Video: ಇಡೀ ಬಾಳೆ ತೋಟ ನಾಶ ಮಾಡಿದ್ರೂ, ಪುಟ್ಟ ಹಕ್ಕಿಗಳ ಗೂಡಿದ್ದ ಒಂದು ಗಿಡ ಬಿಟ್ಟ ಆನೆ!

By Suvarna NewsFirst Published Sep 11, 2021, 11:52 AM IST
Highlights

* ಕಾಡಾನೆಗಳ ದಾಳಿಗೆ ಬಾಳೆ ತೋಟವೇ ನಾಶ

* ಇಡೀ ತೋಟ ನಾಶವಾದರೂ ಅದೊಂದು ಗಿಡಕ್ಕೆ ಆಗಲಿಲ್ಲ ಹಾನಿ

* ಪುಟ್ಟ ಹಕ್ಕಿಯ ಗೂಡಿಗೆ ಹಾನಿ ಮಾಡಲಿಲ್ಲ ದೈತ್ಯ ಆನೆಗಳು

ಚೆನ್ನೈ(ಸೆ.11): ಕೆಲ ಕಾರಣಗಳಿಂದ ಆನೆಗಳನ್ನು ಸೌಮ್ಯ, ಮೃಧು ಸ್ವಭಾವದ ಪ್ರಾಣಿ ಎನ್ನಲಾಗುತ್ತದೆ, ಸದ್ಯ ತಮಿಳುನಾಡಿನಲ್ಲಿ ನಡೆದ ಘಟನೆಯೂ ಇದಕ್ಕೆ ಹೊರತಾಗಿಲ್ಲ. ಹೌದು ಕಾಡು ಆನೆಗಳ ಹಿಂಡೊಂದು ಬಾಳೆ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ಆನೆಗಳು ತೋಟದಲ್ಲಿ ಹಕ್ಕಿ ಗೂಡಿದ್ದ ಕೇವಲ ಒಂದು ಬಾಳೆ ಗಿಡ ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸಿದೆ. 

ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಲ್ಲಿನ ಸ್ಥಳೀಯರು ಆನೆಗಳ ದಾಳಿಯಿಂದ ಕಂಗಾಲಾಗಿದ್ದಾರೆ.

ತಮಿಳುನಾಡಿನ ಇರೋಡ್‌ ಜಿಲ್ಲೆಯ ಸತ್ಯಮಂಗಳ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿಲ್ಮುಂಡಿ ಕಾಡಿನಿಂದ ಐದು ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕಿವೆ. ಅಲ್ಲದೇ ಕೃಷ್ಣಸ್ವಾಮಿ ಎಂಬವರು ಬೆಳೆಸಿದ್ದ ಬಾಳೆ ತೋಟಕ್ಕೆ ನುಗ್ಗಿದ ಈ ಆನೆಗಳ ಹಿಂಡು ಸುಮಾರು 300 ಕ್ಕೂ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ. ಅಚ್ಚರಿ ಎಂಬಂತೆ ಇಷ್ಟೆಲ್ಲಾ ಹಾನಿಯುಂಟು ಮಾಡಿದ ಆನೆಗಳ ಗುಂಪು ಹಕ್ಕಿ ಗೂಡಿದ್ದ ಒಂದು ಬಾಳೆ ಗಿಡಕ್ಕೆ ಕಿಂಚಿತ್ತೂ ತಾಗದಂತೆ ತೆರಳಿವೆ.

ಈ ಘಟನೆಯ ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಕೂಡಾ ಶುಕ್ರವಾರದಂದು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೇಗೆ ಆನೆಗಳ ಹಿಂಡು ಇಡೀ ತೋಟವನ್ನು ನಾಶ ಮಾಡಿದರೂ, ಹಕ್ಕಿ ಗೂಡಿರುವ ಗಿಡವನ್ನು ಮುಟ್ಟದೇ ತೆರಳಿವೆ ಎಂಬ ಬಗ್ಗೆ ಗ್ರಾಮಸ್ಥರು ವಿವರಿಸಿದ್ದಾರೆ.

This is the reason as to why elephants are called gentle giants. Destroyed all the banana trees , except the one having nests.
Gods amazing Nature🙏

(Shared by ⁦⁩) pic.twitter.com/iK2MkOuvaM

— Susanta Nanda IFS (@susantananda3)

ಈ ವಿಡಿಯೋ ಶೇರ್ ಮಾಡಿಕೊಂಡಿರುವ ಸುಶಾಂತ್ ನಂದಾ ಇದೇ ಕಾರಣಕ್ಕೆ ಆಣೆಗಳನ್ನು ಸೌಮ್ಯ ಪ್ರಾಣಿಗಳೆನ್ನುವುದು. ಹಕ್ಕಿ ಘುಡಿದ್ದ ಗಿಡವನ್ನು ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸಿದೆ. ಇದುವೇ ನೋಡಿ ದೇವರು ಸೇಷ್ಟಿಸಿದ ಅದ್ಭುತ ಪ್ರಕೃತಿ ಎಂದಿದ್ದಾರೆ. 

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಪ್ರಾಣಿಗಳಲ್ಲಿರುವ ಕಾಳಜಿ, ಪ್ರೀತಿ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೇ ವೇಳೆವ ಕಳೆದ ವರ್ಷ ಜೂನ್‌ನಲ್ಲಿ ಕೇರಳದಲ್ಲಿ ನಡೆದ ಅಮಾನವೀಯ ಘಟನೆಯನ್ನೂ ಉಲ್ಲೇಖಿಸಲಾಗುತ್ತಿದೆ. ಒಂದೆಡೆ ಪ್ರಾಣಿಗಳು ಕಾಳಜಿ ತೋರುತ್ತಿದ್ದರೆ, ಮಾನವರು ಮಾತ್ರ ದಾನವರಂತೆ ವರ್ತಿಸುತ್ತಿದ್ದಾರೆಂದು ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಆನೆಗೆ ಸ್ಪೋಟಕ ತಿನ್ನಿಸಿದ್ದ ದುರುಳರು

2020ರ ಜೂನ್ 3ರಂದು ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಗರ್ಭಿಣಿ ಆನೆಯೊಂದು ಆಹಾರ ಹುಡುಕುತ್ತಾ ಕಾಡಿನಿಂದ ಹೊರ ಬಂದಿತ್ತು. ಹೀಗಿರುವಾಗ ಕೆಲ ದುರುಳರು ಪಟಾಕಿ ತುಂಬಿದ್ದ ಹಣ್ಣನ್ನು ಆನೆಗೆ ತಿನ್ನಿಸಿದ್ದರು. ಪಠಾಕಿ ತಿಂದು ಗಾಯಗೊಂಡಿದ್ದ ಆನೆ ನೋವಿನಿಂದ ಇಡೀ ಗ್ರಾಮದಲ್ಲಿ ಹೆಜ್ಜೆ ಹಾಕಿದೆ. ಹೀಗಿದ್ದರೂ ಯಾರೊಬ್ಬರಿಗೂ ಅದು ಹಾನಿಯುಂಟು ಮಾಡಿಲ್ಲ. ಅಂತಿಮವಾಗಿ ನೋವು ತಡೆಯಲಾರದ ಗರ್ಣಿಣಿ ಆನೆ ವೆಲಿಯಾರ್ ನದಿಗಿಳಿದು ನಿಂತಿತ್ತು. ಅಲ್ಲೇ ಸ್ಫೋಟಕ ಸಿಡಿದು ಸಾವನ್ನಪ್ಪಿತ್ತು. ಅಂದಿನ ಆ ಘಟನೆ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಮನುಷ್ಯರನ್ನು ನಂಬಿ ಹಣ್ಣು ತಿಂದ ಗರ್ಭಿಣಿ ಆನೆಯ ನೋವು ಎಲ್ಲರ ಹೃದಯ ಹಿಂಡಿತ್ತು. 

click me!