ಮೈಸೂರಿನ ಮಾಜಿ ಬಸ್‌ ಕಂಡಕ್ಟರ್‌ ಸೇರಿ 45 ಅನನ್ಯ ತೆರೆಮರೆ ಸಾಧಕರಿಗೆ ಪದ್ಮ ಗೌರವ

Kannadaprabha News   | Kannada Prabha
Published : Jan 26, 2026, 04:42 AM IST
Padma Awards 2026

ಸಾರಾಂಶ

ಜಗತ್ತಿನ ಅತಿ ದೊಡ್ಡ ಮುಕ್ತ ಗ್ರಂಥಾಲಯ ಸ್ಥಾಪಿಸಿದ ಮಾಜಿ ಬಸ್‌ ಕಂಡಕ್ಟರ್‌ ಅಂಕೇಗೌಡ, ಏಷ್ಯಾದ ಮೊದಲ ಮಾನವ ಎದೆಹಾಲಿನ ಬ್ಯಾಂಕ್ ರಚಿಸಿದ ಮಕ್ಕಳ ವೈದ್ಯೆ ಅರ್ಮಿದಾ ಫರ್ನಾಂಡಿಸ್‌, 90 ವರ್ಷದ ಬುಡಕಟ್ಟು ಸಂಗೀತವಾದ್ಯದ ವಾದಕ ಭಿಕ್ಲ್ಯಾ ಲಡಾಕ್ಯ ಧಿಂಡಾ ಸೇರಿ 45 ಮಂದಿ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆ

ನವದೆಹಲಿ : ಜಗತ್ತಿನ ಅತಿ ದೊಡ್ಡ ಮುಕ್ತ ಗ್ರಂಥಾಲಯವನ್ನು ಸ್ಥಾಪಿಸಿದ ಮೈಸೂರಿನ ಮಾಜಿ ಬಸ್‌ ಕಂಡಕ್ಟರ್‌ ಅಂಕೇಗೌಡ, ಏಷ್ಯಾದ ಮೊದಲ ಮಾನವ ಎದೆಹಾಲಿನ ಬ್ಯಾಂಕ್ ರಚಿಸಿದ ಮಕ್ಕಳ ವೈದ್ಯೆ ಅರ್ಮಿದಾ ಫರ್ನಾಂಡಿಸ್‌, 90 ವರ್ಷದ ಬುಡಕಟ್ಟು ಸಂಗೀತವಾದ್ಯದ ವಾದಕ ಭಿಕ್ಲ್ಯಾ ಲಡಾಕ್ಯ ಧಿಂಡಾ ಸೇರಿ ದೇಶಾದ್ಯಂತ 45 ಮಂದಿ ಅಪರೂಪದ ಸಾಧಕರು 2026ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.

ವಾಡಿಕೆಯಂತೆ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರ್ಕಾರ 131 ಪದ್ಮ ಪ್ರಶಸ್ತಿಗಳ ಘೋಷಣೆ ಮಾಡಿದೆ. ಇವರಲ್ಲಿ ತೆರೆಮರೆ ಸಾಧಕರು 45. ಈ ಮೂಲಕ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅನನ್ಯ ಸಾಧಕರನ್ನು ಗುರುತಿಸಿ, ಗೌರವಿಸುವ ಸಂಪ್ರದಾಯವನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ.ಸ್ವದೇಶಿ ಪರಂಪರೆಯ ರಕ್ಷಣೆ, ಗಡಿ ರಾಜ್ಯಗಳಲ್ಲಿ ರಾಷ್ಟ್ರೀಯ ಸಮಗ್ರತೆಗೆ ಪ್ರೋತ್ಸಾಹ, ಬುಡಕಟ್ಟು ಭಾಷೆಗಳ ರಕ್ಷಣೆ, ದೇಶಿ ಸಮರ ಕಲೆಯಲ್ಲಿ ಸಾಧನೆ, ಅಳಿವಿನಂಚಿನಲ್ಲಿರುವ ಕಲೆಯ ಸಂರಕ್ಷಣೆ ಹೀಗೆ ಅನ್ಯಾನ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೋಡುತ್ತಿರುವ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಅಪರೂಪದ ಸಾಧಕರು:

ಛತ್ತೀಸ್‌ಗಢದ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಶಾಲೆ ಸ್ಥಾಪಿಸಿದ ಬುದ್ರಿ ಥತಿ, ಒಡಿಶಾದ ಸೆಂಥಾಲಿ ಭಾಷೆಯ ಸಾಹಿತಿ ಚರಣ್‌ ಹೆಂಬ್ರಂ, ಸಂಕೀರ್ಣವಾದ ಹಿತ್ತಾಳೆಯ ಕೆತ್ತನೆ ಕೆಲಸದಲ್ಲಿ ಪರಿಣತ ಮೊರಾದಾಬಾದ್‌ನ ಚಿರಂಜೀ ಲಾಲ್ ಯಾದವ್, ಗುಜರಾಥ್‌ನ ಸಾಂಪ್ರದಾಯಿಕ ಕಲೆ ‘ಮಾಣಭಟ್ಟ’ದ ವ್ಯಾಖ್ಯಾನಕಾರ ಧಾರ್ಮಿಕಲಾಲ್‌ ಚುನಿಲಾಲ್‌ ಪಾಂಡ್ಯ, ಆಫ್ರಿಕಾದಿಂದ ಭಾರತಕ್ಕೆ ಮಾನವ ವಲಸೆಯನ್ನು ಪತ್ತೆಹಚ್ಚಿದ ಹೈದರಾಬಾದ್ ತಳಿಶಾಸ್ತ್ರಜ್ಞ ಕುಮಾರಸಾಮಿ ತಂಗರಾಜ್, ಪ್ರಾಚೀನ ತಮಿಳು ಸಮರಕಲೆ ಸಿಲಂಬಮ್‌ನ ಪೋಷಕ ಪುದುಚೇರಿಯ ಕೆ. ಪಜನಿವೆಲ್, 60 ವರ್ಷಗಳಿಂದ ದೇಶಾದ್ಯಂತ ಹಿಂದಿ ಪ್ರಚಾರದಲ್ಲಿ ತೊಡಗಿರುವ ಹಿರಿಯ ಪತ್ರಕರ್ತ ಕೈಲಾಶ್ ಚಂದ್ರ ಪಂತ್‌ ಮೊದಲಾದ ಅನನ್ಯ ಸಾಧಕರು ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರೆಲ್ಲ ಅತ್ಯಂತ ಕಷ್ಟದ ಹಿನ್ನೆಲೆಯಿಂದ ಬಂದು ಸಾಧನೆಯ ಶಿಖರ ಏರಿದವರು ಎಂಬುದು ವಿಶೇಷ.

ವೀರಪ್ಪನ್‌ ಹಂತಕ ವಿಜಯ್‌ ಕುಮಾರ್‌ರಿಗೆ ಪದ್ಮ

ನವದೆಹಲಿ: ಕಾಡುಗಳ್ಳ ವೀರಪ್ಪನ್‌ ಸದೆಬಡಿಯಲು ತಮಿಳುನಾಡು ಸರ್ಕಾರ ರಚಿಸಿದ್ದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್‌) ಉಸ್ತುವಾರಿ ವಹಿಸಿದ್ದ ಕೆ.ವಿಜಯ್‌ ಕುಮಾರ್‌ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ಘೋಷಿಸಲಾಗಿದೆ.ವಿಜಯ್‌ ಕುಮಾರ್‌ ಅವರು ಎಸ್‌ಟಿಎಫ್‌ನೊಂದಿಗೆ ಸೇರಿ ವೀರಪ್ಪನ್‌ ಹತ್ಯೆಯಲ್ಲಿ ಪ್ರಮುಖ ತಯಾರಿಗಳು, ಯೋಜನೆಗಳನ್ನು ರೂಪಿಸಿದ್ದರು. ಇವರಿಗೆ 2005ರಲ್ಲಿ ರಾಷ್ಟ್ರಪತಿ ಶ್ರೌರ್ಯ ಪ್ರಶಸ್ತಿಯು ಲಭಿಸಿತ್ತು.

ಗಗನಯಾನಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ

ಪಿಟಿಐ ನವದೆಹಲಿಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಭೇಟಿ ನೀಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಸೋಮವಾರ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಗಿದೆ.

ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 70 ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ, ಇದರಲ್ಲಿ 6 ಮಂದಿ ಮರಣೋತ್ತರವಾಗಿ ಗೌರವ ಪಡೆಯಲಿದ್ದಾರೆ.ಇವುಗಳಲ್ಲಿ 1 ಅಶೋಕ ಚಕ್ರ, 3 ಕೀರ್ತಿ ಚಕ್ರ, 1 ಮರಣೋತ್ತರ ಸೇರಿದಂತೆ 13 ಶೌರ್ಯ ಚಕ್ರ, ಒಂದು ‘ಬಾರ್ ಟು’ ಸೇನಾ ಪದಕ (ಶೌರ್ಯ) ಮತ್ತು 44 ಸೇನಾ ಪದಕಗಳು (ಶೌರ್ಯ) ಸೇರಿವೆ.ಕೀರ್ತಿ ಚಕ್ರ ಪ್ರಶಸ್ತಿ ವಿಜೇತರಲ್ಲಿ ಮೇಜರ್ ಅರ್ಶ್‌ದೀಪ್ ಸಿಂಗ್, ನಾಯಬ್ ಸುಬೇದಾರ್ ದೋಲೇಶ್ವರ ಸುಬ್ಬಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಲೈಂಗಿಕ ಕಿರುಕುಳ! ನಟಿಗೆ ಡ್ರಗ್ಸ್ ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಣ!
ಬಿಜೆಪಿ ಅಲ್ಲ, ಈ ಬಾರಿ ಸಿಪಿಎಂ? ಶಶಿ ತರೂರ್ 'ಕಮ್ಯುನಿಸ್ಟ್' ಆಗ್ತಾರಾ? ಏನಿದು 'ದುಬೈ' ಕನೆಕ್ಷನ್?