
ವಾಷಿಂಗ್ಟನ್: ರಷ್ಯಾದಿಂದ ಚೀನಾ ಸೇರಿದಂತೆ ಹಲವು ದೇಶಗಳು ಭಾರೀ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದ್ದರೂ, ಕೇವಲ ಭಾರತವನ್ನು ಮಾತ್ರ ಅಮೆರಿಕ ಏಕೆ ಗುರಿಯಾಗಿಸಿಕೊಂಡಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚಿಕೊಂಡಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರು, ‘ಚೀನಾ ಸೇರಿದಂತೆ ಹಲವು ದೇಶಗಳು ರಷ್ಯಾ ತೈಲ ಖರೀದಿ ಮಾಡುತ್ತಿದ್ದರೂ ಭಾರತಕ್ಕೆ ಮಾತ್ರ ಏಕೆ ಹೆಚ್ಚಿನ ತೆರಿಗೆ ಹಾಕಲಾಗಿದೆ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಟ್ರಂಪ್, ‘ಭಾರತದ ಮೇಲೆ ತೆರಿಗೆ ಹಾಕಿ ಇನ್ನೂ ಕೇವಲ 8 ಗಂಟೆಯಷ್ಟೇ ಆಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ. ಮುಂದಿನ ದಿನಗಳಲ್ಲಿ ನೀವು ಇಂಥ ಸಾಕಷ್ಟು ಬೆಳವಣಿಗೆ ಕಾಣಲಿದ್ದೀರಿ. 2ನೇ ಹಂತದ ತೆರಿಗೆಗಳು ಜಾರಿಯಾಗಲಿವೆ’ ಎಂದಷ್ಟೇ ಹೇಳಿದ್ದಾರೆ.
ಇನ್ನು, ‘ರಷ್ಯಾ- ಉಕ್ರೇನ್ ನಡುವೆ ಸಂಧಾನ ಏರ್ಪಟ್ಟರೆ ಭಾರತದ ಮೇಲಿನ ತೆರಿಗೆ ಕಡಿತ ಮಾಡಲಾಗುವುದೇ?’ ಎಂಬ ಪ್ರಶ್ನೆಗೆ, ‘ಅದನ್ನು ನಂತರ ನಿರ್ಧರಿಸಲಾಗುವುದು. ಇದೀಗ ಭಾರತ ಶೇ.50ರಷ್ಟಡು ತೆರಿಗೆ ಪಾವತಿಸಬೇಕಿದೆ’ ಎಂದಿದ್ದಾರೆ.
ಟ್ರಂಪ್ ಹೇಳಿಕೆಗೆ ಭಾರತ ಮನ್ನಣೆ ನೀಡದೇ ಹೋಗಿದ್ದು ತೆರಿಗೆ ದಾಳಿಗೆ ಕಾರಣ
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಕನಿಷ್ಠ 30 ಬಾರಿ ಹೇಳಿಕೆ ನೀಡಿದ್ದ ಟ್ರಂಪ್ ಹೇಳಿಕೆಗೆ ಭಾರತ ಮನ್ನಣೆ ನೀಡದೇ ಹೋಗಿದ್ದು ಅವರು ಭಾರತದ ಮೇಲೆ ಹೆಚ್ಚಿನ ತೆರಿಗೆ ದಾಳಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಅಮೆರಿಕ ವಿಲ್ಸನ್ ಸೆಂಟರ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮೈಕೆಲ್ ಕುಗೆಲ್ಮನ್ ಮಾತನಾಡಿದ್ದು, ‘ಇದು ಭಾರತ ಮತ್ತು ಅಮೆರಿಕ ಕಳೆದ ಎರಡು ದಶಕಗಳಲ್ಲಿ ಎದುರಿಸಿದ ಅತ್ಯಂತ ಬಿಕ್ಕಟ್ಟಿನ ಸಮಯ. ಉಭಯ ದೇಶಗಳ ಸಂಬಂಧದಲ್ಲಿ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದೆ. ಇತ್ತೀಚೆಗೆ ಈ ದೇಶಗಳ ನಡುವೆ ಸಂಬಂಧ ಹೇಗೆ ಬೆಳೆಯುತ್ತಿದೆ ಎನ್ನುವುದನ್ನು ಗಮನಿಸಿದರೆ ಈ ಘೋಷಣೆ ಅಚ್ಚರಿಯಲ್ಲ’ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಟ್ರಂಪ್ ಕದನ ವಿರಾಮ ಸುಳ್ಳು ಭಾರತ ಒಪ್ಪದಿರುವುದು ಕಾರಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ