ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ 600 ಕೋಟಿ ರೂ. ಅಕ್ರಮ ಪತ್ತೆ..!

By Kannadaprabha News  |  First Published Mar 12, 2023, 11:21 AM IST

ನೌಕರಿಗಾಗಿ ಭೂಮಿ ಹಗರಣದಲ್ಲಿ ಲಾಲೂ 600 ಕೋಟಿ ರೂ. ಅಕ್ರಮ ಪತ್ತೆಯಾಗಿದೆ. ಈ ಪೈಕಿ 200 ಕೋಟಿ ರೂ. ಮೌಲ್ಯದ ಜಮೀನನ್ನು ಲಾಲೂ ಪಡೆದಿದ್ದರು. ಹಾಗೂ,  ನೌಕರಿ ಆಕಾಂಕ್ಷಿಗಳಿಂದ 7.5 ಲಕ್ಷಕ್ಕೆ ಭೂಮಿ ಪಡೆದು 3.5 ಕೋಟಿಗೆ ಸೇಲ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


ನವದೆಹಲಿ (ಮಾರ್ಚ್ 12,2023): ಲಾಲೂ ಪ್ರಸಾದ್‌ ಯಾದವ್‌ ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ‘ಉದ್ಯೋಗಕ್ಕಾಗಿ ಭೂಮಿ’ ಹಗರಣದ ವೇಳೆ 200 ಕೋಟಿ ರು. ಮೌಲ್ಯದ ಜಮೀನನ್ನು ಅವರು ಪಡೆದುಕೊಂಡಿದ್ದರು. ಇದು ಸೇರಿ ಸುಮಾರು 600 ಕೋಟಿ ರು. ಮೌಲ್ಯದ ಅಕ್ರಮ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಹೇಳಿದೆ.
ರೈಲ್ವೆಯಲ್ಲಿ (Railway) ಉದ್ಯೋಗ (Job) ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಭೂಮಿಯನ್ನು (Land) ‘ಲಂಚ’ ರೂಪದಲ್ಲಿ ಪುಕ್ಕಟೆಯಾಗಿ ಅಥವಾ ಕಡಿಮೆ ಬೆಲೆಗೆ ಪಡೆಯಲಾಗುತ್ತಿತ್ತು. ಇದನ್ನೇ ‘ಉದ್ಯೋಗಕ್ಕಾಗಿ ಭೂಮಿ ಹಗರಣ’ (Land for Job Scam) ಎನ್ನಲಾಗುತ್ತದೆ.

ಕಳೆದ 2 ದಿನಗಳಿಂದ ಲಾಲೂ ಪುತ್ರ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ (Tejaswi Yadav) ಹಾಗೂ ಲಾಲೂ ಅವರ 3 ಪುತ್ರಿಯರ ಆಸ್ತಿಪಾಸ್ತಿಗಳ ಮೇಲೆ ಬಿಹಾರ, ಜಾರ್ಖಂಡ್‌, ಮುಂಬೈ ಹಾಗೂ ದಿಲ್ಲಿ ಸುತ್ತಮುತ್ತ 24 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿದೆ. ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ., ‘ಆಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲಾಲೂ ಅವರು ಪಡೆದಿದ್ದ ಜಮೀನಿನ ಮೌಲ್ಯ ಅಂದಾಜು 200 ಕೋಟಿ ರೂಪಾಯಿ. ಇದು ಸೇರಿ ದಾಳಿಯ ವೇಳೆ 600 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆ ಮಾಡಲಾಗಿದೆ. ಲೆಕ್ಕಪತ್ರವಿಲ್ಲದ 1 ಕೋಟಿ ರು. ನಗದು, 1900 ಡಾಲರ್‌ ವಿದೇಶಿ ಕರೆನ್ಸಿ, 540 ಗ್ರಾಂ ಚಿನ್ನ, 1.25 ಕೋಟಿ ರೂ. ಮೌಲ್ಯದ 1.5 ಕೆಜಿ ಚಿನ್ನಾಭರಣ ಹಾಗೂ ದಾಖಲೆ ಪತ್ತೆ ಮಾಡಲಾಗಿದೆ’ ಎಂದಿದೆ.

Tap to resize

Latest Videos

ಇದನ್ನು ಓದಿ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್‌: ರಾಬ್ಢಿ ದೇವಿ ವಿಚಾರಣೆ

‘ಗ್ರೂಪ್‌ ಡಿ ಹುದ್ದೆ ಅಭ್ಯರ್ಥಿಗಳ 4 ಜಮೀನುಗಳನ್ನು ಕೇವಲ 7.5 ಲಕ್ಷ ರೂ.ಗೆ ಲಾಲು ಕುಟುಂಬ ಖರೀದಿಸಿತ್ತು. ಅದನ್ನು ಆರ್‌ಜೆಡಿ ನಾಯಕನೊಬ್ಬನಿಗೆ 3.5 ಕೋಟಿ ರೂ.ಗೆ ಲಾಲು ಪತ್ನಿ ರಾಬ್ಡಿ ದೇವಿ ಮಾರಿದ್ದರು. ಬಂದ ಹಣವನ್ನು ಹೆಚ್ಚಾಗಿ ಲಾಲು ಪುತ್ರ ತೇಜಸ್ವಿ ಯಾದವ್‌ ಖಾತೆಗೆ ವರ್ಗಾಯಿಸಲಾಗಿತ್ತು’ ಎಂದು ಇ.ಡಿ. ಆರೋಪಿಸಿದೆ.

ಇದನ್ನೂ ಓದಿ: ಲಾಲೂ ಪ್ರಸಾದ್‌ ಯಾದವ್‌ಗೆ ಕಿಡ್ನಿದಾನ: ಅದೊಂದು ಮಾಂಸದ ತುಣುಕಷ್ಟೇ ಎಂದ ಪುತ್ರಿ ರೋಹಿಣಿ

click me!