'ನೋಟ್‌ ಬ್ಯಾನ್‌ನಿಂದ ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ'

By Kannadaprabha NewsFirst Published Nov 9, 2020, 7:40 AM IST
Highlights

ನೋಟ್‌ ಬ್ಯಾನ್‌ಗೆ 4 ವರ್ಷ: ಕಪ್ಪು ಹಣ ನಿಯಂತ್ರಣ-ಮೋದಿ| 500, 1000 ರು. ನೋಟ್‌ ರದ್ದಾಗಿ ನಿನ್ನೆಗೆ 4 ವರ್ಷ| ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ: ಪ್ರಧಾನಿ ಟ್ವೀಟ್‌| ತೆರಿಗೆ ವ್ಯಾಪ್ತಿ ಹೆಚ್ಚಳ, ಡಿಜಿಟಲ್‌ ಆರ್ಥಿಕತೆಗೆ ಒತ್ತು-ನಿರ್ಮಲಾ

ನವದೆಹಲಿ(ನ.09): ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ 500 ರು. ಹಾಗೂ 1000 ರು. ನೋಟುಗಳ ಅಪನಗದೀಕರಣ ಘೋಷಣೆಗೆ ಭಾನುವಾರ (ನ.8ಕ್ಕೆ) 4 ವರ್ಷ ಸಂದಿದೆ. ಈ ಸಂದರ್ಭದಲ್ಲಿ ‘ನೋಟು ರದ್ದತಿಯಿಂದ ಕಪ್ಪುಹಣದ ವಿರುದ್ಧ ಯಶಸ್ಸು ಸಾಧಿಸಲಾಗಿದೆ’ ಎಂದು ಮೋದಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘ಅಪನಗದೀಕರಣದಿಂದ ಕಾಳಧನ ನಿಯಂತ್ರಣಕ್ಕೆ ಬಂದಿದೆ. ಜನರು ತೆರಿಗೆ ಕಟ್ಟಲು ಬದ್ಧತೆ ತೋರಲಾರಂಭಿಸಿದ್ದಾರೆ. ಇದರಿಂದ ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಿದೆ. ರಾಷ್ಟ್ರೀಯ ಪ್ರಗತಿ ಆಗಿದೆ’ ಎಂದು ಮೋದಿ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ಸಚಿವೆ ನಿರ್ಮಲಾ ಟ್ವೀಟ್‌ ಮಾಡಿ, ‘ಅಪನಗದೀಕರಣದಿಂದ ತೆರಿಗೆ ವ್ಯಾಪ್ತಿ ಹೆಚ್ಚಿತಷ್ಟೇ ಅಲ್ಲ, ನಕಲಿ ನೋಟುಗಳಿಗೂ ಕಡಿವಾಣ ಬಿತ್ತು. ಡಿಜಿಟಲ್‌ ಆರ್ಥಿಕತೆಗೆ ಒತ್ತು ನೀಡಿತು. ಮೊದಲ 4 ತಿಂಗಳು 900 ಕೋಟಿ ರು. ಅಘೋಷಿತ ಆದಾಯ, ಕಳೆದ 3 ವರ್ಷದಲ್ಲಿ 3950 ಕೋಟಿ ರು. ಅಘೋಷಿತ ಸಂಪತ್ತು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಆದರೆ ಇದಕ್ಕೆ ರಾಹುಲ್‌ ತಿರುಗೇಟು ನೀಡಿದ್ದಾರೆ. ‘ನೋಟು ರದ್ದತಿ ವಿನಾಶಕ ಕ್ರಮ. ತಮ್ಮ ಕಾಳಧನಿಕ ಉದ್ಯಮಪತಿ ಸ್ನೇಹಿತರಿಗೆ ಸಹಾಯ ಮಾಡಲು ಮೋದಿ ಇದನ್ನು ಜಾರಿಗೆ ತಂದರು. ಆರ್ಥಿಕತೆ ಹಾಳಾಗಲು ಕೊರೋನಾ ಕಾರಣ ಎಂದು ಸರ್ಕಾರ ನೆಪ ಹೇಳುತ್ತಿದೆ. ಅದರೆ ಬಾಂಗ್ಲಾದೇಶದ ಆರ್ಥಿಕತೆ ಏಕೆ ಕೊರೋನಾದಿಂದ ಹಾಳಾಗಿಲ್ಲ? ನಮ್ಮ ಆರ್ಥಿಕತೆ ಹಾಳಾಗಿದ್ದಕ್ಕೆ ನಿಜವಾದ ಕಾರಣ ಎಂದರೆ ಜಿಎಸ್‌ಟಿ ಹಾಗೂ ನೋಟ್‌ ಬಂದಿ’ ಎಂದಿದ್ದಾರೆ.

click me!