* ಗುಜರಾತ್‌ನಲ್ಲಿ ಇಂಥ ಹೊಸ ಪ್ರಯೋಗ
* ಮದ್ಯವ್ಯಸನಿಗಳಿಗೆ ಪಂಜರದಲ್ಲಿ ಕೂಡಿಹಾಕುವ ಶಿಕ್ಷೆ!
ಅಹಮದಾಬಾದ್(ಅ.21): ಗುಜರಾತಿನ(Gujarat) ಒಂದು ಸಮುದಾಯವು ಕುಡಿತಕ್ಕೆ ಒಳಗಾದವರ ಭೀತಿಯನ್ನು ಎದುರಿಸಲು ಹೊಸ ಸಾಮಾಜಿಕ ಪ್ರಯೋಗವನ್ನು ಅಳವಡಿಸಿಕೊಂಡಿದೆ. ಅಮಲಿನಲ್ಲಿ ಸಿಕ್ಕಿ ಬೀಳುವವರಿಗೆ ಪಂಜರಗಳನ್ನು(Cages) ಹಾಕುವುದು ಅಥವಾ ದಂಡ ವಸೂಲಿ ಮಾಡುವ ಕೆಲಸವನ್ನು ರಾಜ್ಯದ 24 ಹಳ್ಳಿಗಳಲ್ಲಿ ಆರಂಭಿಸಿದೆ.
ನ್ಯಾಟ್ ಸಮುದಾಯ ಈ ಹೊಸ ಮಾದರಿಯನ್ನು ಅನುಸರಿಸುತ್ತಿದ್ದು ಈ ಮಾದರಿ ಕುಡಿತದ ಚಟದಿಂದ ಜನರನ್ನು ವಿಮುಕ್ತಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಮದ್ಯ ಸೇವಿಸಿದವರಿಗೆ 1,200 ರು ದಂಡ ವಿಧಿಸುವ ಹಾಗೂ ಪಂಜರದೊಳಗೆ ಕೂಡಿ ಹಾಕುವ ಯೋಜನೆಯನ್ನು 2019ರಲ್ಲೇ ಮುಂದಿಟ್ಟಿತ್ತು ಎಂದು ಮೋತಿಪುರ್ ಗ್ರಾಮದ ಸರಪಂಚ ಬಾಬು ನಾಯಕ್ ಹೇಳಿದರು.
ಗುಜರಾತ್‌ನಲ್ಲಿ(Gujarat) ಮದ್ಯ(Liquor) ಸಂಪೂರ್ಣ ನಿಷೇಧವಿದೆ. ಆದರೂ ಈ ಸಮುದಾಯದಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾದ್ದರಿಂದ ಈ ಯೋಜನೆ ಮತ್ತೆ ಜಾರಿಗೆ ಬಂದಿದೆ.
ಕುಡಿದು ಗ್ರಾಮ ಪ್ರವೇಶಿಸುವವರನ್ನು ಪಂಜರಗಳಲ್ಲಿ ಮುಂಜಾನೆಯವರೆಗೂ ಕೂಡಿ ಹಾಕಲಾಗುತ್ತದೆ ಹಾಗೂ ಅವರಿಗೆ ಕುಡಿಯಲು ಕೇವಲ 1 ಬಾಟಲ್ ನೀರು ಮಾತ್ರ ನೀಡಲಾಗುತ್ತದೆ. ಈ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು ವರ್ಷದಿಂದ ವರ್ಷಕ್ಕೆ ಕುಡಿಯುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಹಾಗೂ ಕೌಟುಂಬಿಕ ಕಲಹಗಳು ಕಡಿಮೆಯಾಗಿವೆ ಎಂದು ಅವರು ಹೇಳಿದ್ದಾರೆ.