ಭಾರತದಲ್ಲಿ ಕ್ಷಯರೋಗ ಪ್ರಮಾಣ ಇಳಿಮುಖವಾದ್ರೂ ದೇಶದ ಮುಂದಿರುವ ಸವಾಲುಗಳೇನು?

By Kannadaprabha News  |  First Published Nov 4, 2024, 7:25 AM IST

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಕ್ಷಯರೋಗ ಪ್ರಮಾಣ ಇಳಿಮುಖವಾಗುತ್ತಿದೆ. ಆದರೆ, ಇನ್ನೂ ಪ್ರತಿ ಲಕ್ಷಕ್ಕೆ 195 ಜನರಲ್ಲಿ ಟಿ.ಬಿ. ಕಂಡುಬರುತ್ತಿದೆ ಮತ್ತು 22 ಜನರು ಸಾವನ್ನಪ್ಪುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಮತ್ತು ವಾಯುಮಾಲಿನ್ಯ ನಿಯಂತ್ರಣದ ಮಹತ್ವವನ್ನು ಒತ್ತಿ ಹೇಳಲಾಗಿದೆ.


ನವದೆಹಲಿ: ಟ್ಯುಬರ್‌ಕ್ಯುಲೋಸಿಸ್‌ (ಟಿ.ಬಿ.-ಕ್ಷಯರೋಗ) ಸಾಂಕ್ರಾಮಿಕ ರೋಗ ಭಾರತದಲ್ಲಿ ವೇಗವಾಗಿ ಇಳಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಿಕೊಂಡಿದೆ. ಇದು ಮಹತ್ವದ ಸಂಗತಿ ಏಕೆಂದರೆ, ಜಗತ್ತಿನಲ್ಲೇ ಅತಿಹೆಚ್ಚು ಟಿ.ಬಿ. ರೋಗಿಗಳು, ಅಂದರೆ ಸುಮಾರು ಶೇ.25ರಷ್ಟು ಟಿ.ಬಿ. ರೋಗಿಗಳು ಭಾರತದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಈ ಹಿಂದೆ ಅಂದಾಜಿಸಿತ್ತು. ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ, ಚೀನಾ, ಫಿಲಿಪ್ಪೀನ್ಸ್‌, ಪಾಕಿಸ್ತಾನ ದೇಶಗಳಿವೆ. ಯಾವ ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಿದೆಯೋ ಆ ದೇಶದಲ್ಲಿ ಟಿ.ಬಿ. ರೋಗ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದಲ್ಲಿ ಸರ್ಕಾರದ ಕಠಿಣ ಪ್ರಯತ್ನದಿಂದ ಈ ರೋಗ 2015ರಿಂದ 2023ರ ನಡುವೆ ಶೇ.18ರಷ್ಟು ಕಡಿಮೆಯಾಗಿದೆ. ಇದು ದೊಡ್ಡ ಬದಲಾವಣೆ. ಆದರೆ, ಈಗಲೂ ಪ್ರತಿ ಲಕ್ಷಕ್ಕೆ 195 ಜನರಲ್ಲಿ ಟಿ.ಬಿ. ಕಂಡುಬರುತ್ತಿದೆ.

ಟಿ.ಬಿ. ಸೋಂಕಿತರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಿದೆಯಾದರೂ, ಈಗಲೂ ಪ್ರತಿ ಲಕ್ಷಕ್ಕೆ 22 ಜನರು ಇದರಿಂದ ಸಾವನ್ನಪ್ಪುತ್ತಿದ್ದಾರೆ. ಇದು, ಟಿ.ಬಿ. ರೋಗವನ್ನು ಭಾರತದಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆಯುವ ಪ್ರಮುಖ ಸಾಂಕ್ರಾಮಿಕ ರೋಗವನ್ನಾಗಿಸಿದೆ.

Latest Videos

undefined

ಇದನ್ನೂ ಓದಿ: ರಾಜಕೀಯ ಪುಡಾರಿಯ ರೀತಿ ಪ್ರಧಾನಿ ಮೋದಿ ಸುಳ್ಳು ಆರೋಪ: ಬಹಿರಂಗ ಚರ್ಚೆಗೆ ಬನ್ನಿ ಎಂದ ಸಿದ್ದರಾಮಯ್ಯ

ಭಾರತವು ಸಂಘಟಿತ ಪ್ರಯತ್ನದಿಂದ ಪೋಲಿಯೋ ಮುಕ್ತವಾಗಿದೆ. ಅದೇ ರೀತಿಯ ಪ್ರಯತ್ನ ಟಿ.ಬಿ. ವಿರುದ್ಧವೂ ನಡೆಯುತ್ತಿದೆ. ಆದರೆ, ಟ್ಯುಬರ್‌ಕ್ಯುಲೋಸಿಸ್ ಬ್ಯಾಕ್ಟೀರಿಯಾ ಪೋಲಿಯೋ ವೈರಸ್‌ಗಿಂತ ವೇಗವಾಗಿ ಹರಡುತ್ತದೆ. ಟಿ.ಬಿ. ಪೀಡಿತರು ಕೆಮ್ಮಿದರೆ ಅಥವಾ ಸೀನಿದರೆ, ಅದರಲ್ಲಿನ ಒಂದೆರಡು ಕಣಗಳು ಇನ್ನೊಬ್ಬರಿಗೆ ಸೋಂಕಿದರೂ ಟಿ.ಬಿ. ಅಂಟುತ್ತದೆ. ಹೀಗಾಗಿ ಶ್ವಾಸಕೋಶದ ಈ ಸೋಂಕು ವ್ಯಾಪಕವಾಗಿದೆ. ಇನ್ನು ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಅದೂ ಕೂಡ ಟಿ.ಬಿ. ಹೆಚ್ಚಲು ಕಾರಣ. ಆದ್ದರಿಂದ ಟಿ.ಬಿ. ನಿಯಂತ್ರಿಸಬೇಕು ಅಂದರೆ ರೋಗಪೀಡಿತರೆಲ್ಲರಿಗೂ ಕಡ್ಡಾಯವಾಗಿ ಚಿಕಿತ್ಸೆ ಸಿಗುವಂತೆ ಮಾಡುವುದು ಮಾತ್ರವಲ್ಲ, ವಾಯುಮಾಲಿನ್ಯವನ್ನೂ ನಿಯಂತ್ರಿಸಬೇಕಾಗುತ್ತದೆ.

ಟಿ.ಬಿ. ನಿಯಂತ್ರಣಕ್ಕೆಂದೇ ಎಲ್ಲಾ ರಾಜ್ಯಗಳಲ್ಲೂ ಪ್ರತ್ಯೇಕ ಕ್ಷಯರೋಗ ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರು.ಗಳನ್ನು ಇದರ ಉಚಿತ ಚಿಕಿತ್ಸೆಗಾಗಿ ವ್ಯಯಿಸುತ್ತಿದೆ. ಆದರೂ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಅರಿವಿನ ಕೊರತೆಯೇ ಕಾರಣ. ಏಕೆಂದರೆ ಟಿ.ಬಿ. ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದರೆ ಸಾವು ಸಂಭವಿಸುವುದಿಲ್ಲ. ಹೀಗಾಗಿ ಟಿ.ಬಿ. ಬಗ್ಗೆ ಅರಿವು ಮೂಡಿಸುವ ಮತ್ತು ಎಲ್ಲಾ ರೀತಿಯಲ್ಲೂ ಈ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಸಂಘಟಿತ ಪ್ರಯತ್ನವನ್ನು ಮುಂದುವರಿಸಬೇಕಿದೆ.

ಜಗತ್ತಿನ ಕಾಲು ಭಾಗದಷ್ಟು ಟಿ.ಬಿ. ರೋಗಿಗಳು ಭಾರತದಲ್ಲೇ ಇದ್ದಾರೆ. ಇದು ಭಾರತದಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆಯುವ ಸಾಂಕ್ರಾಮಿಕ ರೋಗಗಳಲ್ಲಿ ಒಂದು.

ಇದನ್ನೂ ಓದಿ: 2 ಸಾವಿರ ಜನರಿರುವ ಬೀದರ್‌ನ ಇಡೀ ಗ್ರಾಮವೇ ವಕ್ಫ್‌ ಆಸ್ತಿ: 200 ಕುಟುಂಬಕ್ಕೆ ಶಾಕ್!

click me!