
ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂಗಿ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ನಡುವಿನ ಕೌಟುಂಬಿಕ ಕಲಹ ಮತ್ತೊಮ್ಮೆ ಬಹಿರಂಗವಾಗಿದೆ. ಶರ್ಮಿಳಾ ಅವರ ಮಗಳ ಮದುವೆ ವೇದಿಕೆಯ ವಿಚಾರವಾಗಿ ಅಣ್ಣ-ತಂಗಿಯ ನಡುವೆ ವಿವಾದ ಭುಗಿಲೆದ್ದಿದೆ.
ಶರ್ಮಿಳಾ ಅವರ ಪುತ್ರಿ ಅಂಜಿಲಿ ಅವರ ವಿವಾಹವು ನ.25ರಂದು ನಿಗದಿಯಾಗಿದ್ದು, ಈ ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿರುವ ಜಗನ್ ಮೋಹನ್ ರೆಡ್ಡಿ ಹಾಗೂ ತಮ್ಮ ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್’ನಲ್ಲಿ ನಡೆಸಲು ಶರ್ಮಿಳಾ ತೀರ್ಮಾನಿಸಿದ್ದರು. ಆದರೆ, ಭದ್ರತಾ ಕಾರಣಗಳನ್ನು ಮುಂದಿಟ್ಟು ಜಗನ್ ತಮ್ಮ ಮನೆಯನ್ನು ಮದುವೆಗೆ ನೀಡಲು ನಿರಾಕರಿಸಿದ್ದಾರೆ. ಅಣ್ಣನ ವಿರೋಧದ ನಡುವೆಯೂ ಶರ್ಮಿಳಾ ಅದೇ ಸ್ಥಳದಲ್ಲಿ ಮದುವೆ ಮಾಡುವ ಸಿದ್ಧತೆ ನಡೆಸಿದ್ದಾರೆ ಹಾಗೂ ಅದೇ ವಿಳಾಸವನ್ನೇ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಗಣ್ಯರಿಗೆ ನೀಡಿದ್ದಾರೆ. ಇದು ವಿವಾದ ಉಂಟುಮಾಡಿದೆ.
ಜಗನ್ ಹಾಗೂ ಶರ್ಮಿಳಾ ಅವರ ತಂದೆ, ಆಂಧ್ರದ ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರು ಬೆಂಗಳೂರಿನ ಯಲಹಂಕದಲ್ಲಿ 20 ಎಕರೆ ಆಸ್ತಿ ಹೊಂದಿದ್ದರು. ಅದಕ್ಕೆ ಯಲಹಂಕ ಪ್ಯಾಲೇಸ್ ಎಂಬ ಹೆಸರು ಇರಿಸಿದ್ದರು. ಕುಟುಂಬದ ಅನೇಕ ಮದುವೆಗಳನ್ನು ಇಲ್ಲಿ ಮಾಡಿಸಿದ್ದರು. ನಿಧನಕ್ಕೂ ಮುನ್ನ ಈ ಜಾಗವನ್ನು ಶರ್ಮಿಳಾ ಮತ್ತು ಜಗನ್ಗೆ ಸಮಾನ ಭಾಗ ಮಾಡಿದ್ದರು. ಅದರ ಪ್ರಕಾರ ಯಲಹಂಕದಲ್ಲಿ ಶರ್ಮಿಳಾ ಹಾಗೂ ಜಗನ್ರ ಇಬ್ಬರ ಮನೆಗಳೂ ಯಲಹಂಕ ಪ್ಯಾಲೇಸ್ನ ಒಂದೇ ಕಾಂಪೌಂಡಲ್ಲಿವೆ. ಇಲ್ಲಿ ಏನೇ ಸಮಾರಂಭ ನಡೆದರೂ ಇಬ್ಬರಿಂದಲೂ ಪರಸ್ಪರ ಒಪ್ಪಿಗೆ ಅಗತ್ಯ. ಆ ಪ್ರಕಾರ ನ.25ರಂದು ಶರ್ಮಿಳಾ ಅವರ ಮಗಳು ಅಂಜಿಲಿ ಮದುವೆ ನಿಗದಿ ಮಾಡಿದ್ದರು.
ಆದರೆ ಅ.9ರಂದೇ ತಂಗಿ ಶರ್ಮಿಳಾಗೆ ಬರೆದ ಪತ್ರದಲ್ಲಿ ಜಗನ್, ‘ಮದುವೆಯಂತಹ ಸಮಾರಂಭಕ್ಕೆ ಅಡುಗೆ ಸಿಬ್ಬಂದಿ, ಈವೆಂಟ್ ಮ್ಯಾನೇಜ್ಮೆಂಟ್ ತಂಡ, ಫೋಟೋಗ್ರಾಫರ್ಗಳು ಸೇರಿದಂತೆ ಅನೇಕ ಅಪರಿಚಿತ ವ್ಯಕ್ತಿಗಳು ಹಾಗೂ ಅತಿಥಿಗಳು ಮನೆಗೆ ಬಂದು ಹೋಗುತ್ತಾರೆ. ಈ ಸಂದರ್ಭದಲ್ಲಿ ತಾವು ವಾಸ್ತವ್ಯವಿರುವ ನಿವಾಸದ ವಿಡಿಯೋಗಳು ಮತ್ತು ಫೋಟೋಗಳು ಹೊರಬರುವುದರಿಂದ ನನ್ನ ಕುಟುಂಬದ ಭದ್ರತೆಗೆ ಹಾಗೂ ಗೌಪ್ಯತೆಗೆ ಗಂಭೀರ ಧಕ್ಕೆಯಾಗುತ್ತದೆ’ ಎಂದು ತಿಳಿಸಿದ್ದಾರೆ. ಜಗನ್ ಝಡ್+ ಕೆಟಗರಿ ಭದ್ರತೆ ಹೊಂದಿದ್ದಾರೆ.
‘ನನಗೆ ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲವಾದರೂ, ನನ್ನ ಸ್ವಂತ ಮಕ್ಕಳಾದ ಹರ್ಷ ಅಥವಾ ವರ್ಷ ಅವರ ಮದುವೆಯಾಗಿದ್ದರೂ ನಾನು ಇದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ’ ಎಂದು ಜಗನ್ ಸ್ಪಷ್ಟಪಡಿಸಿದ್ದಾರೆ.\B\B
‘ಬೆಂಗಳೂರಿನ ಮನೆಯಲ್ಲಿ ಮದುವೆ ಬೇಡ ಎಂದು 2 ತಿಂಗಳ ಹಿಂದೆಯೇ ಮೌಖಿಕವಾಗಿ ತಿಳಿಸಿದ್ದೆ. ಅದರ ಬದಲು ‘ನಿಮಗೆ ಕನ್ವೆನ್ಷನ್ ಸೆಂಟರ್ ಅಥವಾ ಡೆಸ್ಟಿನೇಷನ್ ವೆಡ್ಡಿಂಗ್ ಬೇಡವೆಂದಾದಲ್ಲಿ, ಹೈದರಾಬಾದ್ನ ನನ್ನ ಲೋಟಸ್ ಪಾಂಡ್ ಆಸ್ತಿಯನ್ನು ಮದುವೆಗೆ ಬಳಸಿಕೊಳ್ಳಬಹುದು’ ಎಂದಿದ್ದೆ. ಆದಾಗ್ಯೂ ಶರ್ಮಿಳಾ ಬೆಂಗಳೂರಲ್ಲೇ ಮದುವೆ ಎಂದು ಆಮಂತ್ರಣ ಮುದ್ರಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆದರೆ ಕಳೆದ 7 ವರ್ಷಗಳಲ್ಲಿ ಏನೇ ಭಿನ್ನಾಭಿಪ್ರಾಯಗಳು ನಡೆದಿದ್ದರೂ, ತಮ್ಮ ಸೋದರಸೊಸೆ ಅಂಜಿಲಿ ಅವರ ಮುಂಬರುವ ವೈವಾಹಿಕ ಜೀವನಕ್ಕೆ ಶುಭ ಹಾರೈಸಿರುವೆ’ ಎಂದು ಅವರು ತಿಳಿಸಿದ್ದಾರೆ.
ಅಣ್ಣನ ಕಡೆಯಿಂದ ಸ್ಪಷ್ಟ ವಿರೋಧವಿದ್ದರೂ, ಶರ್ಮಿಳಾ ಈಗಾಗಲೇ ಹಲವು ಗಣ್ಯ ವ್ಯಕ್ತಿಗಳಿಗೆ ಆಹ್ವಾನ ಪತ್ರಿಕೆ ನೀಡಿರುವುದು ಗಮನ ಸೆಳೆದಿದೆ. ಕಳೆದ 7 ವರ್ಷಗಳಿಂದ ಅಣ್ಣ-ತಂಗಿಯರ ಸಂಬಂಧ ಹಳಸಿ ಹೋಗಿದ್ದರೂ, ಮಗಳ ಮದುವೆಗೆ ಜಗನ್ ತಮ್ಮ ಬೆಂಗಳೂರು ನಿವಾಸವನ್ನು ನೀಡುತ್ತಾರೆ ಎಂದು ಶರ್ಮಿಳಾ ನಂಬಿದ್ದರು ಎನ್ನಲಾಗಿದೆ. ಇದೀಗ ಜಗನ್ ನಿಲುವಿಗೆ ಶರ್ಮಿಳಾ ಆಪ್ತರು ಕಿಡಿಕಾರಿದ್ದಾರೆ. ಜಗನ್ ಭದ್ರತಾ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ. ಭದ್ರತೆ ಸಮಸ್ಯೆಯಾದರೆ ಅವರೇ ಮದುವೆ ದಿನ ಮನೆ ಬಿಟ್ಟು ಬೇರೆಡೆ ನೆಲೆಸಲಿ ಎಂದು ಕುಟುಕಿದ್ದಾರೆ.
ಜಗನ್ ಕಂಸಮಾಮ- ನಾಯ್ಡು ವ್ಯಂಗ್ಯ
ಈ ಬೆಳವಣಿಗೆಯ ಬೆನ್ನಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜಗನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಸ್ವಂತ ತಂಗಿಯ ಮಗಳ ಮದುವೆಗೆ ಮನೆ ಕೊಡಲು ನಿರಾಕರಿಸಿದ ಜಗನ್ ಕಂಸ ಮಾವ ಇದ್ದಂತೆ’ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ