'ಎಷ್ಟು ತಲೆಮಾರಿಗೆ ಮೀಸಲು ಮುಂದುವರೆಸುತ್ತೀರಿ? ಪ್ರಗತಿ ಆಗಿಲ್ಲವೇ?'

By Kannadaprabha NewsFirst Published Mar 20, 2021, 8:00 AM IST
Highlights

ಎಷ್ಟು ತಲೆಮಾರಿಗೆ ಮೀಸಲು ಮುಂದುವರೆಸುತ್ತೀರಿ: ಸುಪ್ರೀಂ| 70 ವರ್ಷದಲ್ಲಿ ಎಷ್ಟೆಲ್ಲಾ ಯೋಜನೆ ಜಾರಿಯಾದರೂ ಪ್ರಗತಿ ಆಗಿಲ್ಲವೇ?

ನವದೆಹಲಿ(ಮಾ.20): ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಿದ ತನ್ನ ದಶಕಗಳ ಹಿಂದಿನ ನಿರ್ಧಾರವನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್‌, ಇನ್ನೂ ಎಷ್ಟುತಲೆಮಾರಿನವರೆಗೆ ಮೀಸಲು ನೀತಿ ಮುಂದುವರೆಸುತ್ತೀರಿ ಎಂದು ಸರ್ಕಾರಗಳಿಗೆ ಪ್ರಶ್ನೆ ಹಾಕಿದೆ.

ಮಹಾರಾಷ್ಟ್ರದಲ್ಲಿ ಮೀಸಲು ಪ್ರಮಾಣ ಶೇ.50ರ ಮಿತಿ ಮೀರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಶುಕ್ರವಾರವೂ ನ್ಯಾ.ಅಶೋಕ್‌ ಭೂಷಣ್‌ ನೇತೃತ್ವದ ಪೀಠದಲ್ಲಿ ನಡೆಯಿತು. ಈ ವೇಳೆ ಮಹಾರಾಷ್ಟ್ರ ಸರ್ಕಾರದ ಮೀಸಲು ನೀತಿಯನ್ನ ಹಿರಿಯ ವಕೀಲ ಮುಕುಲ್‌ ರೋಹಟಗಿ ಬಲವಾಗಿ ಸಮರ್ಥಿಸಿಕೊಂಡು ‘ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಮೀಸಲು ನೀತಿ ಬದಲಾಗಬೇಕು. ಮೀಸಲು ನಿಗದಿ ಮಿತಿಯನ್ನು ನ್ಯಾಯಾಲಯವು ರಾಜ್ಯಗಳ ವಿವೇಚನೆಗೆ ಬಿಡಬೇಕು’ ಎಂದು ವಾದಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ‘ನೀವು ಹೇಳಿದಂತೆ ಶೇ.50ರ ಮಿತಿ ಇರಬಾರದು ಅಥವಾ ಯಾವುದೇ ಮಿತಿಯೇ ಇರಬಾರದು ಎಂದಾದಲ್ಲಿ ಸಮಾನತೆಯ ಪ್ರಶ್ನೆ ಎಲ್ಲಿ ಬಂತು? ನಾವು ಅಂಥ ಪರಿಸ್ಥಿತಿಯನ್ನೂ ನಿರ್ವಹಿಸಬೇಕಲ್ಲವೇ? ಇದರ ಪರಿಣಾಮದಿಂದ ಸೃಷ್ಟಿಯಾಗುವ ಅಸಮಾನತೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದೇ ರೀತಿ ಎಷ್ಟುತಲೆಮಾರಿನವರೆಗೆ ಮೀಸಲು ಮುಂದುವರೆಸುತ್ತೀರಿ? ಎಂದು ಪ್ರಶ್ನೆ ಹಾಕಿತು.

ಈ ವೇಳೆ ಮುಕುಲ್‌ ರೋಹಟಗಿ ಅವರು ‘ಮೀಸಲಿಗೆ ಶೇ.50ರ ಮಿತಿ ಹೇರಿದ್ದು, 1931ರ ಜನಗಣತಿ ಆಧಾರದ ಮೇಲೆ. ಇದೀಗ ದೇಶದ ಜನಸಂಖ್ಯೆ 135 ಕೋಟಿ ತಲುಪಿದೆ’ ಎಂದರು. ಈ ವೇಳೆ ರೋಹಟಗಿ ಅವರಿಗೆ ನ್ಯಾಯಪೀಠವು ‘ಸ್ವಾತಂತ್ರ್ಯ ಬಂದು 70 ವರ್ಷಗಳೇ ಆಗಿವೆ. ರಾಜ್ಯಗಳು ಎಷ್ಟೊಂದೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿವೆ. ಹೀಗಿರುವಾಗ ಯಾವುದೇ ಹಿಂದುಳಿದ ಸಮುದಾಯ ಅಭಿವೃದ್ಧಿಯೇ ಆಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕೇ? ಎಂದು ಮರು ಪ್ರಶ್ನೆ ಹಾಕಿತು. ಜೊತೆಗೆ ನಾವು ಮಂಡಲ್‌ ಆಯೋಗದ ವರದಿಯನ್ನು ಮರು ಪರಿಶೀಲನೆ ಮಾಡಬೇಕಿರುವ ಉದ್ದೇಶ, ಯಾರು ಇನ್ನೂ ಹಿಂದುಳಿದ ಸ್ಥಿತಿಯಲ್ಲಿ ಇದ್ದಾರೋ ಅವರನ್ನು ಮುಂದೆ ತರಲು ಎಂದು ಸ್ಪಷ್ಟಪಡಿಸಿತು.

click me!