6.5 ಟನ್‌ ತೂಕದ ಟ್ರಂಪ್‌ ಕಾರಿಂದ ಆಗ್ರಾದಲ್ಲಿ ನಡುಕ!

By Kannadaprabha News  |  First Published Feb 21, 2020, 8:08 AM IST

ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಪತ್ನಿಯನ್ನು ಆಗ್ರಾ ಏರ್‌ಪೋರ್ಟ್‌ನಿಂದ ತಾಜ್‌ಮಹಲ್‌ಗೆ ಮತ್ತು ಅಲ್ಲಿಂದ ಮರಳಿ ಏರ್‌ಪೋರ್ಟ್‌ಗೆ ಹೊತ್ತು ತರಲು ಅಧ್ಯಕ್ಷರ ಅಧಿಕೃತ ಕಾರು ‘ದ ಬೀಸ್ಟ್‌’ ಈಗಾಗಲೇ ಬಂದಿಳಿದಿದೆ.


ಆಗ್ರಾ (ಫೆ. 21):  ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಪತ್ನಿಯನ್ನು ಆಗ್ರಾ ಏರ್‌ಪೋರ್ಟ್‌ನಿಂದ ತಾಜ್‌ಮಹಲ್‌ಗೆ ಮತ್ತು ಅಲ್ಲಿಂದ ಮರಳಿ ಏರ್‌ಪೋರ್ಟ್‌ಗೆ ಹೊತ್ತು ತರಲು ಅಧ್ಯಕ್ಷರ ಅಧಿಕೃತ ಕಾರು ‘ದ ಬೀಸ್ಟ್‌’ ಈಗಾಗಲೇ ಬಂದಿಳಿದಿದೆ. ಆದರೆ ಈ ಕಾರು ಬರೋಬ್ಬರಿ 6.4 ಟನ್‌ ತೂಕವಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ವಿಮಾನ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿ ರೈಲ್ವೆ ಮೇಲ್ಸೇತುವೆಯೊಂದಿದೆ. ಅದು ದುರ್ಬಲವಾಗಿರುವ ಕಾರಣಕ್ಕೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಸಂಬಂಧ ಫಲಕ ಕೂಡ ಹಾಕಲಾಗಿದೆ. ಇದೀಗ ಅದೇ ಮಾರ್ಗದಲ್ಲಿ ಟ್ರಂಪ್‌ ಅವರ ದೈತ್ಯ ಕಾರು, ಅದರ ಹಿಂದೆ ಡಜನ್‌ಗಟ್ಟಲೆ ವಾಹನಗಳು ಹೋದರೆ ಏನು ಗತಿ ಎಂಬುದು ಅಧಿಕಾರಿಗಳ ಕಳವಳ.

Latest Videos

undefined

ಭಾರತ ಜತೆ 71 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಟ್ರಂಪ್‌ ಹಿಂದೇಟು!

ಈ ಸಂಬಂಧ ಆಗ್ರಾದ ಅಧಿಕಾರಿಗಳಿಗೂ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದಿದೆ. ಈ ದುರ್ಬಲ ಬ್ರಿಜ್‌ ಬಳಸಬೇಕೋ ಬೇಡವೋ ಎಂಬುದರ ಕುರಿತು ಇನ್ನೂ ನಿರ್ಧಾರವೇ ಆಗಿಲ್ಲ. ಫೆ.24ರಂದು ಆಗ್ರಾಗೆ ಟ್ರಂಪ್‌ ಬರುತ್ತಿದ್ದಾರೆ.

ಮತ್ತೊಂದೆಡೆ, ಟ್ರಂಪ್‌ ಅವರ ವಾಹನವನ್ನು ಪ್ರೇಮ ಸ್ಮಾರಕ ತಾಜ್‌ಮಹಲ್‌ ಸನಿಹದವರೆಗೂ ಬಿಡಲಾಗುತ್ತದೆಯೇ ಎಂಬ ಮತ್ತೊಂದು ಕುತೂಹಲವಿದೆ. ಭದ್ರತಾ ದೃಷ್ಟಿಯಿಂದ ವಾಹನ ತಾಜ್‌ಮಹಲ್‌ವರೆಗೂ ಹೋಗಬೇಕು ಎಂದು ಅಮೆರಿಕದ ಬೇಹುಗಾರಿಕಾ ಸಿಬ್ಬಂದಿ ಬಯಸುತ್ತಿದ್ದಾರೆ.

ಆದರೆ, ಎಲೆಕ್ಟ್ರಿಕ್‌ ವಾಹನಗಳನ್ನು ಹೊರತುಪಡಿಸಿ ಮಿಕ್ಕ ಯಾವ ವಾಹನವೂ ತಾಜ್‌ಮಹಲ್‌ ಸನಿಹಕ್ಕೆ ಹೋಗ ಕೂಡದು ಎಂದು 1998ರಲ್ಲೇ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಕಂಗಾಲಾಗಿರುವ ಆಗ್ರಾ ನಗರಾಭಿವೃದ್ಧಿ ಪ್ರಾಧಿಕಾರ, ಯಾವುದಕ್ಕೂ ಇರಲಿ ಎಂದು ಬ್ಯಾಟರಿ ಚಾಲಿತ ಬಸ್‌ವೊಂದನ್ನು ಸಜ್ಜುಗೊಳಿಸಿದೆ.

click me!