
ಮುಂಬೈ: ಮುಂದೊಂದು ದಿನ ಸತ್ತವರು ಬದುಕಿ ಬರುವ ಸಾಧ್ಯತೆ ಇದೆ, ಇದೇ ಕಾರಣಕ್ಕೆ ಮೃತಪಟ್ಟ ತಮ್ಮ ಅಪ್ಪನೂ ಬದುಕಿ ಬರುತ್ತಾರೆ ಎನ್ನುವ ನಂಬಿಕೆಯಿಂದ ಮೃತಪಟ್ಟ 80 ವರ್ಷದ ವೃದ್ಧರೊಬ್ಬರ ದೇಹವನ್ನು ಫ್ರೀಜರ್‌ನಲ್ಲಿ ಇಟ್ಟು ಮಕ್ಕಳು ಮತ್ತು ಕುಟುಂಬಸ್ಥರು ನಾಲ್ಕು ವರ್ಷಗಳಿಂದ ಸಂರಕ್ಷಿಸುತ್ತಿರುವ ವಿಲಕ್ಷಣ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಮೃತದೇಹವನ್ನು ಈ ರೀತಿಯಾಗಿ ಸಂರಕ್ಷಿಸಿ ಇಡಲು 50 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕುಟುಂಬದವರು ಇಲ್ಲಿಯವರೆಗೆ ಖರ್ಚು ಮಾಡಿದ್ದಾರೆ.
ಅಕ್ಕ-ಪಕ್ಕದ ಜನರು ಮಾಹಿತಿ ನೀಡಿದಾಗ, ಮುಂಬೈನ ಮಲಾಡ್ ಪ್ರದೇಶದ ಪೊಲೀಸರು ದಾಳಿ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಪಾಲಿಕ್ಲಿನಿಕ್ ಒಂದರಲ್ಲಿದ್ದ ಡೀಪ್ ಫ್ರೀಜರ್‌ನಲ್ಲಿ ಈ ಮೃತದೇಹ ಪತ್ತೆಯಾಗಿದೆ. ಕ್ಯಾನ್ಸರ್ ಮತ್ತು ಮೂತ್ರಪಿಂಡ ವೈಫಲ್ಯದಿಂದ ವೃದ್ಧ ಸಾವನ್ನಪ್ಪಿದ್ದರು. 2022ರಲ್ಲಿಯೇ ಅವರು ನಿಧನರಾಗಿದ್ದು, ನಾಲ್ಕು ವರ್ಷಗಳಿಂದ ಮೃತದೇಹವನ್ನು ಕಾಪಾಡಿಕೊಂಡು ಬರಲಾಗಿದೆ. ವಿಜ್ಞಾನದಿಂದ ಸತ್ತಿರುವ ವ್ಯಕ್ತಿ ಮುಂದೊಂದು ದಿನ ಬದುಕಬಹುದು ಎನ್ನುವುದು ಅವರ ಆಸೆ.
ಇವರ ನಿಧವನ್ನು ಪತ್ನಿ ಮತ್ತು ಇಬ್ಬರು ಮಕ್ಕಳು ಸಹಿಸಿಕೊಂಡಿರಲಿಲ್ಲ. ಅವರ ಅಂತ್ಯಸಂಸ್ಕಾರ ಮಾಡಲು ಒಪ್ಪಿರಲಿಲ್ಲ. ಅಮೆರಿಕದಲ್ಲಿ ಪ್ರಚಲಿತದಲ್ಲಿರುವ 'ಕ್ರಯೋನಿಕ್ಸ್' ಎಂಬ ತಂತ್ರಜ್ಞಾನದ ಬಗ್ಗೆ ಇಂಟರ್ನೆಟ್‌ನಲ್ಲಿ ಮಾಹಿತಿ ಕಲೆಹಾಕಿದ ಕುಟುಂಬಸ್ಥರು, ದೇಹವನ್ನು ಕೆಡದಂತೆ ಸಂರಕ್ಷಿಸಲು ನಿರ್ಧರಿಸಿದ್ದರು. ಅಮೆರಿಕದ ಕೆಲವು ಖಾಸಗಿ ಸಂಸ್ಥೆಗಳು ಮೃತದೇಹವನ್ನು ಸುಮಾರು -196 ಡಿಗ್ರಿ ಸೆಲ್ಸಿಯಸ್‌ನಷ್ಟು ಮೈನಸ್ ತಾಪಮಾನದಲ್ಲಿ (ದ್ರವರೂಪದ ಸಾರಜನಕ ಬಳಸಿ) ಸಂರಕ್ಷಿಸಿಡುತ್ತವೆ. ಭವಿಷ್ಯದಲ್ಲಿ ವೈದ್ಯಕೀಯ ಲೋಕ ಇನ್ನಷ್ಟು ಮುಂದುವರಿದಾಗ, ಹೀಗೆ ಸಂರಕ್ಷಿಸಿಟ್ಟ ದೇಹಗಳಿಗೆ ಮರುಜೀವ ನೀಡಬಹುದು ಎಂಬ ಕಲ್ಪನೆಯೇ ಈ 'ಕ್ರಯೋನಿಕ್ಸ್'.
ವೃದ್ಧನ ಕುಟುಂಬವು ಅಮೆರಿಕದ ಇಂತಹ ಸಂಸ್ಥೆಗಳನ್ನು ಸಂಪರ್ಕಿಸಿತ್ತು. ಅಲ್ಲದೆ, ಮೃತದೇಹವನ್ನು ಅಮೆರಿಕಕ್ಕೆ ಸಾಗಿಸಲು ಭಾರತದಲ್ಲಿರುವ ಕಾನೂನು ತೊಡಕುಗಳೇನು ಎಂಬುದರ ಕುರಿತು ಇಲ್ಲಿನ ವಕೀಲರ ಜತೆಗೂ ಚರ್ಚೆ ನಡೆಸಿತ್ತು. ಅಷ್ಟರಲ್ಲೇ ದೇಹವನ್ನು ಸುರಕ್ಷಿತವಾಗಿಡಲು ಈವರೆಗೆ ಸುಮಾರು 50 ಲಕ್ಷ ರೂ.ಗಳನ್ನು ಖರ್ಚು ಮಾಡಿತ್ತು. ಆರಂಭದಲ್ಲಿ ಮೃತದೇಹವನ್ನು ತಮ್ಮ ಸ್ವಂತ ಮನೆಯಲ್ಲೇ ಫ್ರೀಜರ್‌ನಲ್ಲಿ ಇಡಲಾಗಿತ್ತು. ಆದರೆ, ವಾಸವಿದ್ದ ಕಟ್ಟಡವು ಮರುನಿರ್ಮಾಣಕ್ಕೆ ಒಳಗಾದ ಕಾರಣ, ಕುಟುಂಬಸ್ಥರು ಶವವಿದ್ದ ಫ್ರೀಜರ್ ಅನ್ನು ಮಲಾಡ್‌ನಲ್ಲಿರುವ ಪಾಲಿಕ್ಲಿನಿಕ್‌ಗೆ ಸ್ಥಳಾಂತರಿಸಿದ್ದರು. ಕಳೆದ ಒಂದು ತಿಂಗಳಿನಿಂದ ನವೀಕರಣಕ್ಕಾಗಿ ಕ್ಲಿನಿಕ್ ಮುಚ್ಚಲ್ಪಟ್ಟಿದ್ದರೂ ಮೃತದೇಹ ಮಾತ್ರ ಅಲ್ಲೇ ಇತ್ತು. ಈ ವಿಷಯ ಕ್ಲಿನಿಕ್ ಮಾಲೀಕರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಇದರಲ್ಲಿ ಯಾವುದೇ ಕೊಲೆ ಅಥವಾ ದುರುದ್ದೇಶದ ಸಂಚು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೃದ್ಧರು ನೈಸರ್ಗಿಕವಾಗಿಯೇ ಸಾವನ್ನಪ್ಪಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಕುಟುಂಬಸ್ಥರು ಹಾಜರುಪಡಿಸಿದ್ದಾರೆ. ಸದ್ಯ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ, ಇಷ್ಟು ವರ್ಷಗಳ ಕಾಲ ಮೃತದೇಹವನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡಿರುವುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದಾರೆ. ಮೃತದೇಹವನ್ನು ಅಮೆರಿಕಕ್ಕೆ ಕೊಂಡೊಯ್ಯಬೇಕೇ ಅಥವಾ ಅಂತ್ಯಕ್ರಿಯೆ ನೆರವೇರಿಸಬೇಕೇ ಎಂದು ನಿರ್ಧರಿಸಲು ಕುಟುಂಬಕ್ಕೆ ಕಾಲಾವಕಾಶ ನೀಡಲಾಗಿದ್ದು, ಸದ್ಯ ಕ್ಲಿನಿಕ್ ಬಳಿ ಭದ್ರತೆ ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ