ ಘಟೆಯಲ್ಲಿ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾನ್ಪುರದ ಜಜಮೌ ಹಾಗೂ ಹರ್ಯಾಣದ ಗುರುಗ್ರಾಂ ನಿವಾಸಿಗಳು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 2ರಲ್ಲಿ ವೇಗವಾಗಿ ಸಾಗುತ್ತಿದ್ದ ಭಕ್ತರ ಕಾರು ಎದುರಿನಿಂದ ಬಂದ ಕಾರಿಗೆ ತಿರುವಿನಲ್ಲಿ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಕಾನ್ಪುರದ ಚಂಪಾ ಹಜಾರಿಕಾ, ಮೀನಾಕ್ಷಿ ಹಜಾರಿಕಾ, ಅಪರ್ಣ ಹಜಾರಿಕಾ, ಅರ್ಜನ್ ಹಜಾರಿಕಾ ಗಾಯಗೊಂಡಿದ್ದಾರೆ. ಇದೇ ಘಟನೆಯಲ್ಲಿ ಗುರುಗ್ರಾಂನ ನವೀಣ್ ಯಾದವ್ ಹಾಗೂ ನಿಶಾಂತ್ ಕೂಡ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸೀರಾಥು ಬಳಿ ಇರುವ ಕಮ್ಯೂನಿಟಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಪೈಕಿ ಚಂಪಾ ಹಜಾರಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಚಂಪಾ ಹಜಾರಿಕಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬ ಮೇಳಕ್ಕೆ ಹೆಚ್ಚುವರಿ ರೈಲು ಸೇವೆ ಒದಗಿಸಲಾಗಿದೆ. ಆದರೆ ರೈಲುಗಳು ಬಹುತೇಕ ಕಿಕ್ಕಿರಿದು ತುಂಬಿದ. ಇತರ ಸಾರಿಗೆ ಸಂಪರ್ಕಗಳಾದ ಬಸ್ ಹಾಗೂ ವಿಮಾನ ಪ್ರಯಾಣ ದರ ಏರಿಕೆಯಾಗಿದೆ. ದುಬಾರಿ ದರದಿಂದ ಹಲವರು ಕಾರು ಸೇರಿದಂತೆ ಇತರ ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದಾರೆ. ಇದು ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ