ರೈತಕ್ರಾಂತಿ ತೀವ್ರ: ಇಂದು ಉಪವಾಸ, ದಿಲ್ಲಿ ಚಲೋ| ಕೃಷಿ ಕಾಯ್ದೆ ವಿರುದ್ಧ ಜಿಲ್ಲೆಗಳಲ್ಲಿ ಧರಣಿ| ದಿಲ್ಲಿಯ ಸಿಂಘು ಗಡಿಯಲ್ಲಿ ರೈತರಿಂದ ನಿರಶನ ಚಳವಳಿ| ರೈತರ ಬೆಂಬಲಿಸಿ ದಿಲ್ಲಿ ಸಿಎಂ ಕೇಜ್ರಿವಾಲ್ ಕೂಡ ಉಪವಾಸ| ಬೇಡಿಕೆ ಈಡೇರಿಕೆವರೆಗೆ ಹೋರಾಟ ನಿಲ್ಲೋದಿಲ್ಲ: ರೈತರು| ರೈತ ಮುಷ್ಕರ ಹಿನ್ನೆಲೆ: ಕೃಷಿ ಸಚಿವರ ಜತೆ ಅಮಿತ್ ಶಾ ಸಭೆ
ನವದೆಹಲಿ(ಡಿ.14): ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವನ್ನು ಮತ್ತಷ್ಟುತೀವ್ರಗೊಳಿಸಲು ನಿರ್ಧರಿಸಿರುವ ರೈತ ಸಂಘಟನೆಗಳು, ಸೋಮವಾರ 1 ದಿನದ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ. ಇದೇ ವೇಳೆ, ಕಾಯ್ದೆ ರದ್ದು ಆಗುವವರೆಗೂ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿವೆ.
ಈ ನಡುವೆ, ರೈತರ ಪರ ನಿಂತಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್, ತಾವೂ ಸೋಮವಾರ ಉಪವಾಸ ವ್ರತ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ ಹಾಗೂ ಉಪವಾಸ ನಡೆಸುವಂತೆ ಆಪ್ ಕಾರ್ಯಕರ್ತರಿಗೂ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರವು ತನ್ನ ಪ್ರತಿಷ್ಠೆ ಬದಿಗೆ ಸರಿಸಿ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಅಗ್ರಹಿಸಿದ್ದಾರೆ.
8ರಿಂದ 5 ನಿರಶನ:
ತಮ್ಮ ಮುಂದಿನ ಹೋರಾಟದ ಕುರಿತಂತೆ ಭಾನುವಾರ ಸಂಜೆ ಮಾತನಾಡಿದ ವಿವಿಧ ರೈತ ಸಂಘಟನೆಗಳ ಮುಖಂಡರಾದ ರಾಕೇಶ್ ಟಿಕಾಯತ್, ಗುರ್ನಾಮ್ ಸಿಂಗ್, ಶಿವಕುಮಾರ್ ಕಕ್ಕಾ ಹಾಗೂ ಸಂದೀಪ್ ಗಿಡ್ಡು, ‘ಸೋಮವಾರ ಬೆಳಗ್ಗೆ 8 ಗಂಟೆಯಿಂದ 5 ಗಂಟೆಯವರೆಗೆ ದಿಲ್ಲಿಯ ಸಿಂಘು ಗಡಿಯಲ್ಲಿ ಉಪವಾಸ ನಡೆಸಲು ನಿರ್ಧರಿಸಿದ್ದೇವೆ ಹಾಗೂ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತರ ಪ್ರತಿಭಟನೆಗಳು ನಡೆಯಲಿವೆ’ ಎಂದು ಪ್ರಕಟಿಸಿದರು. ಆದರೆ, ಡಿ.19ರಿಂದ ನಡೆಸಲು ಉದ್ದೇಶಿದಿದ್ದ ಆಮರಣ ಉಪವಾಸ ಸತ್ಯಾಗ್ರಹ ರದ್ದುಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ‘ನಮ್ಮ ಹೋರಾಟದಲ್ಲಿ ಸಮಾಜ ವಿರೋಧಿ ಶಕ್ತಿಗಳು ನುಸುಳದಂತೆ ಎಚ್ಚರಿಕೆ ವಹಿಸಿದ್ದೇವೆ. ಇದು ಕೇವಲ ರೈತರ ಹೋರಾಟವಾಗಿದೆ’ ಎಂದು ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದರು ಹಾಗೂ ‘ಸರ್ಕಾರ ಮತ್ತೆ ನಮ್ಮ ಜತೆ ಮಾತುಕತೆ ಬಯಸಿದ್ದಲ್ಲಿ ಸಮಿತಿ ರಚಿಸಿ ಮಾತುಕತೆಗೆ ಕಳಿಸಲಿದ್ದೇವೆ’ ಎಂದು ಹೇಳಿದರು.
ಮತ್ತೊಂದೆಡೆ ಭಾನುವಾರ ರಾಜಸ್ಥಾನದ ರೈತರು ದಿಲ್ಲಿಗೆ ಪ್ರವೇಶಿಸಲು ಯತ್ನಿಸಿದರು ಹಾಗೂ ದಿಲ್ಲಿ-ರಾಜಸ್ಥಾನ ಗಡಿ ಬಂದ್ ಮಾಡಲು ಮುಂದಾಗಿದ್ದರು. ಅದರೆ ಗಡಿಯನ್ನು ಪೊಲೀಸರು ಕೆಲಕಾಲ ಬಂದ್ ಮಾಡಿದ ಪೊಲೀಸರು ರೈತರ ಯೋಜನೆ ವಿಫಲಗೊಳಿಸಿದರು.
ಶಾ-ತೋಮರ್ ಸಭೆ:
ರೈತರ ಪ್ರತಿಭಟನೆ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿಯಾಗಿ 40 ನಿಮಿಷ ಸಭೆ ನಡೆಸಿದರು. ಈ ವೇಳೆ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಕೂಡ ಹಾಜರಿದ್ದರು. ಸರ್ಕಾರದ ಮುಂದಿನ ನಡೆಗಳ ಬಗ್ಗೆ ಈ ವೇಳೆ ಸಮಾಲೋಚನೆ ನಡೆಯಿತು ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಉತ್ತರಾಖಂಡದ ಕೆಲವು ರೈತ ಮುಖಂಡರು ತೋಮರ್ ಅವರನ್ನು ಭೇಟಿ ಮಾಡಿ, ರೈತ ಕಾಯ್ದೆಗಳಿಗೆ ತಮ್ಮ ಬೆಂಬಲ ಪ್ರಕಟಿಸಿದರು. ಇದಕ್ಕೆ ತೋಮರ್ ಧನ್ಯವಾದ ಅರ್ಪಿಸಿದರು.