'20 ವರ್ಷದಿಂದ 1 ದಿನವೂ ರಜೆ ಪಡೆದಿಲ್ಲ: ಸಂಸದರು ತಪ್ಪದೇ ಕಲಾಪಕ್ಕೆ ಬರಬೇಕು'

By Kannadaprabha NewsFirst Published Mar 24, 2021, 8:00 AM IST
Highlights

20 ವರ್ಷದಿಂದ 1 ದಿನವೂ ರಜೆ ಪಡೆದಿಲ್ಲ: ಮೋದಿ| ಕೃಷಿ ಕಾಯ್ದೆ ವಿರೋಧಿಸುವವರು ಭವಿಷ್ಯದಲ್ಲಿ ಪ್ರಶಂಸಿಸುತ್ತಾರೆ| ಆ ಕಾನೂನುಗಳ ಹಿಂದಿನ ಸರ್ಕಾರದ ಉದ್ದೇಶ ಒಳ್ಳೆಯದಿದೆ| ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

 

ನವದೆಹಲಿ(ಮಾ.24): ಮೊದಲು ಮುಖ್ಯಮಂತ್ರಿಯಾಗಿ ಹಾಗೂ ಈಗ ಪ್ರಧಾನಿಯಾಗಿ ಒಟ್ಟಾರೆ 20 ವರ್ಷಗಳಿಂದ ಅಧಿಕಾರದಲ್ಲಿದ್ದೇನೆ. ಆದರೆ ಒಂದೇ ಒಂದು ದಿನವೂ ನಾನು ರಜೆ ಪಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಪಕ್ಷದ ಸಂಸದರು ನಿಯಮಿತವಾಗಿ ಸಂಸತ್ತಿನ ಕಲಾಪಕ್ಕೆ ಹಾಜರಾಗಬೇಕು ಎಂದು ಸಲಹೆ ಮಾಡಿದರು ಎನ್ನಲಾಗಿದೆ.

ಅಲ್ಲದೆ, ಕೇಂದ್ರ ಕೃಷಿ ಕಾಯ್ದೆಗಳನ್ನು ತಂದಿರುವುದರ ಹಿಂದಿನ ಸರ್ಕಾರದ ಉದ್ದೇಶ ಒಳ್ಳೆಯದಿದೆ. ಹೀಗಾಗಿ ಕಾಯ್ದೆಯನ್ನು ಈಗ ವಿರೋಧಿಸುತ್ತಿರುವವರು ಮುಂದಿನ ದಿನಗಳಲ್ಲಿ ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ಪಾಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದ ನಡುವೆಯೇ ಪಂಚಾಯಿತಿ ಚುನಾವಣೆ ಜರುಗಿತು. ಕೃಷಿ ಮಸೂದೆಗಳ ಲಾಭಗಳನ್ನು ಜನರಿಗೆ ತಿಳಿಸಿ ಬಿಜೆಪಿ ಮತ ಕೇಳಿತು. ಅಲ್ಲಿನ ಶೇ.90ರಷ್ಟುಸೀಟುಗಳನ್ನು ಪಕ್ಷ ಗೆದ್ದುಕೊಂಡಿದೆ ಎಂದು ಹೇಳಿದರು ಎನ್ನಲಾಗಿದೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ, ಚಂಡಮಾರುತ ಹಾಗೂ ಭೂಕಂಪದಂತಹ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಭಾರತ ಸದೃಢವಾಗಿ ಹೊರಹೊಮ್ಮಿದೆ. ಇಡೀ ವಿಶ್ವವೇ ಭಾರತದ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದೆ ಎಂದು ಮೋದಿ ಅವರು ತಿಳಿಸಿದರು ಎಂದು ವಿವರಿಸಿದರು. 20 ವರ್ಷದಿಂದ ಒಂದು ದಿನವೂ ರಜೆ ಪಡೆದಿಲ್ಲ ಎಂದು ಮೋದಿ ಅವರು ಸಂಸದರಿಗೆ ತಿಳಿಸಿದರು ಎಂದು ಹೇಳಿದರು.

click me!