ಕೊರೋನಾ ವೈರಸ್ ಭೀತಿ: ಚೀನಿಯರ ಭಾರತ ಪ್ರವೇಶ ನಿರ್ಬಂಧ!

By Kannadaprabha NewsFirst Published Feb 10, 2020, 10:39 AM IST
Highlights

ಕೊರೋನಾ ವೈರಸ್ ಭೀತಿ: ಚೀನಿಯರ ಭಾರತ ಪ್ರವೇಶ ನಿರ್ಬಂಧ!| ಕೊರೋನಾಕ್ಕೆ 813 ಜನ ಬಲಿ

ವುಹಾನ್[ಫೆ.10]: ಚೀನಾದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ, ಚೀನಾಕ್ಕೆ ತೆರಳಿದ್ದ ವಿದೇಶಿಯರಿಗೆ ಭಾರತಕ್ಕೆ ಪ್ರವೇಶ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020 ಜ.15 ಬಳಿಕ ಚೀನಾಗೆ ತೆರಳಿರುವ ವಿದೇಶಿ ನಾಗರಿಕರು ಯಾವುದೇ ಮಾರ್ಗವಾಗಿಯೂ ದೇಶಕ್ಕೆ ಪ್ರವೇಶ ಕೊಡುವುದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ]

ಈ ನಾಗರಿಕರು ಭಾರತ-ನೇಪಾಳ, ಇಂಡೋ-ಭೂತಾನ್‌, ಇಂಡೋ-ಬಾಂಗ್ಲಾದೇಶ ಅಥವಾ ಇಂಡೋ-ಮ್ಯಾನ್ಮಾರ್‌ ಮೂಲಕವಾಗಿ ವಾಯು, ಭೂ ಹಾಗೂ ಜಲ ಮಾರ್ಗವಾಗಿ ಭಾರತಕ್ಕೆ ಪ್ರವೇಶ ಮಾಡಬಾರದು ಎಂದು ಹೇಳಳಾಗಿದೆ.

ಕೊರೋನಾಕ್ಕೆ 813 ಜನ ಬಲಿ

ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಾಣುವಿಗೆ ಬಲಿಯಾದವರ ಸಂಖ್ಯೆ ಭಾನುವಾರ 813ಕ್ಕೆ ಏರಿಕೆಯಾಗಿದೆ. ತನ್ಮೂಲಕ, 2002-03ರ ವೇಳೆ ತೀವ್ರ ಉಸಿರಾಟ ತೊಂದರೆ(ಸಾರ್ಸ್‌) ಪಿಡುಗಿಗೆ ಬಲಿಯಾದವರ ಸಂಖ್ಯೆಗಿಂತಲೂ ಕೊರೋನಾಕ್ಕೆ ಸಾವನ್ನಪ್ಪಿದವರ ಸಂಖ್ಯೆ ಅಧಿಕೃತವಾಗಿ ಹೆಚ್ಚಳವಾಗಿದೆ. 2002-03ರಲ್ಲಿ ದಕ್ಷಿಣ ಚೀನಾದ ಮೂಲಕ ಹಬ್ಬಿದ್ದ ಸಾರ್ಸ್‌ಗೆ ಹಾಂಕಾಂಗ್‌ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಒಟ್ಟು 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಶನಿವಾರ ಒಂದೇ ದಿನ ಕೊರೋನಾಕ್ಕೆ 91 ಮಂದಿ ಬಲಿಯಾಗಿದ್ದಾರೆ. ಈ 91 ಮಂದಿ ಪೈಕಿ 83 ಜನ ಹುಬೇ ಪ್ರಾಂತ್ಯದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಗೆ ಹೊಸದಾಗಿ 2656 ಮಂದಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 37,198 ಮಂದಿ ಏರಿಕೆಯಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

click me!