ಮೇಕ್‌ ಇನ್‌ ಇಂಡಿಯಾ: ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಮಂತ್ರ..!

By Kannadaprabha News  |  First Published Oct 30, 2022, 8:39 AM IST

ದೇಶದಲ್ಲೇ ಇನ್ನು ‘ಏರ್‌ಬಸ್‌ ಸಿ-295’ ಸೇನಾ ಸಾರಿಗೆ ವಿಮಾನ ಉತ್ಪಾದನೆ, ವಡೋದರಾಗೆ ಬರಲಿದೆ ‘ಏರ್‌ಬಸ್‌ ಸಿ295’ ಉತ್ಪಾದನಾ ಘಟಕ, ಯುರೋಪ್‌ನಿಂದ ಆಚೆ ಉತ್ಪಾದನೆ ಇದೇ ಮೊದಲು. 


ಬೆಂಗಳೂರು(ಅ.30):  ಏರ್‌ಬಸ್‌ ಸಿ295 ಸೇನಾ ಸಾರಿಗೆ ವಿಮಾನದ ಉತ್ಪಾದನಾ ಘಟಕ ಗುಜರಾತ್‌ನ ವಡೋದರಾದಲ್ಲಿ ಸ್ಥಾಪನೆಯಾಗಲಿದೆ. ಯುರೋಪ್‌ನಿಂದಾಚೆ ಇದೇ ಮೊದಲ ಬಾರಿ ಇದರ ಉತ್ಪಾದನಾ ಘಟಕ ಆರಂಭವಾಗಲಿದ್ದು, ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಗೆ ಪೂರಕವಾಗಿ ಕಾರ್ಯಾರಂಭಿಸಲಿದೆ. ಇಂದು(ಭಾನುವಾರ) ವಿಮಾನ ಉತ್ಪಾದನಾ ಘಟಕದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಲಿದ್ದಾರೆ. ಏರ್‌ಬಸ್‌ ಸಿ-295 ವಿಮಾನದ ವಿಶೇಷತೆ, ವಿಮಾನವನ್ನೇ ದೇಶದಲ್ಲೇ ಉತ್ಪಾದನೆ ಮಾಡುವುದರಿಂದಾಗುವ ಲಾಭಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ದೇಶದಲ್ಲೇ ಸೇನಾ ವಿಮಾನ ಉತ್ಪಾದನೆ

Tap to resize

Latest Videos

ಪ್ರಧಾನಿ ನರೇಂದ್ರ ಮೋದಿಯವರ ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದ ಉಪಕ್ರಮಗಳ ಅಡಿಯಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌, ದೇಶದ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ ಅರಿಹಂತ್‌ ಮೊದಲಾವುಗಳ ಯಶಸ್ಸಿನ ಬಳಿಕ ಪ್ರಪ್ರಥಮ ಬಾರಿ ದೇಶದಲ್ಲಿ ಏರ್‌ಬಸ್‌ ಸೇನಾ ಸಾರಿಗೆ ವಿಮಾನದ ಉತ್ಪಾದನಾ ಘಟಕ ಆರಂಭವಾಗಲಿದೆ. ಯುರೋಪಿನಿಂದಾಚೆ ಉತ್ಪಾದನಾ ಘಟಕ ಆರಂಭವಾಗಿರುವುದು ಇದೇ ಮೊದಲು. ಹೀಗಾಗಿ ದೇಶದ ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ವಿಚಾರದಲ್ಲಿ ಇದೊಂದು ಮಹತ್ವಪೂರ್ಣ ಮೈಲಿಗಲ್ಲು ಎನಿಸಿಕೊಳ್ಳಲಿದೆ.

ಮೇಕ್‌ ಇನ್‌ ಇಂಡಿಯಾ: ಗುಜರಾತ್‌ನಲ್ಲಿ ಬೃಹತ್‌ ಸೇನಾ ವಿಮಾನ ಘಟಕ

ಗುಜರಾತ್‌ಗೆ ಇನ್ನೊಂದು ಗರಿ

ಗುಜರಾತ್‌ನಲ್ಲಿ ಇತ್ತೀಚೆಗೆ 1.24 ಲಕ್ಷ ಕೋಟಿ ರು. ಮೌಲ್ಯದ ವೇದಾಂತ-ಫಾಕ್ಸ್‌ಕಾನ್‌ ಸಹಯೋಗದ ಬೃಹತ್‌ ಚಿಪ್‌ ಉತ್ಪಾದನಾ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ ಇನ್ನೊಂದು ದೊಡ್ಡ ಯೋಜನೆ ರಾಜ್ಯಕ್ಕೆ ಸಿಕ್ಕಂತಾಗಿದೆ. ಗುಜರಾತ್‌ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಈ ಯೋಜನೆ ಘೋಷಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಯೋಧರು, ಸರಕು ಸಾಗಣೆಗೆ ಬಳಕೆ

ಸಿ-295 ವಿಮಾನಗಳನ್ನು ಯೋಧರು ಹಾಗೂ ಸೇನಾ ಸರಕು ಸಾಗಣೆಗೆ ಬಳಸಿಕೊಳ್ಳಲಾಗುತ್ತದೆ. ಇದು ಟ್ವಿನ್‌ ಟರ್ಬೋಪ್ರಾಪ್‌ ಸಾರಿಗೆ ವಿಮಾನವಾಗಿದೆ. ಇದು 5-10 ಟನ್‌ ಭಾರತವನ್ನು ಸಾಗಿರುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ರೇರ್‌ ರಾರ‍ಯಂಪ್‌ ದ್ವಾರವನ್ನು ಹೊಂದಿದೆ. ಇದು ಯೋಧರ ಪ್ರಯಾಣ ಹಾಗೂ ಸರಕುಗಳನ್ನು ತ್ವರಿತವಾಗಿ ಸಾಗಿಸಲು ನೆರವಾಗುತ್ತದೆ.

ಹಳೆಯ ಆವ್ರೋ ವಿಮಾನಕ್ಕೆ ಕೊಕ್‌

ಬ್ರಿಟಿಷ್‌ ಕಂಪನಿ ವಿನ್ಯಾಸಗೊಳಿಸಿದ ಆವ್ರೋ ವಿಮಾನವನ್ನು ಎಚ್‌ಎಎಲ್‌ ಪರವಾನಗಿ ಪಡೆದು ಉತ್ಪಾದನೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಎಚ್‌ಎಎಲ್‌ ಆವ್ರೋ ವಿಮಾನವನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪ ಸಲ್ಲಿಸಿತ್ತು. ಆದರೆ ಹಳೆಯ ಆವ್ರೋ-748 ವಿಮಾನಗಳಲ್ಲಿ ಸೇನಾ ಸರಕು ಸಾಗಣೆಗೆ ಹಿಂಬದಿ ರಾರ‍ಯಂಪ್‌ ಅಸಮರ್ಪಕತೆಯು ಅಡ್ಡಿ ಆಗುತ್ತಿತ್ತು. ಈ ವಿಮಾನವನ್ನು ಕೇವಲ ಯೋಧರ ಹಾಗೂ ವಿವಿಐಪಿ ಜನರ ಸಂಚಾರಕ್ಕೆ ಮಾತ್ರ ಬಳಸಿಕೊಳ್ಳಬಹುದಾಗಿತ್ತು. ಹೀಗಾಗಿ ಆವ್ರೋ ವಿಮಾನ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ದೇಶದಲ್ಲೇ 40 ವಿಮಾನ ಉತ್ಪಾದನೆ

ಏರ್‌ಬಸ್‌ ಕಂಪನಿಯು ಮೊದಲ 16 ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಾಗಿರುವ ಸ್ಥಿತಿಯಲ್ಲಿ ಸ್ಪೇನ್‌ನ ಸೆವೆಲ್ಲೆಯಿಂದ 2023ರಿಂದ 2025ರ ನಡುವಿನ ಅವಧಿಯಲ್ಲಿ ಪೂರೈಸಲಿದೆ. ಉಳಿದ 40 ವಿಮಾನಗಳನ್ನು ಭಾರತದಲ್ಲೇ ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌ ಅವರೊಂದಿಗೆ ಸೇರಿ ಉತ್ಪಾದನೆ ಮಾಡಲಾಗುವುದು. 2026ರಲ್ಲಿ ಮೊದಲ ಭಾರತೀಯ ನಿರ್ಮಿತ ಸಿ295 ವಿಮಾನ ಹಾರಾಟ ನಡೆಸುವ ನಿರೀಕ್ಷೆಯಿದೆ. 2031ಕ್ಕೆ 40 ವಿಮಾನ ಉತ್ಪಾದನೆ ಮುಗಿಯಲಿದೆ. ಪ್ರತಿವರ್ಷವೂ 8 ವಿಮಾನ ಉತ್ಪಾದನೆಯ ಗುರಿಯನ್ನು ನೀಡಲಾಗಿದೆ.

ಮಿಲಿಟರಿ ವಿಮಾನ ತಯಾರಿಕೆಗೆ ಟಾಟಾ ಹಾಗೂ ಏರ್‌ಬಸ್ 22 ಸಾವಿರ ಕೋಟಿ ರೂ ಒಪ್ಪಂದ!

ಕಳೆದ ಸೆಪ್ಟೆಂಬರ್‌ನಲ್ಲಿ 21 ಸಾವಿರ ಕೋಟಿ ರು. ಒಪ್ಪಂದ

ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಭಾರತ ಸ್ಪೇನ್‌ ಮೂಲದ ಏರ್‌ಬಸ್‌ ಡಿಫೆನ್ಸ್‌ ಹಾಗೂ ಸ್ಪೇಸ್‌ ಕಂಪನಿ ಜತೆ 21,000 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ವಾಯುಪಡೆಯ ಹಳೆಯ ಆವ್ರೋ-748 ವಿಮಾನಗಳನ್ನು 56 ಅತ್ಯಾಧುನಿಕ ಸಿ-295 ಸಾರಿಗೆ ವಿಮಾನದೊಂದಿಗೆ ಬದಲಾಯಿಸಲು ದೇಶದಲ್ಲೇ ಮಿಲಿಟರಿ ವಿಮಾನದ ಉತ್ಪಾದನಾ ಘಟಕ ಆರಂಭಕ್ಕಾಗಿ ವಿದೇಶಿ ಖಾಸಗಿ ಕಂಪನಿಯೊಂದಿಗೆ ಮಾಡಿಕೊಂಡ ಮೊದಲ ಒಪ್ಪಂದ ಇದಾಗಿದೆ. ಈ ಮಹತ್ವಪೂರ್ಣ ಒಪ್ಪಂದಕ್ಕೆ ಕಳೆದ ವಾರವೇ ‘ಡೈರೆಕ್ಟೋರೆಟ್‌ ಜನರಲ್‌ ಆಫ್‌ ಏರೋನಾಟಿಕ್‌ ಕ್ವಾಲಿಟಿ ಅಶ್ಯುರೆನ್ಸ್‌ ’ ನಿಯಂತ್ರಕ ಅನುಮೋದನೆಯನ್ನು ನೀಡಿದೆ.

ಭಾರತಕ್ಕಾಗುವ ಲಾಭವೇನು?

1. ತಗ್ಗಲಿದೆ ವಿದೇಶಿ ಅವಲಂಬನೆ
ಸ್ಪೇನ್‌ನಲ್ಲಿ ನಡೆಯುವ ಶೇ.96ರಷ್ಟುವಿಮಾನ ಉತ್ಪಾದನಾ ಕೆಲಸಗಳು ಇನ್ನೂ ಭಾರತದಲ್ಲೇ ನಡೆಯಲಿವೆ. ಇದರಿಂದ ರಕ್ಷಣಾ ಸಾಮಗ್ರಿಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆ ತಗ್ಗಲಿದೆ.
2. ಸ್ಥಳೀಯ ಉತ್ಪಾದನೆಗೆ ಬಲ
ಸಿ-295 ವಿಮಾನದ 13,400 ಭಾಗಗಳ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುಗಳನ್ನು ಭಾರತದ 7 ರಾಜ್ಯಗಳಲ್ಲಿರುವ ಸುಮಾರು 125 ಪೂರೈಕೆದಾರರಿಂದಲೇ ಖರೀದಿಸಲಾಗುವುದು. ಇದರಿಂದ ಸ್ಥಳೀಯ ಉತ್ಪಾದನೆ ಹೆಚ್ಚಲಿದ್ದು, ವ್ಯಾಪಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
3. ವಿಮಾನಗಳ ರಫ್ತಿಗೂ ಅವಕಾಶ
ದೇಶಕ್ಕಾಗಿ 40 ವಿಮಾನಗಳನ್ನು ಉತ್ಪಾದನೆ ಮಾಡಿದ ಬಳಿಕವೂ ವಾಯುಪಡೆಯ ಅಗತ್ಯತೆಗೆ ಅನುಸಾರವಾಗಿ ಅಥವಾ ರಫ್ತಿಗಾಗಿ ಹೆಚ್ಚುವರಿ ವಿಮಾನಗಳ ಉತ್ಪಾದನೆ ಮುಂದುವರೆಸಲಾಗುವುದು. ಟಾಟಾ-ಏರ್‌ಬಸ್‌ ಕಂಪನಿಗಳು ಸೇರಿ ಭವಿಷ್ಯದಲ್ಲಿ ಮತ್ತಷ್ಟುಅತ್ಯಾಧುನಿಕ ವಿಮಾನಗಳನ್ನು ಅಭಿವೃದ್ಧಿ ಪಡಿಸಲಿವೆ.
4. ಅತಿದೊಡ್ಡ ವಿಮಾನ ಆಪರೇಟರ್‌ ಖ್ಯಾತಿ
ಸಿ-295 ಸೇನಾ ವಿಮಾನಗಳನ್ನು ವಾಯುಪಡೆಯಲ್ಲಿ ಸೇರ್ಪಡೆ ಮಾಡಿಕೊಂಡ ಬಳಿಕ ಭಾರತೀಯ ವಾಯುಪಡೆ (ಐಎಎಫ್‌) ಜಗತ್ತಿನ ಅತಿದೊಡ್ಡ ವಿಮಾನದ ಆಪರೇಟರ್‌ಗಳಲ್ಲಿ ಒಂದು ಎನಿಸಿಕೊಳ್ಳಲಿದೆ.
5. ಚೀನಾ ಗಡಿಗೆ ಸೂಕ್ತ
ಪ್ರತಿಕೂಲ ಹವಾಮಾನಗಳಿರುವ ಚೀನಾ ಗಡಿ ಹಾಗೂ ಈಶಾನ್ಯ ಭಾರತದಲ್ಲಿ ಸಿ-295 ಸೇನಾ ವಿಮಾನಗಳು ಬಳಸಲು ಅತ್ಯಂತ ಯೋಗ್ಯವಾಗಿದೆ. ಹೀಗಾಗಿ ಚೀನಾದ ವಿರುದ್ಧದ ಕಾರ್ಯಾಚರಣೆಗಳಲ್ಲೂ ಈ ವಿಮಾನ ಮಹತ್ವದ ಪಾತ್ರ ವಹಿಸಲಿದೆ.

ನಂಬರ್‌ಗೇಮ್‌

5-10 ಟನ್‌ ಸಿ-295 ವಿಮಾನದ ಭಾರ ಹೊರುವ ಸಾಮರ್ಥ್ಯ
96% ವಿಮಾನ ಉತ್ಪಾದನೆಯಲ್ಲಿ ಭಾರತದ ಪಾಲು
21,000 ಕೋಟಿ ರು. ಏರ್‌ಬಸ್‌ನೊಂದಿಗೆ ಒಪ್ಪಂದದ ಮೊತ್ತ
56 ವಾಯುಪಡೆಯಲ್ಲಿ ಸೇರ್ಪಡೆಯಾಗುವ ವಿಮಾನಗಳ ಸಂಖ್ಯೆ
16 ಸ್ಪೇನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ವಿಮಾನಗಳ ಸಂಖ್ಯೆ
40 ವಡೋದರಾದಲ್ಲಿ ಉತ್ಪಾದನೆಯಾಗುವ ವಿಮಾನಗಳ ಸಂಖ್ಯೆ
8 ಪ್ರತಿವರ್ಷ ಉತ್ಪಾದನೆ ಮಾಡಬೇಕಾದ ವಿಮಾನಗಳ ಪ್ರಮಾಣ
 

click me!