ಅಮೆರಿಕಕ್ಕೆ ಹೊರಟು ಅಲ್ಲಿ ಸಿಕ್ಕಿಬಿದ್ದವರ ಕಥೆ : 7 ದೇಶ ದಾಟಿ, 18 ಬೆಟ್ಟ ಹತ್ತಿ, 45 ಕಿಮೀ ನಡೆದು ಯುಎಸ್‌ಎಗೆ ಹೋಗಿದ್ದೆ!

Published : Feb 07, 2025, 08:27 AM IST
ಅಮೆರಿಕಕ್ಕೆ ಹೊರಟು ಅಲ್ಲಿ ಸಿಕ್ಕಿಬಿದ್ದವರ ಕಥೆ : 7 ದೇಶ ದಾಟಿ, 18 ಬೆಟ್ಟ ಹತ್ತಿ, 45 ಕಿಮೀ ನಡೆದು ಯುಎಸ್‌ಎಗೆ ಹೋಗಿದ್ದೆ!

ಸಾರಾಂಶ

ಉತ್ತಮ ಭವಿಷ್ಯದ ಹುಡುಕಾಟದಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ತೆರಳಲು ಯತ್ನಿಸಿದ ಭಾರತೀಯರ ಗೋಳಿನ ಕಥೆಗಳನ್ನು ಈ ಲೇಖನವು ಬಿಚ್ಚಿಡುತ್ತದೆ. ಅಪಾಯಕಾರಿ ಪ್ರಯಾಣ, ವಂಚಕ ಏಜೆಂಟ್‌ಗಳು ಮತ್ತು ಗಡೀಪಾರುಗಳ ಕಠಿಣ ವಾಸ್ತವಗಳನ್ನು ಎದುರಿಸಬೇಕಾದ ಅನುಭವಗಳನ್ನು ವಿವರಿಸುತ್ತದೆ.

ಚಂಡೀಗಢ (ಫೆ.7): ಉತ್ತಮ ಭವಿಷ್ಯ ಅರಸಿ ಅಮೆರಿಕಕ್ಕೆ ತೆರಳವು ಕನಸು ಕಂಡಿದ್ದ ಪಂಜಾಬ್‌ನ ಹೋಶಿಯಾರ್‌ಪುರದ ಹರ್ವಿಂದರ್‌ ಸಿಂಗ್‌ರದ್ದು ಕೂಡಾ ಗೋಳಿನ ಕಥೆ. ವ್ಯಕ್ತಿಯೊಬ್ಬ ನಮ್ಮನ್ನು ಯುರೋಪ್‌ ಮೂಲಕ ಅಮೆರಿಕಕ್ಕೆ ಕರೆದೊಯ್ಯುವ ಭರವಸೆ ನೀಡಿದ್ದ. ಇದಕ್ಕಾಗಿ ಆತನಿಗೆ ನಾನು 42 ಲಕ್ಷ ರು.ನೀಡಿದ್ದೆ. ಕಳೆದ ಆಗಸ್ಟ್‌ನಲ್ಲಿ ನಮ್ಮನ್ನು ಮೊದಲಿಗೆ ಕತಾರ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಬ್ರೆಜಿಲ್‌, ಪೆರು, ಕೊಲಂಬಿಯಾ, ಪನಾಮಾ, ನಿಕರಾಗುವಾ ಮತ್ತು ಬಳಿಕ ಮೆಕ್ಸಿಕೋಗೆ ಕರೆದೊಯ್ಯಲಾಯಿತು.

ಮೆಕ್ಸಿಕೋದಿಂದ ಇತರೆ ಕೆಲವರ ಜೊತೆಗೆ ನಮ್ಮನ್ನು ಅಮೆರಿಕದ ಗಡಿಯತ್ತ ಕರೆದೊಯ್ಯಲಾಯಿತು. ಈ ಹಾದಿಯಲ್ಲಿ ನಾವು ಬೆಟ್ಟ, ಗುಡ್ಡಗಳನ್ನು ಹತ್ತಿಳಿದೆವು. ಒಂದು ಕಡೆ ಸಮುದ್ರದಲ್ಲಿ ಸಾಗುವಾಗ ಇನ್ನೇನು ಬೋಟ್‌ ಮುಳುಗಿ ನಾವೆಲ್ಲಾ ನೀರು ಪಾಲಾದೆವು ಅನ್ನುವ ಹೊತ್ತಿನಲ್ಲಿ ಅದು ಹೇಗೋ ಜೀವ ಉಳಿಸಿಕೊಂಡಿದ್ದೆವು. ಆದರೆ ಕೆಲವರು ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ ಭೀಕರ ದೃಶ್ಯಗಳನ್ನೂ ನಾವು ನೋಡಿದ್ದನ್ನು ಮರೆಯಲಾಗದು. ಜೊತೆಗೆ ಪನಾಮಾ ಕಾಡಿನಲ್ಲಿ ತೆರಳುವಾಗಲೂ ನಡೆಯಲಾಗದೇ ಕೆಲ ವ್ಯಕ್ತಿಗಳು ಸಾವನ್ನಪ್ಪಿದ್ದರು. ಕೆಲವು ಕಡೆ ತಿನ್ನಲು ಅನ್ನ ಸಿಕ್ಕಿದರೆ ಇನ್ನು ಕೆಲವು ಕಡೆ ಏನೂ ಸಿಗುತ್ತಿರಲಿಲ್ಲ. ಬಿಸ್ಕೆಟ್‌ ತಿಂದೇ ದಿನ ಕಳೆಯುತ್ತಿದ್ದೆವು. ಕೆಲವು ಕಡೆ ಕಳ್ಳರು ನಮ್ಮನ್ನು ಅಡ್ಡಗಟ್ಟಿ ನಮ್ಮ ಬಳಿ ಇದ್ದ ದುಬಾರಿ ಬಟ್ಟೆಗಳನ್ನು ದೋಚಿದರು. 

ಆದರೆ ಉತ್ತಮ ಭವಿಷ್ಯದ ಕನಸಿನಲ್ಲಿ ನಾವು ಅಮೆರಿಕದ ಕಡೆಗೆ ಹೆಜ್ಜೆ ಹಾಕಿದ್ದೆವು. ಕೆಲವು ಕಡೆ ನಾವು 15 ಗಂಟೆ ಸುದೀರ್ಘ ಬೋಟ್‌ನ ಪ್ರಯಾಣ ಮಾಡಿದರೆ ಇನ್ನು ಕೆಲವು ಕಡೆ 40-45 ಕಿ.ಮೀ ನಡೆಯಬೇಕಾಗಿ ಬಂದಿತ್ತು. ನಾವು ಒಟ್ಟು 17-18 ಬೆಟ್ಟಗಳನ್ನು ದಾಟಿರಬಹುದು. ಈ ಪೈಕಿ ಯಾರು ಯಾವುದರಲ್ಲಿ ಸ್ವಲ್ಪ ಆಯ ತಪ್ಪಿ ಬಿದ್ದರೂ ಸಾವು ಖಚಿತ ಎನ್ನುವ ಪರಿಸ್ಥಿತಿ ಇತ್ತು. ಅಲ್ಲಿ ಯಾರಾದರೂ ಗಾಯಗೊಂಡರೆ ಅವರನ್ನು ಅಲ್ಲೇ ಸಾಯಲು ಬಿಟ್ಟು ಮುಂದೆ ಹೋಗುವುದೊಂದೇ ಅವರ ನೀತಿಯಾಗಿತ್ತು. ಅಂತಿಮವಾಗಿ ನಾವು ಅಮೆರಿಕ ಗಡಿ ತಲುಪಿ, ಗಡಿ ದಾಟಲು ಯತ್ನಿಸಿದಾಗ ಅಮೆರಿಕದ ಅಧಿಕಾರಿಗಳು ನಮ್ಮನ್ನು ಬಂಧಿಸಿದರು ಎಂದು ಹರ್ವಿಂದರ್‌ ಸಿಂಗ್ ತಮ್ಮ ನೋವು ತೋಡಿಕೊಂಡಿದ್ದಾರೆ.

ಪ್ರಿಯಕರನ ವರಿಸಲು ಹೊರಟ ಪ್ರಿಯತಮೆ ಗಡೀಪಾರು: ಅಮೆರಿಕದಲ್ಲಿ ಉದ್ಯೋಗ ಅರಸಿ ಹೊರಟು ಅಲ್ಲಿ ಸಿಕ್ಕಿಬಿದ್ದವರ ಕಥೆಯ ನಡುವೆಯೇ ಒಂದು ಪ್ರೇಮಕಥೆ ಕೂಡಾ ಬೆಳಕಿಗೆ ಬಂದಿದೆ.ಪಂಜಾಬ್‌ನ ವೆರ್ಪಾಲ್‌ ಗ್ರಾಮದ ಸುಖ್‌ಜೀತ್‌ ಕೌರ್‌ (26), ಅಮೆರಿಕದಲ್ಲಿರುವ ತನ್ನ ಪ್ರಿಯತಮನ ಮದುವೆಯಾಗುವ ಉದ್ದೇಶದಿಂದ ಅಕ್ರಮ ಮಾರ್ಗದಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಳು. ಆದರೆ ಪ್ರಿಯತಮನ ಭೇಟಿಗೂ ಮುನ್ನವೇ ಗಡಿಯಲ್ಲಿ ವಲಸೆ ಅಧಿಕಾರಿಗಳ ಕೈಗೆ ಆಕೆ ಸಿಕ್ಕಿಬಿದ್ದ ಕಾರಣ ಆಕೆಯನ್ನು ಅಲ್ಲಿ ಕೆಲ ದಿನಗಳ ಕಾಲ ಬಂಧಿಸಿಟ್ಟು ಇದೀಗ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಸುಖ್‌ಜೀತ್‌ಳ ತಂದೆ ಇಟಲಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ತಾಯಿ ಮತ್ತು ಸೋದರ ಪಂಜಾಬ್‌ನಲ್ಲಿ ವಾಸವಿದ್ದಾರೆ.

ಮೈತುಂಬಾ ಸಾಲ, ನುಚ್ಚು ನೂರಾದ ಅಮೆರಿಕ ಕನಸು: ಭಾರೀ ವೇತನದ ಕನಸು ಹೊತ್ತು, ಅಕ್ರಮ ಮಾರ್ಗದಲ್ಲಿ ಅಮೆರಿಕಕ್ಕೆ ತೆರಳಿದ್ದ ಪಂಜಾಬ್‌, ಹರ್ಯಾಣ ಸೇರಿ ವಿವಿಧ ರಾಜ್ಯಗಳ ಹಲವರು ಇದೀಗ ಉದ್ಯೋಗವು ಇಲ್ಲ, ಜೊತೆಗೆ ಮೈತುಂಬಾ ಸಾಲ ಎಂಬ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಹರ್ವಿಂದರ್‌ ಏಜೆಂಟ್‌ಗೆ 42 ಲಕ್ಷ ನೀಡಿ ಅಮೆರಿಕಕ್ಕೆ ತೆರಳಿ ಅಲ್ಲಿ ದುಡಿಮೆ ಮಾಡಿ ಸಾಲ ತೀರಿಸುವ ಕನಸು ರೂಪಿಸಿದ್ದರು. ಅದರಂತೆ ಅವರ ಕುಟುಂಬ ಸದಸ್ಯರ ಮನೆಯಲ್ಲಿದ್ದ ಚಿನ್ನ ಮಾರಿ, ಅಲ್ಲಿಲ್ಲಿ ಸಾಲ ಮಾಡಿ ಹಣ ಹೊಂದಿಸಿತ್ತು.ಆದರೆ ಇದೀಗ ಮೈತುಂಬಾ ಸಾಲದ ಜೊತೆ ಅಮೆರಿಕದ ಕನಸೂ ನುಚ್ಚುನೂರಾಗಿದೆ ಎಂದು ಹರ್ವಿಂದರ್‌ರ ಪತ್ನಿ ಕುಲ್ಜಿಂದರ್‌ ತಮ್ಮ ಗೋಳು ತೋಡಿಕೊಂಡಿದ್ದಾರೆ. ಉತ್ತಮ ಭವಿಷ್ಯದ ಕನಸು ಕಂಡಿದ್ದ ನಮ್ಮ ಭವಿಷ್ಯವೇ ಇದೀಗ ನಾಶವಾಗಿದೆ. ಇಂಥ ವಂಚಕ ಏಜೆಂಟರ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಡೀಪಾರಾಗಿ ಬಂದವರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಇದು ಕೇವಲ ಹರ್ವಿಂದರ್‌ ಕಥೆಯಲ್ಲ, ಪಂಜಾಬ್‌ ಮತ್ತು ಹರ್ಯಾಣದಿಂದ ಅಮೆರಿಕಕ್ಕೆ ತೆರಳಲು ಯತ್ನಿಸಿ ಗಡೀಪಾರಾಗಿ ಬಂದ 40ಕ್ಕೂ ಹೆಚ್ಚು ಜನರ ಕಥೆಯೂ ಇದೆ ಆಗಿದೆ.

 

ಅಮೆರಿಕದಿಂದ ಭಾರತೀಯರ ಗಡಿಪಾರು, ವಿಮಾನದಲ್ಲಿ ಕೈಕಾಲು ಕಟ್ಟಿ ಹಿಂಸೆ, ಕರಾಳ ಕಥೆ ಬಿಚ್ಚಿಟ್ಟ ಯುವಕರು!

ಗಡೀಪಾರು ಪ್ರಕ್ರಿಯೆ ಹೊಸತಲ್ಲ: ಜೈಶಂಕರ್‌: ‘ಗಡೀಪಾರು ಪ್ರಕ್ರಿಯೆ ಎನ್ನುವುದು ಹೊಸದೇನಲ್ಲ.ಇದು ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. 2009ರ ಬಳಿಕ ಒಟ್ಟು 15756 ಭಾರತೀಯರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ಆದರೆ ಗಡೀಪಾರು ಪ್ರಕ್ರಿಯೆ ವೇಳೆ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳದಂತೆ ಅಮೆರಿಕದ ಜೊತೆ ಮಾತುಕತೆ ನಡೆಸುತ್ತೇವೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈ. ಶಂಕರ್‌ ಸಂಸತ್ತಿಗೆ ಭರವಸೆ ನೀಡಿದ್ದಾರೆ.

ಶೇಖ್‌ ಹಸೀನಾ ಗಡಿಪಾರಿಗೆ ಇಂಟರ್‌ಪೋಲ್‌ಗೆ ಮೊರೆ: ಬಾಂಗ್ಲಾ ಸರ್ಕಾರ ನಿರ್ಧಾರ

104 ಭಾರತೀಯರ ಗಡೀಪಾರು ರೀತಿಯ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲೂ ವ್ಯಕ್ತವಾದ ಆಕ್ರೋಶಕ್ಕೆ ಉತ್ತರ ನೀಡಿದ ಜೈಶಂಕರ್‌, ‘ಇದು ಯಾವುದೇ ನಿರ್ದಿಷ್ಟ ದೇಶಕ್ಕೆ ಮಾತ್ರ ಅನುಸರಿಸುವ ನೀತಿಯಲ್ಲ. ಭಾರತಕ್ಕೆ ಮಾತ್ರ ಅನುಸರಿಸುವ ನೀತಿಯಲ್ಲ. ಗಡೀಪಾರು ಮಾಡುವ ಸಂದರ್ಭದಲ್ಲಿ ಆಹಾರ, ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಇತರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಫೆ.5ರಂದು ಅಮೆರಿಕ ಕೈಗೊಂಡ ನಿರ್ಧಾರ ಹಿಂದಿನ ವಿಧಾನಕ್ಕಿಂತ ಭಿನ್ನವಿಲ್ಲ. ಗಡೀಪಾರು ಪ್ರಕ್ರಿಯೆ ಹೊಸದೇನಲ್ಲ. ಇದು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಬುಧವಾರ ಭಾರತಕ್ಕೆ ಆಗಮಿಸಿದ ವಿಮಾನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ’ ಎಂದು ಹೇಳಿದರು. ಜೊತೆಗೆ ಅಕ್ರಮ ವಲಸೆ ಉದ್ಯಮದ ಮೇಲೆ ಕಠಿಣ ಕ್ರಮ ನಮ್ಮ ಗುರಿಯಾಗಬೇಕು. ಜೊತೆಗೆ ಅರ್ಹ ಪ್ರಯಾಣಿಕರಿಗೆ ಸುಲಭ ವೀಸಾ ಸಿಗುವಂತೆ ಮಾಡುವುದು ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ