Rajasthan Accident| ಬಸ್, ಟ್ಯಾಂಕರ್ ಡಿಕ್ಕಿ: ಅಪಘಾತದ ಬೆನ್ನಲ್ಲೇ ಸ್ಫೋಟ, 12 ಮಂದಿ ಸಜೀವ ದಹನ!

By Suvarna NewsFirst Published Nov 10, 2021, 3:02 PM IST
Highlights

* ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರೀ ಅಪಘಾತ

* ಬಸ್, ಟ್ಯಾಂಕರ್ ಡಿಕ್ಕಿ, ಮರುಕ್ಷಣವೇ ಸ್ಫೋಟ

* 12 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವು

ಜೈಪುರ(ನ.10): ರಾಜಸ್ಥಾನದ ಬಾರ್ಮರ್ (Rajasthan's Barmer) ಜಿಲ್ಲೆಯಲ್ಲಿ ಭಾರೀ ಅಪಘಾತದ ಸುದ್ದಿ ಬೆಳಕಿಗೆ ಬಂದಿದೆ. ಜೋಧ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jodhpur National Highway) ಬಸ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ (Accident) ನಂತರ ಬಸ್‌ಗೆ ಬೆಂಕಿ ತಗುಲಿ ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು-ಆಡಳಿತ ತಂಡ ಸ್ಥಳಕ್ಕೆ ಆಗಮಿಸಿದೆ.

ಸ್ಫೋಟದಿಂದ ಜನರು ಸಜೀವ ದಹನ

ವಾಸ್ತವವಾಗಿ, ಬಾರ್ಮರ್ (Barrmer) ಜಿಲ್ಲೆಯ ಜೋಧ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಂಡಿಯಾವಾಸ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ದುರಂತ ಸಂಭವಿಸಿದೆ. ವೇಗವಾಗಿ ಬಂದ ಬಸ್ ಮತ್ತು ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಮರುಕ್ಷಣವೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಎಷ್ಟು ಪ್ರಬಲವಾಗಿದೆ ಎಂದರೆ ಅದರಲ್ಲಿ 12 ಜನರು ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಅಪಘಾತದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ. ಅಪಘಾತದ ಸಮಯದಲ್ಲಿ ಎರಡೂ ವಾಹನಗಳಲ್ಲಿ ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎಲ್ಲ ಗಾಯಾಳುಗಳನ್ನು ಬಲೋತ್ರಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಜಿಲ್ಲೆಯ ಎಲ್ಲ ಉನ್ನತ ಅಧಿಕಾರಿಗಳು ತಲುಪಿದ್ದಾರೆ. ಸದ್ಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಅಪಘಾತದ ಸಂಪೂರ್ಣ ವಿವರ ನೀಡಿದ ಪ್ರತ್ಯಕ್ಷದರ್ಶಿ 

ಅಪಘಾತ ಸಂಭವಿಸಿದಾಗ ತಾನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಅಪಘಾತ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ ಬಸ್ ಬಲೋತ್ರಾದಿಂದ ಜೋಧ್‌ಪುರಕ್ಕೆ ಹೋಗುತ್ತಿತ್ತು ಎಂದು ಯುವಕರು ತಿಳಿಸಿದ್ದಾರೆ. ಇದರಲ್ಲಿ ಸುಮಾರು 25 ಪ್ರಯಾಣಿಕರು ಕುಳಿತಿದ್ದರು. ಬಸ್ಸು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ಆದರೆ ಮುಂದೆ ಇದ್ದ ಟ್ಯಾಂಕರ್ ರಾಂಗ್ ಸೈಡ್ ನಿಂದ ಬರುತ್ತಿದ್ದು ಬಸ್ ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದವು. ಡಿಕ್ಕಿಯ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಟ್ರಾಲಿ ಕೂಡ ಬೆಂಕಿಗೆ ಆಹುತಿಯಾಯಿತು. ತರಾತುರಿಯಲ್ಲಿ 10ರಿಂದ 12 ಪ್ರಯಾಣಿಕರನ್ನು ಹೊರ ತರಲಾಗಿದೆ, ಆದರೂ ಬೆಂಕಿ ಹೊತ್ತಿ ಉರಿಯುತ್ತಿದ್ದರಿಂದ ಎಲ್ಲರಿಗೂ ಹೊರಗೆ ಬರಲು ಸಾಧ್ಯವಾಗಿಲ್ಲ.

ಪರಿಹಾರ ಘೋಷಿಸಿದ ಪ್ರಧಾನಿ ಮೋದಿ:

ಇನ್ನು ಅಪಘಾತದ ಬೆನ್ನಲ್ಲೇ ದುಃಖ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಂಟುಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಗೊಮಡವರ ಕುಟುಂಬಕ್ಕೆ 50 ಸಾವಿರ ರೂಪಾಯಿ ಘೋಷಿಸಿದ್ದಾರೆ.

click me!