ಕೊರೋನಾ ನಿಗ್ರಹ: ರಾಜ್ಯಕ್ಕೆ ಮತ್ತೆ ಕೇಂದ್ರ ಮೆಚ್ಚುಗೆ, ಕರ್ನಾಟಕ ಮಾದರಿ ಅನುಸರಿಸಲು ಸಲಹೆ!

By Kannadaprabha NewsFirst Published Jun 20, 2020, 9:17 AM IST
Highlights

ಕೊರೋನಾ ನಿಗ್ರಹ: ರಾಜ್ಯಕ್ಕೆ ಮತ್ತೆ ಕೇಂದ್ರ ಮೆಚ್ಚುಗೆ| ಕರ್ನಾಟಕ ಮಾದರಿ ಅನುಸರಿಸಲು ಎಲ್ಲ ರಾಜ್ಯಗಳಿಗೂ ಸಲಹೆ| ಸಂಪರ್ಕಿತರ ಪತ್ತೆ, ಮನೆಮನೆ ಸಮೀಕ್ಷೆಗೆ ತಂತ್ರಜ್ಞಾನ ಬಳಕೆಗೆ ಪ್ರಶಂಸೆ

ನವದೆಹಲಿ(ಜೂ.20): ಕೊರೋನಾ ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ರಾಜ್ಯಗಳು ಇದೇ ಮಾದರಿ ಅನುಸರಿಸುವಂತೆ ಸಲಹೆ ನೀಡಿದೆ. ಮುಖ್ಯವಾಗಿ, ಕೊರೋನಾ ಸಂಪರ್ಕಿತರ ಪತ್ತೆಗೆ ಕರ್ನಾಟಕ ಕೈಗೊಂಡಿರುವ ಕ್ರಮಗಳು ಹಾಗೂ ಸಂಭವನೀಯ ಸೋಂಕಿತರ ಪತ್ತೆಗೆ ತಂತ್ರಜ್ಞಾನ ಬಳಸಿ ಮನೆಮನೆ ಸಮೀಕ್ಷೆ ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.

"

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಕೊರೋನಾ ಹರಡುವುದನ್ನು ತಡೆಯಲು ಕರ್ನಾಟಕ ಕೈಗೊಂಡಿರುವ ಯಶಸ್ವಿ ಕ್ರಮಗಳನ್ನು ಎಲ್ಲಾ ರಾಜ್ಯಗಳೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿರ್ವಹಣಾ ಮಾದರಿಗೆ ಕೇಂದ್ರ ಸರ್ಕಾರದ ಮೆಚ್ಚುಗೆ.https://t.co/d6BuwFhw1q pic.twitter.com/9F5TPeCBLJ

— CM of Karnataka (@CMofKarnataka)

ಕೊರೋನಾ ನಿಯಂತ್ರಿಸಲು ಕೊರೋನಾ ರೋಗಿಗಳ ಜೊತೆಗೆ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆಹಚ್ಚುವುದು ಬಹಳ ಮುಖ್ಯ. ಹೆಚ್ಚು ರಿಸ್ಕ್‌ ಹಾಗೂ ಕಡಿಮೆ ರಿಸ್ಕ್‌ - ಹೀಗೆ ಎರಡು ವಿಭಾಗಗಳಲ್ಲಿ ಸಂಪರ್ಕಿತರನ್ನು ಪತ್ತೆಹಚ್ಚಿ ಅವರನ್ನು ಕರ್ನಾಟಕ ಸರ್ಕಾರ ಕಟ್ಟುನಿಟ್ಟಾಗಿ ಕ್ವಾರಂಟೈನ್‌ ಮಾಡುತ್ತಿದೆ. ಇದಕ್ಕಾಗಿ 10,000ಕ್ಕೂ ಹೆಚ್ಚು ನುರಿತ ತರಬೇತಿಯ ಸಿಬ್ಬಂದಿಯನ್ನು ಬಳಸುತ್ತಿದೆ. ಸಂಪರ್ಕಿತರ ಪತ್ತೆಗೆ ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ಬಳಸಲಾಗುತ್ತಿದೆ. ಅದರಿಂದಾಗಿಯೇ ನಗರಗಳ ದೊಡ್ಡ ದೊಡ್ಡ ಕೊಳಗೇರಿಗಳಲ್ಲೂ ಕೊರೋನಾ ಹರಡದಂತೆ ಯಶಸ್ವಿಯಾಗಿ ತಡೆಯಲು ಸಾಧ್ಯವಾಗಿದೆ ಎಂದು ಹೇಳಿದೆ.

ಕರ್ನಾಟಕಕ್ಕೆ ಬರುವ ಎಲ್ಲಾ ಹೊರರಾಜ್ಯದ ಪ್ರಯಾಣಿಕರಿಗೆ ಸೇವಾ ಸಿಂಧು ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇದರಲ್ಲಿ ನೋಂದಣಿ ಮಾಡಿಕೊಂಡು ರಾಜ್ಯಕ್ಕೆ ಬರುವವರ ಮೇಲೆ ಮುಂದಿನ ಕೆಲ ದಿನಗಳ ಕಾಲ ನಿಗಾ ಇರಿಸಲಾಗುತ್ತದೆ ಅಥವಾ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಕ್ವಾರಂಟೈನ್‌ನಲ್ಲಿ ಇರುವವರು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಲು ಕ್ವಾರಂಟೈನ್‌ ವಾಚ್‌ ಆ್ಯಪ್‌ ಬಳಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.

ವಯಸ್ಸಾದವರು, ಇತರ ಗಂಭೀರ ರೋಗಗಳಿರುವವರು, ಗರ್ಭಿಣಿಯರು, ಇನ್‌ಫ್ಲುಯೆಂಜಾ ರೀತಿಯ ಅನಾರೋಗ್ಯ (ಐಎಲ್‌ಐ) ಇರುವವರು, ತೀವ್ರ ಉಸಿರಾಟದ ತೊಂದರೆ (ಸಾರಿ) ಇರುವವರನ್ನು ಗುರುತಿಸಲು ಕರ್ನಾಟಕ ಸರ್ಕಾರ ಮನೆಮನೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಈಗಾಗಲೇ ವಿಂಗಡಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬಳಿ ಕೊರೋನಾದಿಂದ ಹೆಚ್ಚು ಅಪಾಯ ಎದುರಿಸುವ ಜನರ ಮಾಹಿತಿ ಲಭ್ಯವಿದೆ. ಆಪ್ತಮಿತ್ರ ಟೆಲಿ-ಕನ್ಸಲ್ಟೇಶನ್‌ ಸಹಾಯವಾಣಿಯ ಮೂಲಕ ಜನರಿಗೆ ಆರೋಗ್ಯ ಸಲಹೆ ನೀಡಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ. ಇವೆಲ್ಲವೂ ಇತರ ರಾಜ್ಯಗಳು ಅಳವಡಿಸಿಕೊಳ್ಳಲು ಯೋಗ್ಯವಾಗಿರುವ ಉಪಕ್ರಮಗಳು ಎಂದು ಕೇಂದ್ರ ಸರ್ಕಾರ ಶ್ಲಾಘಿಸಿದೆ.

ರಾಜ್ಯದಲ್ಲಿ ಕೊರೋನಾ ಕೇರ್‌ ಸೆಂಟರ್‌ ಸ್ಥಾಪನೆ: ಸುಧಾಕರ್‌

ಚಿಕ್ಕಬಳ್ಳಾಪುರ: ಕೊರೋನಾ ತಡೆಯಲು ಸರ್ಕಾರದಿಂದ ಹೊಸ ಮಾರ್ಗಸೂಚಿಗಳನ್ನು ಸಿದ್ಧ ಪಡಿಸುತ್ತಿದ್ದು ರಾಜ್ಯದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಬೃಹತ್‌ ಮಟ್ಟದಲ್ಲಿ ಆರಂಭಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆಲ್ಲ ಕೊರೋನಾ ರೋಗದ ಲಕ್ಷಣಗಳು ಇಲ್ಲದೆ ಸೋಂಕು ಹರಡಿರುತ್ತದೆಯೊ ಅಂತಹ ರೋಗಿಗಳನ್ನು ಕೋವಿಡ್‌ ಕೇರ್‌ ಸೇಂಟರ್‌ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

click me!