ತಟ್ಟೆ ತಗೊಂಡು ಭಿಕ್ಷೆ ಬೇಡಿ... ಆಸ್ತಿಗಾಗಿ ಮಕ್ಕಳ ಕಿರುಕುಳ ತಾಳಲಾರದೇ ಸಾವಿಗೆ ಶರಣಾದ ವೃದ್ಧ ದಂಪತಿ

By Anusha Kb  |  First Published Oct 11, 2024, 9:40 AM IST

ಆಸ್ತಿಗಾಗಿ ಮಕ್ಕಳ ಕಿರುಕುಳ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಇಬ್ಬರು ತಮ್ಮದೇ ಮನೆಯ ನೀರಿನ ಟ್ಯಾಂಕ್‌ಗೆ ಹಾರುವ ಮೂಲಕ ಸಾವಿಗೆ ಶರಣಾಗಿದ್ದಾರೆ. 


ಆಸ್ತಿಗಾಗಿ ಮಕ್ಕಳ ಕಿರುಕುಳ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಇಬ್ಬರು ತಮ್ಮದೇ ಮನೆಯ ನೀರಿನ ಟ್ಯಾಂಕ್‌ಗೆ ಹಾರುವ ಮೂಲಕ ಸಾವಿಗೆ ಶರಣಾಗಿದ್ದಾರೆ. ಈ ವೃದ್ಧ ದಂಪತಿ ಸಾಯುವ ಮೊದಲು ಡೆತ್‌ನೋಟ್‌ ಬರೆದಿಟ್ಟಿದ್ದು ಮನ ಕಲಕುವಂತಿದೆ. ಅದರಲ್ಲಿ ತಾವೇ ಮುದ್ದು ಮಾಡಿ ಬೆಳೆಸಿದ ಮಕ್ಕಳು ಆಸ್ತಿಗಾಗಿ ನಮಗೆ ಈ ಇಳಿವಯಸ್ಸಿನಲ್ಲಿ ಯಾವ ರೀತಿಯ ಹಿಂಸೆ ನೀಡಿದರು ಎಂಬುದನ್ನು ದಂಪತಿ ಬರೆದಿದ್ದು, ಅದನ್ನು ಗೋಡೆಯಲ್ಲಿ ಸಿಕ್ಕಿಸಿ ವೃದ್ಧ ದಂಪತಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ತಮ್ಮ ಗಂಡು ಮಕ್ಕಳು ಹಾಗೂ ಸೊಸೆಯಂದಿರು ತಮ್ಮನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕನಿಷ್ಠ ಐದು ಬಾರಿ ಥಳಿಸಿದ್ದಾರೆ.  ಅಲ್ಲದೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಆಹಾರವನ್ನು ನೀಡುವುದನ್ನು ನಿಲ್ಲಿಸಿದರು. ಅಲ್ಲದೇ ಜನ್ಮ ಕೊಟ್ಟ ತಾಯಿಗೆ ತಟ್ಟೆ ತೆಗೆದುಕೊಂಡು ಎಲ್ಲಾದರು ಭಿಕ್ಷೆ ಬೇಡಲು ಹೋಗುವಂತೆ ಹೇಳಿದ್ದರು. ಮಕ್ಕಳ ಈ ಎಲ್ಲಾ ಕಿರುಕುಳ ಸಹಿಸಿಕೊಳ್ಳಲಾಗದೇ ದಂಪತಿ ಈಗ ಸಾವಿಗೆ ಶರಣಾಗಿದ್ದಾರೆ.  ಮೃತ ದಂಪತಿಯನ್ನು 70 ವರ್ಷದ ಹಜರಿರಾಮ್ ಬಿಷ್ಣೋಯಿ ಹಾಗೂ ಅವರ ಪತ್ನಿ 68 ವರ್ಷದ ಛವ್ಲಿ ದೇವಿ ಎಂದು ಗುರುತಿಸಲಾಗಿದೆ. ಇವರು ರಾಜಸ್ಥಾನದ ನಾಗೂರ್‌ನಲ್ಲಿ ವಾಸ ಮಾಡುತ್ತಿದ್ದರು. ಅವರ ಮೃತದೇಹವನ್ನು ಕರ್ನಿ ಕಾಲೋನಿಯಲ್ಲಿದ್ದ ಅವರದೇ ಮನೆಯ ನೀರಿನ ಟ್ಯಾಂಕ್‌ನಿಂದ ಹೊರ ತೆಗೆಯಲಾಗಿದೆ. ಈ ದಂಪತಿಗೆ ಎರಡು ಹೆಣ್ಣು ಎರಡು ಗಂಡು ಹೀಗೆ ಒಟ್ಟು ನಾಲ್ವರು ಮಕ್ಕಳಿದ್ದರು. 

Tap to resize

Latest Videos

ಈ ದಂಪತಿ ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಪುಟಗಳ ಡೆತ್‌ನೋಟ್‌ ಬರೆದು ಮನೆಯ ಗೋಡೆಯಲ್ಲಿ ಸಿಕ್ಕಿಸಿಟ್ಟಿದ್ದರು. ಅವರ ಮಕ್ಕಳಲ್ಲಿ ಒಬ್ಬನಾದ ರಾಜೇಂದ್ರ ಎಂಬಾತ ಮೂರು ಬಾರಿ ಹಲ್ಲೆ ಮಾಡಿದ್ದಾನೆ ಹಾಗೆಯೇ ಮತ್ತೊಬ್ಬ ಮಗ ಎರಡು ಬಾರಿ ಹಲ್ಲೆ ಮಾಡಿದ್ದಾನೆ. ಅಲ್ಲದೇ  ಹೆಣ್ಣು  ಮಕ್ಕಳು ಕೂಡ ಇವರ ಮೇಲೆ ಕರುಣೆ ತೋರಿಲ್ಲ, ಈ ವಿಚಾರದ ಬಗ್ಗೆ ಮಾತನಾಡಿದರೆ ಅಥವಾ ದೂರು ನೀಡಲು ಮುಂದಾದರೆ ನಿದ್ರೆಯಲ್ಲೇ ಸಾಯಿಸಿಬಿಡುವುದಾಗಿ ಹೆದರಿಸಿದ್ದರು. 

ಡೆತ್‌ನೋಟ್‌ನಲ್ಲಿ ಪುತ್ರ ರಾಜೇಂದ್ರ ಆತನ ಪತ್ನಿ ರೋಶ್ನಿ, ಮತ್ತೊಬ್ಬ ಪುತ್ರ ಸುನೀಲ್ ಹಾಗೂ ಆತನ ಪತ್ನಿ ಅನಿತಾ ಹಾಗೂ ಇವರ ಮಗ ಪ್ರಣವ್ ಹಾಗೂ ಹೆಣ್ಣು ಮಕ್ಕಳಾದ ಮಂಜು ಹಾಗೂ ಸುನೀತಾ ಹಾಗೂ ಕೆಲ ಸಂಬಂಧಿಕರ ಹೆಸರನ್ನು ಕೂಡ ವೃದ್ಧ ದಂಪತಿ ಉಲ್ಲೇಖಿಸಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಸಂಪೂರ್ಣ ಆಸ್ತಿಯನ್ನು  ಮಕ್ಕಳು ಬಯಸಿದ್ದರು. ಇತ್ತ ಇದನ್ನು ಪಡೆಯುವುದಕ್ಕೆ ಏನೂ ಬೇಕಾದರೂ ಮಾಡಿ ಎಂದು ಮಕ್ಕಳಿಗೆ ಸಂಬಂಧಿಕರು ಹುರಿದುಂಬಿಸಿದ್ದರು ಎಂದು ದಂಪತಿ ದೂರಿದ್ದಾರೆ. 

ಈ ದುರುಳ ಮಕ್ಕಳು ಈಗಾಗಲೇ ದಂಪತಿ ಹೆಸರಿನಲ್ಲಿದ್ದ ಕಾರು ಹಾಗೂ ಮೂರು ಪ್ಲಾಟ್‌ಗಳನ್ನು ಜಗಳ ಹಾಗೂ ಮೋಸದಿಂದಲೇ ಅವರ ಹೆಸರಿಗೆ ಮಾಡಿಕೊಂಡಿದ್ದರು.  ಕಾರು ಮಗ ರಾಜೇಂದ್ರನ ಹೆಸರಿಗೆ ಸೇಲ್ ಮಾಡಿದಂತೆ ಮಾಡಿಕೊಂಡಿದ್ದಾರೆ ಫ್ಲಾಟ್‌ಗಳನ್ನು ಹೆಣ್ಣು ಮಕ್ಕಳಾದ ಮಂಜು, ಸುನೀತಾ ಹಾಗೂ ಮತ್ತೊಬ್ಬ ಮಗ ಸುನೀಲ್ ಹೆಸರಿಗೆ ಮಾಡಿಕೊಳ್ಳಲಾಗಿತ್ತು. 

ಅವರಿಂದ ಎಲ್ಲವನ್ನು ತೆಗೆದುಕೊಂಡ ಮೇಲೂ ಈ ವೃದ್ಧ ದಂಪತಿಗೆ ಮಕ್ಕಳು ಊಟ ಹಾಕುತ್ತಿರಲಿಲ್ಲ,  ಅಲ್ಲದೇ ಪ್ರತಿದಿನವೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು.  ಅಲ್ಲದೇ ಮಗ ಸುನೀಲ್  ತಟ್ಟೆ ತೆಗೆದುಕೊಂಡು ಭಿಕ್ಷೆ ಎತ್ತಿ ನಾನು ನಿಮಗೆ ಊಟ ಕೊಡಲ್ಲ ಎಂದು ಬೆದರಿಸಿದ ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಮಕ್ಕಳ ಈ ನಿರಂತರ ಕಿರುಕುಳದಿಂದ ನೊಂದ ದಂಪತಿ ಬದುಕು ಕೊನೆಗಾಣಿಸಿದ್ದಾರೆ. ಬಹುತೇಕರು ಮಕ್ಕಳು ಚೆನ್ನಾಗಿರಬೇಕು ಎಂದು ತಮ್ಮೆಲ್ಲಾ ಆಸೆಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಆಸ್ತಿ ಮಾಡುತ್ತಾರೆ. ಈ ಮಕ್ಕಳು ಮಾತ್ರ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದೇ ಅವರು ಮಾಡಿದ ಆಸ್ತಿಗಾಗಿ ಅವರನ್ನೇ ಸಾಯುವಂತೆ ಮಾಡಿದ್ದಾರೆ. 
 

click me!