ಅಮಿತ್ ಶಾ ವಿರುದ್ಧ ಸುಳ್ಳು ಆರೋಪ; ಕೆನಾಡಕ್ಕೆ ಎಚ್ಚರಿಕೆ ನೀಡಿದ ಭಾರತ

By Kannadaprabha News  |  First Published Nov 4, 2024, 8:15 AM IST

ಕೆನಡಾದಲ್ಲಿನ ಸಿಖ್ಖರನ್ನು ಟಾರ್ಗೆಟ್ ಮಾಡುವಂತೆ ಭಾರತದ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ ಎಂಬ ಕೆನಡಾ ಸಚಿವ ಡೇವಿಡ್ ಮಾರಿಸನ್ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


ನವದೆಹಲಿ: ‘ಕೆನಡಾದಲ್ಲಿನ ಸಿಖ್ಖರನ್ನು ಟಾರ್ಗೆಟ್‌ ಮಾಡುವಂತೆ ಸೂಚಿಸಿದ್ದೇ ಭಾರತದ ಗೃಹ ಸಚಿವ ಅಮಿತ್‌ ಶಾ’ ಎಂಬ ಕೆನಡಾ ಸಚಿವ ಡೇವಿಡ್‌ ಮಾರಿಸನ್‌ ಹೇಳಿಕೆಗೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂಥ ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆಗಳಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗಲಿದೆ ಎಂದು ಭಾರತ ಕೆನಡಾಕ್ಕೆ ಎಚ್ಚರಿಕೆ ನೀಡಿದೆ.

ಅಲ್ಲದೆ, ‘ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಸಂಭಾಷಣೆ ಕದ್ದಾಲಿಕೆ ಮತ್ತು ಚಲನವಲನಗಳ ಮೇಲೆ ನಿಗಾ ಇಡುವ ಮೂಲಕ ಅವರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಇದು ರಾಜತಾಂತ್ರಿಕ ಒಪ್ಪಂದಗಳಿಗೆ ಪೂರ್ಣ ವಿರುದ್ಧವಾದುದು’ ಎಂಬ ಎಚ್ಚರಿಕೆಯ ಸಂದೇಶವನ್ನೂ ಕೆನಡಾಕ್ಕೆ ರವಾನಿಸಿದೆ.

Latest Videos

ಕೆನಡಾ ಸಚಿವ ಮಾರಿಸನ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಸಚಿವ ಡೇವಿಡ್‌ ಮಾರಿಸನ್‌ ಇತ್ತೀಚೆಗೆ ಕೆನಡಾದ ಸಾರ್ವಜನಿಕ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿ ಮುಂದೆ ಹಾಜರಾಗಿ ಭಾರತದ ಗೃಹ ಸಚಿವ ಅಮಿತ್‌ ಶಾ ವಿರುದ್ಧ ನೀಡಿದ ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆಯನ್ನು ಭಾರತ ಸರ್ಕಾರ ತೀಕ್ಷ್ಣ ನುಡಿಗಳಲ್ಲಿ ಖಂಡಿಸುತ್ತದೆ. ಜೊತೆಗೆ ಭಾರತದ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಕೆನಡಾ ಅಧಿಕಾರಿಗಳು ಇಂಥ ಸುದ್ದಿಯನ್ನು ಸೋರಿಕೆ ಮಾಡಿದೆ. ಇದು ಹಾಲಿ ಕೆನಡಾ ಸರ್ಕಾರ ರಾಜಕೀಯ ಕಾರ್ಯಸೂಚಿಸ ಬಗ್ಗೆ ಭಾರತ ಸರ್ಕಾರ ಹೊಂದಿರುವ ನಿಲುವನ್ನು ಮತ್ತಷ್ಟು ಖಾತರಿಪಡಿಸಿದೆ. ಇಂಥ ಬೇಜಾವಾಬ್ದಾರಿ ವರ್ತನೆಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹರ್ದೀಪ್ ಸಿಂಗ್ ನಿಜ್ಜರ್‌ ಒಬ್ಬ ವಿದೇಶಿ ಉಗ್ರ: ಕೆನಡಾ ಪ್ರಧಾನಿ ಟ್ರುಡೋಗೆ ವಿಪಕ್ಷದ ತರಾಟೆ

ಅಲ್ಲದೆ ‘ಕಳೆದ ಕೆಲ ದಿನಗಳಿಂದ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಅವರ ಚಲನವಲನಗಳ ಮೇಲೆ ಕಾನೂನುಬಾಹಿರವಾಗಿ ನಿಗಾ ಇಡಲಾಗುತ್ತಿದೆ’ ಎಂದೂ ಜೈಸ್ವಾಲ್‌ ಆರೋಪ ಮಾಡಿದರು.

ಮಾರಿಸನ್‌ ಹೇಳಿದ್ದೇನು?:

ಇತ್ತೀಚೆಗೆ ಕೆನಡಾದ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಸಚಿವ ಮಾರಿಸನ್‌, ‘ಕೆನಡಾದಲ್ಲಿನ ಸಿಖ್ಖರ ಗುರಿಯಾಗಿಸಿ ಹಿಂಸಾಚಾರ ನಡೆಸುವಂತೆ, ಅವರನ್ನು ಬೆದರಿಸುವಂತೆ ಮತ್ತು ಅವರ ಕುರಿತ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇ ಭಾರತದ ಗೃಹ ಸಚಿವ ಅಮಿತ್‌ ಶಾ. ಈ ವಿಷಯ ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾಗಲು ನಾನು ನೀಡಿದ್ದ ಮಾಹಿತಿಯೇ ಕಾರಣ’ ಎಂದು ಹೇಳಿದ್ದರು.

ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟು: ಕೆನಡಾದಲ್ಲಿ ಭಾರತೀಯರ ದೀಪಾವಳಿ ಆಚರಣೆ ರದ್ದು!

click me!