ಕುಡಿದ ಚಾಲಕರು ಉಗ್ರರಿದ್ದಂತೆ : ಪೊಲೀಸ್ ಆಯಕ್ತ ಸಜ್ಜನರ್‌ ಕಿಡಿ

Kannadaprabha News   | Kannada Prabha
Published : Oct 27, 2025, 06:36 AM IST
Vishwanath Sajjanar police

ಸಾರಾಂಶ

ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಬಸ್‌ ಅಪಘಾತದಲ್ಲಿ 20 ಅಮಾಯಕರು ಸಾವನ್ನಪ್ಪಿದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈದ್ರಾಬಾದ್‌ ಪೊಲೀಸ್‌ ಆಯುಕ್ತ ವಿ.ಸಿ.ಸಜ್ಜನರ್‌, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವ ಚಾಲಕರು ಉಗ್ರರಿದ್ದಂತೆ ಎಂದಿದ್ದಾರೆ.

ಹೈದ್ರಾಬಾದ್‌: ಇತ್ತೀಚೆಗೆ ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಭೀಕರ್‌ ಬಸ್‌ ಅಪಘಾತದಲ್ಲಿ 20 ಅಮಾಯಕರು ಸಾವನ್ನಪ್ಪಿದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈದ್ರಾಬಾದ್‌ ಪೊಲೀಸ್‌ ಆಯುಕ್ತ ವಿ.ಸಿ.ಸಜ್ಜನರ್‌, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವ ಚಾಲಕರು ಉಗ್ರರಿದ್ದಂತೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಮೂಲದ ಸಜ್ಜನರ್‌, ‘20 ಜನರ ಬಲಿ ಪಡೆದ ಕರ್ನೂಲ್‌ ಬಸ್‌ ದುರಂತ, ನಿಜ ಅರ್ಥದಲ್ಲಿ ಅಪಘಾತವಲ್ಲ. ಅದೊಂದು ಕುಡಿದ ಮತ್ತಿನಲ್ಲಿದ್ದ ಬೈಕ್ ಸವಾರ, ತನ್ನ ಬೇಜವಾಬ್ದಾರಿಯುತ ಮತ್ತು ಗೊತ್ತುಗುರಿಯಿಲ್ಲದೆ ವಾಹನ ಚಲಾವಣೆ ಮೂಲಕ ನಡೆಸಿದ, ತಡೆಯಬಹುದಾಗಿದ್ದ ಹತ್ಯಾಕಾಂಡ. ಇದು ರಸ್ತೆ ಅಪಘಾತವಲ್ಲ, ಬದಲಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಕುಟುಂಬವನ್ನೇ ಬಲಿ ಪಡೆದ, ಕುಡಿದ ಮತ್ತಿನಲ್ಲಿದ್ದ ಸವಾರನ ಅಜಾಗರೂಕತೆಯ ಘಟನೆ. ಆರೋಪಿ ಬೈಕ್‌ ಚಾಲಕ ಮಧ್ಯರಾತ್ರಿ 2.24ಕ್ಕೆ ಪೆಟ್ರೋಲ್‌ ಬಂಕ್‌ಗೆ ಆಗಮಿಸಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಆತ ಚಲಾಯಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಅಪಘಾತವಾಗಿದೆ. 2.39ಕ್ಕೆ ಆತನ ಬೈಕ್ ಮೇಲೆ ಬಸ್‌ ಹತ್ತಿ, ಬೆಂಕಿ ಹೊತ್ತಿಕೊಂಡು ಅಗ್ನಿಗೆ ಆಹುತಿಯಾಗಿದೆ. ಕುಡಿದು ವಾಹನ ಚಲಾಯಿಸುವ ಆತನ ನಿರ್ಧಾರ, ಊಹಿಸಲಾಗದ ಅನಾಹುತಕ್ಕೆ ಕಾರಣವಾಗಿದೆ. ಹೀಗಾಗಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವ ಚಾಲಕರು ಉಗ್ರರಿದ್ದಂತೆ ಎಂಬ ಹೇಳಿಕೆಗೆ ನಾನು ಬದ್ಧ. ಏಕೆಂದರೆ ಅವರು ಜೀವಗಳನ್ನು, ಕುಟುಂಬಗಳನ್ನು ಮತ್ತು ಭವಿಷ್ಯವನ್ನೇ ನಾಶ ಮಾಡುತ್ತಾರೆ. ಇಂಥ ಘಟನೆಯನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ನಕಲಿ ದಾಖಲೆ ಸಲ್ಲಿಸಿ ಡಿಎಲ್‌ ಪಡೆದುಕೊಂಡಿದ್ದ ಬಸ್‌ ಚಾಲಕ

ಹೈದರಾಬಾದ್‌: ಕರ್ನೂಲ್‌ನಲ್ಲಿ 20 ಜನರನ್ನು ಬಲಿ ಪಡೆದ ಬಸ್‌ನ ಚಾಲಕ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಚಾಲನಾ ಪರವಾನಗಿ ಪಡೆದುಕೊಂಡಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಪ್ರಕರಣ ಸಂಬಂಧ ಬಂಧಿತ ಮಿರಿಯಾಲಾ ಲಕ್ಷ್ಮಯ್ಯ, 5ನೇ ತರಗತಿ ಫೇಲ್‌ ಆಗಿದ್ದ. ಆದರೆ ತಾನು ಎಸ್‌ಎಸ್‌ಎಲ್‌ಸಿ ಉತ್ತೀರ್ಣನಾಗಿರುವುದಾಗಿ ಹೇಳಿ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಡಿಎಲ್‌ ಪಡೆದುಕೊಂಡಿದ್ದ ಎಂಬುದು ಕಂಡುಬಂದಿದೆ.

ಮದ್ಯಸೇವನೆ ದೃಢ:

ಈ ನಡುವೆ ಬಸ್‌ ಅಪಘಾತಕ್ಕೆ ಕಾರಣವಾದ ಬೈಕ್‌ ಸವಾರ ಶಿವಶಂಕರ್‌ ಮತ್ತು ಹಿಂಬದಿ ಸವಾರ ಎರಿಸ್ವಾಮಿ ಇಬ್ಬರೂ ಪಾನಮತ್ತರಾಗಿದ್ದರು ಎಂಬುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ಅಪಘಾತ ನಡೆಯುವುದಕ್ಕೂ ಮುನ್ನ ಇಬ್ಬರು ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿ ಮಾಡಿದ್ದ ಸಿಸಿಟೀವಿ ದೃಶ್ಯ ಕೂಡಾ ಸಿಕ್ಕಿದೆ.

400 ಬಸ್‌ ತಪಾಸಣೆ, 40 ಬಸ್‌ ವಶ

ಹೈದ್ರಾಬಾದ್: ಕರ್ನೂಲ್‌ ದುರಂತ ಬೆನ್ನಲ್ಲೇ ತೆಲಂಗಾಣ ಸಾರಿಗೆ ಇಲಾಖೆ ಅಧಿಕಾರಿಗಳು, ಎರಡು ದಿನದಲ್ಲಿ 400ಕ್ಕೂ ಹೆಚ್ಚು ಖಾಸಗಿ ಬಸ್ಸುಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಸ್ಸಿನ ತುರ್ತು ದ್ವಾರ, ಅಗ್ನಿಶಾಮಕ ವ್ಯವಸ್ಥೆ, ಗಾಜು ಪುಡಿಗಟ್ಟುವ ಸುತ್ತಿಗೆ, ಆರ್‌ಸಿ, ಫಿಟ್ನೆಸ್‌ ಸರ್ಟಿಫಿಕೇಟ್‌, ಚಾಲಕರ ಡಿಎಲ್‌ ಸೇರಿ ಹಲವು ಅಂಶಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ನಿಯಮ ಉಲ್ಲಂಘಿಸಿದ್ದ 40 ಬಸ್ಸು, 4 ಕಾರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 15 ಲಕ್ಷ ರು.ಗೂ ಹೆಚ್ಚಿನ ದಂಡ ವಿಧಿಸಿದ್ದಾರೆ.

23000 ರು. ದಂಡ: ಶುಕ್ರವಾರ ನುಸುಕಿನ ವೇಳೆ ಅಪಘಾತಕ್ಕೀಡಾದ ಬೆಂಗಳೂರಿಗೆ ಹೊರಟಿದ್ದ ಬಸ್ಸಿನ ಮೇಲೆ 16 ಪ್ರಕರಣಗಳಿದ್ದು, 23,000 ರು. ದಂಡ ಬಾಕಿ ಇತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..