
ನವದೆಹಲಿ(ಮೇ. 01): ಪ್ರಸಿದ್ಧ ನ್ಯಾಯವಾದಿಗಳಲ್ಲಿ ಒಬ್ಬರಾದ ಪದ್ಮವಿಭೂಷಣ ಸೋಲಿ ಸೊರಾಬ್ಜಿ (91) ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಕೇಶವಾನಂದ ಭಾರತಿ ಹಾಗೂ ಎಸ್.ಆರ್.ಬೊಮ್ಮಾಯಿ ಪ್ರಕರಣ ಸೇರಿದಂತೆ ಹಲವು ಐತಿಹಾಸಿಕ ಪ್ರಕರಣಗಳಲ್ಲಿ ವಾದಿಸಿದ್ದ ಸೊರಾಬ್ಜಿ, ಶುಕ್ರವಾರ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು, ಪತ್ನಿ, ಒಬ್ಬಳು ಪುತ್ರಿ ಹಾಗೂ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.
ವಿ.ಪಿ.ಸಿಂಗ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸೊರಾಬ್ಜಿ ಭಾರತದ ಅಟಾರ್ನಿ ಜನರಲ್ ಆಗಿದ್ದರು. ಅತ್ಯುತ್ತಮ ಸಂವಿಧಾನ ತಜ್ಞ ಹಾಗೂ ಮಾನವ ಹಕ್ಕುಗಳ ತಜ್ಞರಾಗಿದ್ದ ಅವರು, ಭಾರತೀಯ ಕಾನೂನುಗಳಿಗೆ ಸಂಬಂಧಿಸಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. 1930ರಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಅವರು ಒಟ್ಟು 68 ವರ್ಷಗಳ ಕಾಲ ಕಾನೂನು ಕ್ಷೇತ್ರದಲ್ಲಿ ಅವಿರತವಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ವಿ.ರಮಣ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
"
ಐತಿಹಾಸಿಕ ಬೊಮ್ಮಾಯಿ ಕೇಸ್‌ನಲ್ಲಿ ವಾದ:
ಜನತಾದಳದ ಎಸ್.ಆರ್.ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ 1989ರಲ್ಲಿ ಅವರ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿತ್ತು. ಆಗ ಸೋಲಿ ಸೊರಾಬ್ಜಿ ಸುಪ್ರೀಂಕೋರ್ಟ್‌ನಲ್ಲಿ ಬೊಮ್ಮಾಯಿ ಪರ ವಾದಿಸಿದ್ದರು. ಆ ಪ್ರಕರಣ ಸಾಂವಿಧಾನಿಕ ಪೀಠದಲ್ಲಿ 5 ವರ್ಷಗಳ ಕಾಲ ವಿಚಾರಣೆ ನಡೆದು, ಸರ್ಕಾರದ ಬಹುಮತ ಸದನದಲ್ಲೇ ಸಾಬೀತಾಗಬೇಕು ಎಂಬ ಐತಿಹಾಸಿಕ ತೀರ್ಪು ಹೊರಬಂತು. ಆ ತೀರ್ಪಿನ ನಂತರ ರಾಜ್ಯಗಳಲ್ಲಿ ಪದೇಪದೇ ರಾಷ್ಟ್ರಪತಿ ಆಳ್ವಿಕೆ ಹೇರುವ ಪರಿಪಾಠಕ್ಕೆ ಕಡಿವಾಣ ಬಿದ್ದಿತ್ತು. ಇಂದಿಗೂ ಶಾಸನಸಭೆಯ ಬಹುಮತದ ವಿಚಾರ ಬಂದಾಗಲೆಲ್ಲ ಈ ತೀರ್ಪು ಉಲ್ಲೇಖವಾಗುತ್ತದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ