
ನವದೆಹಲಿ(ಏ.25): ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ರಾಯೋಗಿಕವಾಗಿ ನಡೆಸಲಾದ ‘ಪ್ಲಾಸ್ಮಾ ಥೆರಪಿ’ ಉತ್ತೇಜಕ ಆರಂಭಿಕ ಫಲಿತಾಂಶ ನೀಡಿದೆ. ಇದರಿಂದ ಕೊರೋನಾ ಪೀಡಿತರಿಗೆ ಕಾರ್ಮೋಡದಲ್ಲಿ ಆಶಾಕಿರಣ ಮೂಡಿದಂತಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಆನ್‌ಲೈನ್ ಮೂಲಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೂ 2-3 ದಿನ ಫ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತದೆ. ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಪೀಡಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಮುಂದಿನ ವಾರ ಕೇಂದ್ರ ಸರ್ಕಾರದ ಅನುಮತಿ ಕೋರಲಾಗುವುದು. ಕೇಂದ್ರವು ಇದಕ್ಕೆ ಅನುಮತಿ ನೀಡುವ ವಿಶ್ವಾಸವಿದೆ’ ಎಂದರು.
‘10 ದಿನಗಳ ಹಿಂದೆ ಗಂಭೀರ ಸ್ಥಿತಿಯಲ್ಲಿದ್ದ 4 ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದೆವು. ಆರಂಭಿಕ ಫಲಿತಾಂಶ ಆಶಾದಾಯಕವಾಗಿದೆ. ಅವರ ಆರೋಗ್ಯ, ಉಸಿರಾಟ ಸುಧಾರಿಸಿದೆ. ನಾಲ್ವರಲ್ಲಿ ಇಬ್ಬರನ್ನು ಐಸಿಯುದಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ’ ಎಂದರು.
ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ!
‘ಆದರೆ ಕೊರೋನಾಗೆ ಇದರಿಂದ ಸಂಪೂರ್ಣ ಪರಿಹಾರ ಸಿಕ್ಕಿದೆ ಎಂದು ಜನ ಅರ್ಥೈಸಬಾರದು. ಇದು ಕೇವಲ ಆರಂಭಿಕ ಫಲಿತಾಂಶವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
ಏನಿದು ಪ್ಲಾಸ್ಮಾ ಥೆರಪಿ?:
ಕೊರೋನಾ ಪೀಡಿತನಾಗಿದ್ದ ವ್ಯಕ್ತಿಯೊಬ್ಬ ಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಆತನ ದೇಹದಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಗೊಂಡಿರುತ್ತದೆ. ಇಂಥ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾ ತೆಗೆದು ಅದನ್ನು ಮತ್ತೊಬ್ಬ ರೋಗಿಗೆ ನೀಡಲಾಗುತ್ತದೆ. ಈ ಮೂಲಕ ಆತನ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ. ಅದು ಫಲ ಕೊಟ್ಟರೆ ಆತ 2-3 ದಿನಗಳಲ್ಲಿ ಚೇತರಿಕೆ ಹಂತಕ್ಕೆ ತಲುಪುತ್ತಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ