
ನವದೆಹಲಿ (ಏ.04): ಜಮೀನುಗಳಲ್ಲಿ ಹೆಚ್ಚು ಹೊತ್ತು ದುಡಿಸಿಕೊಳ್ಳಲು ಉತ್ತರಪ್ರದೇಶ ಹಾಗೂ ಬಿಹಾರ ಮೂಲದ ವಲಸಿಗ ಜೀತ ಕಾರ್ಮಿಕರಿಗೆ ಪಂಜಾಬ್ ರೈತರು ಮಾದಕ ವಸ್ತುಗಳನ್ನು ನೀಡುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಮೀಕ್ಷೆ ನಡೆಸಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪಂಜಾಬ್ ಸರ್ಕಾರಕ್ಕೆ ಸೂಚಿಸಿ ಕೇಂದ್ರ ಸರ್ಕಾರ ಪತ್ರವೊಂದನ್ನು ಬರೆದಿದೆ. ಇದು ಸಂಚಲನಕ್ಕೆ ಕಾರಣವಾಗಿದೆ. ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರಿಗೆ ಮಸಿ ಬಳಿಯಲು ಕೇಂದ್ರ ಸರ್ಕಾರ ನಡೆಸಿರುವ ಮತ್ತೊಂದು ಕಸರತ್ತು ಇದಾಗಿದೆ ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ತರಕಾರಿ ಬೆಲೆ 1ಕೆಜಿಗೆ 1 ಲಕ್ಷ ರೂಪಾಯಿ; ಸುಳ್ಳು ಎನ್ನುತ್ತಿದೆ ವರದಿ! ...
ಪಂಜಾಬ್‌ನ ಜಿಲ್ಲೆಗಳಿಂದ 2019-20ರಲ್ಲಿ 58 ವಲಸಿಗ ಜೀತ ಕಾರ್ಮಿಕರನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿತ್ತು. ಅವರೆಲ್ಲಾ ಉತ್ತರಪ್ರದೇಶ ಹಾಗೂ ಬಿಹಾರದ ಕುಗ್ರಾಮಗಳಿಗೆ ಸೇರಿದವರಾಗಿದ್ದರು. ಮಾನಸಿಕ ಅಸ್ವಾಸ್ಥ್ಯತೆ ಅಥವಾ ದುರ್ಬಲ ಮನಸ್ಥಿತಿ ಹೊಂದಿದ್ದರು. ಅವರಿಗೆ ಡ್ರಗ್ಸ್ ನೀಡಿ ಕೃಷಿ ಭೂಮಿಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವಾಲಯ ಮಾ.17ರಂದು ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಗಮೋಹನ ಸಿಂಗ್, ಕೇಂದ್ರ ಸರ್ಕಾರ ಮೊದಲು ನಮ್ಮನ್ನು ಖಲಿಸ್ತಾನಿಗಳು ಹಾಗೂ ಉಗ್ರರು ಎಂದಿತ್ತು. ಆದರೆ ಈಗ ಮತ್ತೊಮ್ಮೆ ಮಸಿ ಬಳಿಯಲು ಯತ್ನಿಸುತ್ತಿದೆ. ಗೃಹ ಸಚಿವಾಲಯದ ಪ್ರಕಾರ ಸಮೀಕ್ಷೆ ನಡೆದಿದ್ದು 2019-20ರಲ್ಲಿ. ಇಷ್ಟುದಿನ ವರದಿಯನ್ನಿಟ್ಟುಕೊಂಡು ಸುಮ್ಮನೆ ಕುಳಿತಿದ್ದ ಕೇಂದ್ರ ಸರ್ಕಾರ, ರೈತರ ಹೋರಾಟ ತುತ್ತತುದಿಯಲ್ಲಿರುವಾಗ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ