
ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧರಿತ ‘ಮಾ ವಂದೇ’ ಸಿನಿಮಾ ಚಿತ್ರೀಕರಣ ಭಾನುವಾರ ಕೇರಳದಲ್ಲಿ ಸಾಂಪ್ರದಾಯಿಕ ಪೂಜಾ ವಿಧಾನ ಮೂಲಕ ಆರಂಭವಾಗಿದೆ. ಪೂಜಾ ಕಾರ್ಯಕ್ರಮದ ಫೋಟೋ, ವಿಡಿಯೋವನ್ನು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಖ್ಯಾತ ತೆಲುಗು ನಿರ್ದೇಶಕ ಕ್ರಾಂತಿ ಕುಮಾರ್ ಸಿ.ಎಚ್. ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮಲಯಾಳಂ ನಟ ಉನ್ನಿ ಮುಕುಂದನ್ ಮೋದಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
‘ಪ್ರಧಾನಿ ಮೋದಿಯವರ ಜೀವನ ಮತ್ತು ಸಾಧನೆಯನ್ನು ಸಿನಿಮಾ ಪ್ರತಿಬಿಂಬಿಸಲಿದೆ. ಮೋದಿಯವರ ಜೀವನದ ವಿವಿಧ ಘಟ್ಟಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಕೇರಳದ ವಿವಿಧೆಡೆ ಹಾಗೂ ದೇಶದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಚಿತ್ರತಂಡ ತಿಳಿಸಿದೆ. ಮೋದಿಯವರ ಜನ್ಮದಿನವಾದ ಸೆ.17ರಂದು ಸಿನಿಮಾವನ್ನು ಘೋಷಣೆ ಮಾಡಲಾಗಿತ್ತು.
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಕ್ತಿಗೀತೆ ಹಾಡಿದ್ದಕ್ಕಾಗಿ ಜನಪ್ರಿಯ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರವರ್ತಿಗೆ ಟಿಎಂಸಿ ನಾಯಕ ಮೆಹಬೂಬ್ ಮಲ್ಲಿಕ್ ಎಂಬಾತ ಕಿರುಕುಳ ನೀಡಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಮಲ್ಲಿಕ್‌ನನ್ನು ಬಂಧಿಸಲಾಗಿದೆ. ಪೂರ್ವ ಮೇದಿನಿಪುರ ಜಿಲ್ಲೆಯ ಭಗವಾನ್‌ಪುರ ಶಾಲಾ ಕಾರ್ಯಕ್ರಮದಲ್ಲಿ ಗಾಯಕಿ, ‘ದೇವಿ ಚೌಧುರಾನಿ’ ಚಿತ್ರದ ಭಕ್ತಿಗೀತೆ ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಟಿಎಂಸಿ ನಾಯಕ, ಶಾಲೆಯ ಮಖ್ಯಸ್ಥ, ಕಾರ್ಯಕ್ರಮದ ಆಯೋಜಕ ಮೆಹಬೂಬ್ ಮಲ್ಲಿಕ್ ಇದಕ್ಕೆ ಆಕ್ಷೇಪಿಸಿದ್ದಾರೆ. ಮಾತ್ರವಲ್ಲದೇ ವೇದಿಕೆ ಮೇಲೆ ಬಂದು ‘ ಭಕ್ತಿಗೀತೆ ಸಾಕು, ಜಾತ್ಯಾತೀತತೆಯ ಹಾಡು ಹೇಳಿ’ ಎಂದಿದ್ದಾರೆ. ಮಾತ್ರವಲ್ಲದೇ ಈ ವೇಳೆ ಲಗ್ನಜಿತಾ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿರುವ ಆರೋಪವೂ ಕೇಳಿ ಬಂದಿದೆ.
ನವದೆಹಲಿ: ವಾಯು ಮಾಲಿನ್ಯ ಮತ್ತು ದಟ್ಟ ಮಂಜು ಮುಸುಕಿದ ವಾತಾವರಣದ ಇದ್ದ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಯಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಗೋಚರತೆ ಕೊರತೆಯಿಂದಾಗಿ 97 ವಿಮಾನ ಸಂಚಾರ ರದ್ದುಗೊಳಿಸಲಾಗಿದ್ದರೆ, 200ಕ್ಕೂ ಹೆಚ್ಚು ವಿಮಾನಗಳ ಸೇವೆ ವಿಳಂಬವಾಗಿದೆ. 48 ಆಗಮನ, 49 ನಿರ್ಗಮನಗಳು ರದ್ದಾಗಿದೆ. ದೆಹಲಿಯಲ್ಲಿ ವಿಮಾನ ಟೇಕಾಫ್ ವಿಳಂಬ ಸರಾಸರಿ ಸಮಯವು 23 ನಿಮಿಷಕ್ಕೂ ಹೆಚ್ಚಿತ್ತು. ದೆಹಲಿಯು ದೇಶದಲ್ಲಿಯೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ದಿನಂಪ್ರತಿ ಸರಾಸರಿ 1300 ವಿಮಾನಗಳು ಇಲ್ಲಿ ಕಾರ್ಯನಿರ್ವಹಿಸುತ್ತವೆ.
ಟ್ರಿಲಿಯನೇರ್ ಪಟ್ಟಕ್ಕೆ ಮಸ್ಕ್ ಮತ್ತಷ್ಟು ಹತ್ತಿರ
ವಾಷಿಂಗ್ಟನ್: ವಿಶ್ವದ ನಂ.1 ಸಿರಿವಂತನಾಗಿರುವ ಎಲಾನ್ ಮಸ್ಕ್ ಇದೀಗ ಜಗತ್ತಿನ ಮೊದಲ ಟ್ರಿಲಿಯನೇರ್ (89 ಲಕ್ಷ ಕೋಟಿ ರು. ಒಡೆಯ) ಆಗಲು ಕೆಲವೇ ಹೆಜ್ಜೆಗಳ ದೂರದಲ್ಲಿದ್ದಾರೆ. ಕಾರಣ, ಪ್ರಸ್ತುತ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 67 ಲಕ್ಷ ಕೋಟಿ ರು. ತಲುಪಿದೆ.
ಟೆಸ್ಲಾ ಕಂಪನಿ ಉತ್ತಮ ಪ್ರದರ್ಶನ ನೀಡಿ ನಿಗದಿತ ಗುರಿಯನ್ನು ತಲುಪಿದರೆ, 5 ಲಕ್ಷ ಕೋಟಿ ರು. ಮೌಲ್ಯದ ಷೇರುಗಳನ್ನು ಸಿಇಒ ಆಗಿರುವ ಎಲಾನ್ ಮಸ್ಕ್‌ಗೆ ನೀಡಲು ಬೋರ್ಡ್ ಸದಸ್ಯರು 2018ರಲ್ಲಿ ನಿರ್ಧರಿಸಿದ್ದರು. ಆದರೆ 2024ರಲ್ಲಿ ಕೋರ್ಟ್ ಇದನ್ನು ರದ್ದುಪಡಿಸಿತ್ತು. ಆದರೆ ಇದೀಗ ಡೆಲವೇರ್ ಸುಪ್ರೀಂ ಕೋರ್ಟ್, ‘ಹೀಗೆ ಮಾಡಿದರೆ ಮಸ್ಕ್‌ರ ವರ್ಷಗಳ ಪರಿಶ್ರಮಕ್ಕೆ ಫಲ ಸಿಗದೆ ಉಳಿಯುತ್ತದೆ’ ಎಂದಿದ್ದು, ಅವರಿಗೆ ಹಳೇ ಬೆಲೆಯಲ್ಲಿ ಷೇರುಗಳನ್ನು ತಮ್ಮದಾಗಿಸಿಕೊಳ್ಳಲು ಅನುಮತಿಸಿದೆ. ಇದರಿಂದ ಮಸ್ಕ್ ಆಸ್ತಿಯಲ್ಲಿ ದಿಢೀರ್ ಏರಿಕೆಯಾಗಿದೆ.್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ