ಹಿಸಾರ್‌ನಲ್ಲಿ ಬಿಜೆಪಿ ಸಂಸದನ ವಿರುದ್ಧ ರೈತರ ಪ್ರತಿಭಟನೆ, ಕಾರಿನ ಗಾಜು ಪುಡಿಪುಡಿ!

By Suvarna NewsFirst Published Nov 5, 2021, 3:38 PM IST
Highlights

* ಶುಕ್ರವಾರ ಹಿಸಾರ್‌ನಲ್ಲಿ ರೈತರ ಭಾರೀ ಪ್ರತಿಭಟನೆ

* ಪ್ರತಿಭಟನೆಯಿಂದಾಗಿ ಜಾಂಗ್ರಾ ಅವರ ಕಾರಿನ ಮುಂಭಾಗದ ಗಾಜು ಪುಡಿಪುಡಿ

* ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು

ಹಿಸಾರ್(ನ.05): ಬಿಜೆಪಿಯ ರಾಜ್ಯಸಭಾ ಸಂಸದ ರಾಮಚಂದ್ರ ಜಾಂಗ್ರಾ ಶುಕ್ರವಾರ ಹಿಸಾರ್‌ನಲ್ಲಿ ಭಾರೀ ಪ್ರತಿಭಟನೆ ಎದುರಿಸಿದ್ದಾರೆ. ವಿಶ್ವಕರ್ಮ ಸಮಾಜದ ಧರ್ಮಶಾಲೆಯೊಂದರ ಶಂಕುಸ್ಥಾಪನೆಗಾಗಿ ಅವರು ನಾರ್ನಾಂಡ್ ತಲುಪಿದ್ದರು. ಪ್ರತಿಭಟನೆಯಿಂದಾಗಿ ಜಾಂಗ್ರಾ ಅವರ ಕಾರಿನ ಮುಂಭಾಗದ ಗಾಜು ಒಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವು ರೈತರು ಗಾಯಗೊಂಡಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಸ್ತವವಾಗಿ, ಜಾಂಗ್ರಾ ಅವರ ಕಾರ್ಯಕ್ರಮದ ಬಗ್ಗೆ ತಿಳಿದ ತಕ್ಷಣ ರೈತರು ಸ್ಥಳಕ್ಕೆ ಆಗಮಿಸಿ ಕಪ್ಪು ಬಾವುಟ ತೋರಿಸಲು ಆರಂಭಿಸಿದ್ದಾರೆ. ಇದರೊಂದಿಗೆ ಅವರ ವಿರುದ್ಧ ಘೋಚಷಣೆಗಳನ್ನೂ ಕೂಗಲಾಗಿದೆ. ಕೂಡಲೇ ಭಾರೀ ಪೊಲೀಸ್ ಪಡೆ ಸ್ಥಳಕ್ಕಾಗಮಿಸಿದೆ. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ರೈತರನ್ನು ತಡೆಯಲು ಪೊಲೀಸರು ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಏಕಾಏಕಿ ರೈತರ ಗುಂಪು ಕಾರ್ಯಕ್ರಮದ ಮುಂದೆ ಸಾಗಿ ಪಂಡಾಲ್ ತಲುಪಿದೆ. ಇಲ್ಲಿ ಘೋಷಣೆಗಳು ತೀವ್ರಗೊಂಡಿದ್ದು, ಒಂದು ಕಡೆ ಸಂಸದರ ಜಿಂದಾಬಾದ್‌ ಎಂಬ ಘೋಷಣೆಗಳು ಮೊಳಗುತ್ತಿದ್ದರೆ, ಇನ್ನೊಂದು ಕಡೆಯಿಂದ ಪ್ರತಿಭಟನೆಗೆ ಆರಮಭಿಸಲಾಗಿದೆ. ಆಕ್ರೋಶಗೊಂಡ ರೈತರ ಗುಂಪೊಂದು ಸಂಸದರ ಕಾರಿನ ಗಾಜು ಒಡೆದಿದೆ.

ಗುಂಪನ್ನು ನಿಯಂತ್ರಿಸಲು ಲಾಠಿ ಚಾರ್ಜ್ 

ಪರಿಸ್ಥಿತಿ ನಿಭಾಯಿಸಲು ಪೊಲೀಸರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅಂತಿಮವಾಗಿ ಲಘು ಬಲಪ್ರಯೋಗ ಮಾಡಿ ಗುಂಪನ್ನು ಚದುರಿಸಲಾಗಿದೆ. ಈ ವೇಳೆ ಸಂಸದ ಜಾಂಗ್ರಾ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತಕ್ಕೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಂದು ದಿನ ಮುಂಚಿತವಾಗಿಯೇ ರೈತರು ಪ್ರತಿಭಟನೆ ನಡೆಸಲು ಸ್ಥಳಕ್ಕೆ ಆಗಮಿಸಿದ್ದರು

ಮೊನ್ನೆ ಗುರುವಾರವೂ ಸಂಸದ ಜಾಂಗ್ರಾ ವಿರೋಧ ಎದುರಿಸಿದ್ದರು. ಮೆಹಮ್‌ನ ಜೂಲಾನಾ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗೋಶಾಲೆಯಲ್ಲಿ ಆಯೋಜಿಸಿದ್ದ ದೀಪಾವಳಿ ಸಭೆಯಲ್ಲಿ ಪಾಲ್ಗೊಳ್ಳಲು ಅವರು ರೋಹ್ಟಕ್ ಪ್ರದೇಶಕ್ಕೆ ಆಗಮಿಸಿದ್ದರು. ಇಲ್ಲಿ ರೈತರ ವಿರೋಧ ಎದುರಿಸಬೇಕಾಯಿತು. ಆದರೆ, ರೈತರು ಸ್ಥಳಕ್ಕಾಗಮಿಸುವ ಮುನ್ನವೇ ಪೊಲೀಸರು ತಡೆದಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರು ಆಗಮಿಸಿದ ಮಾಹಿತಿ ಮೇರೆಗೆ ಚಧುನಿ ಒಕ್ಕೂಟ ಬುಧವಾರವೇ ವಿಡಿಯೋ ವೈರಲ್ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಬಳಿಕ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತು. ಗುರುವಾರದಂದು ಪೊಲೀಸರು ಸ್ಥಳದ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆಯಲು ವ್ಯವಸ್ಥೆ ಮಾಡಿದ್ದರು.

ಬಿಜೆಪಿ-ಜೆಜೆಪಿ ನಾಯಕರ ವಿರುದ್ಧ ರೈತರು

ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಹರಿಯಾಣದಲ್ಲಿ ಜೆಜೆಪಿ ಮತ್ತು ಬಿಜೆಪಿ ನಾಯಕರ ಕಾರ್ಯಕ್ರಮಗಳ ವಿರುದ್ಧ ರೈತರು ಪ್ರತಿಭಟನೆ ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗುರುವಾರ ಮತ್ತು ಶುಕ್ರವಾರ ಬಿಜೆಪಿ ರಾಜ್ಯಸಭಾ ಸಂಸದ ರಾಮಚಂದ್ರ ಜಾಂಗ್ರಾ ರೈತರ ವಿರೋಧ ಎದುರಿಸಬೇಕಾಯಿತು.

click me!