ರೈತರ ಪ್ರತಿಭಟನಾ ಸ್ಥಳದಲ್ಲಿ ಮುಸುಕುಧಾರಿಯ ಹೈಡ್ರಾಮಾ!

By Suvarna NewsFirst Published Jan 24, 2021, 8:20 AM IST
Highlights

ರೈತರ ಪ್ರತಿಭಟನಾ ಸ್ಥಳದಲ್ಲಿ ಮುಸುಕುಧಾರಿಯ ಹೈಡ್ರಾಮಾ| ರೈತ ಹೋರಾಟದ ಸ್ಥಳದಲ್ಲಿ ರೈತರಿಗೆ ಸಿಕ್ಕಿಬಿದ್ದಿದ್ದ| ‘4 ರೈತ ಮುಖಂಡರ ಹತ್ಯೆಗೆ ಸಂಚು’| ಸುದ್ದಿಗೋಷ್ಠಿಯಲ್ಲಿ ಹೇಳಿದ ಮುಸುಕುಧಾರಿ| ಬಳಿಕ ಪೊಲೀಸರ ವಶಕ್ಕೆ ಈ ವ್ಯಕ್ತಿ| ನಂತರ ‘ರೈತರೇ ಹೀಗೆ ಹೇಳಿಸಿದ್ದರು; ಎಂಬ ವಿಡಿಯೋ ವೈರಲ್‌

ನವದೆಹಲಿ(ಜ.24): ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ರೈತರ ಕೈಗೆ ಸಿಕ್ಕಿಬಿದ್ದಿದ್ದ ಮುಸುಕುಧಾರಿ ವ್ಯಕ್ತಿಯೊಬ್ಬ ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ಶುಕ್ರವಾರ ತಡರಾತ್ರಿ ನಡೆದಿದೆ. ‘ನನಗೆ 4 ರೈತ ಮುಖಂಡರನ್ನು ಕೊಲ್ಲುವಂತೆ ತರಬೇತಿ ನೀಡಲಾಗಿತ್ತು. ಅದಕ್ಕೇ ನಾನು ಇಲ್ಲಿ ಸಮೀಕ್ಷೆಗಾಗಿ ಆಗಮಿಸಿದ್ದೆ’ ಎಂದು ಆತ ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಶುಕ್ರವಾರ ರಾತ್ರಿ ಸಿಂಘು ಗಡಿಯಲ್ಲಿ ಶಂಕಾಸ್ಪದವಾಗಿ ಈತ ಸಂಚರಿಸುತ್ತಿದ್ದಾಗ ರೈತರ ಕೈಯಲ್ಲಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಬಳಿಕ ಮುಸುಕು ತೊಟ್ಟಿದ್ದ ಈತನನ್ನು ಸುದ್ದಿಗೋಷ್ಠಿಯಲ್ಲಿ ಹಾಜರು ಮಾಡಲಾಯಿತು. ‘ನನ್ನನ್ನು 4 ರೈತ ಮುಖಂಡರ ಹತ್ಯೆಗೆ ಕಳಿಸಲಾಗಿತ್ತು. ಅಲ್ಲದೆ, ಜ.26ರ ಟ್ರಾಕ್ಟರ್‌ ರಾರ‍ಯಲಿ ವೇಳೆ ಗುಂಡು ಚಲಾಯಿಸಲು ಸೂಚಿಸಲಾಗಿತ್ತು. ಪೊಲೀಸರೇ ನನಗೆ ಈ ತರಬೇತಿ ನೀಡಿದ್ದರು. ಅಂದು ನಾನು ಗುಂಡು ಹಾರಿಸಿ ಅಶಾಂತಿ ಸೃಷ್ಟಿಸಿದರೆ ಪೊಲೀಸರು ರೈತರ ಮೇಲೆಯೇ ಗೋಲಿಬಾರ್‌ ಮಾಡುತ್ತಿದ್ದರು. ಇದು ಸಂಚಿನ ಮೂಲ ಉದ್ದೇಶವಾಗಿತ್ತು’ ಎಂದ.

ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದರು. ಆದರೆ ‘ವಿಚಾರಣೆ ವೇಳೆ ಈತನ ಹೇಳಿಕೆಯ ಬಗ್ಗೆ ಯಾವುದೇ ಆಧಾರಗಳು ಲಭಿಸುತ್ತಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ, ಶನಿವಾರ ಈತನ ವಿಡಿಯೋ ವೈರಲ್‌ ಆಗಿದ್ದು, ‘ನಾನು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ರೈತರ ಬೆದರಿಕೆ ಮೇರೆಗೆ’ ಎಂದು ಹೇಳಿದ್ದಾನೆ. ಆದರೆ ವಿಡಿಯೋ ಸಾಚಾತನಕ್ಕೆ ಪುಷ್ಟಿಸಿಕ್ಕಿಲ್ಲ

click me!