
ನವದೆಹಲಿ: ಮಲಗಿದ್ದ ಗಂಡನ ಮೇಲೆ ಹೆಂಡತಿಯೊಬ್ಬಳು ಅಮಾನುಷ ಕ್ರೌರ್ಯವೆಸಗಿದ್ದಾಳೆ. ಬಿಸಿ ಎಣ್ಣೆಯ ಜೊತೆ ಖಾರದ ಪುಡಿಯನ್ನು ಆತನ ಮೇಲೆ ಎರಚಿ ಹಲ್ಲೆ ಮಾಡಿದ್ದು, ಇದರಿಂದ ಗಂಡನ ಸ್ಥಿತಿ ಗಂಭೀರವಾಗಿದೆ. ಆಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ಪತಿ ದಿನೇಶ್‌ನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಸ್ಥಿತಿ ಗಂಭೀರವಾಗಿದ್ದು, ಸಫ್ದರ್‌ಜಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯ ಮದನ್‌ಗಿರ್‌ನಲ್ಲಿರುವ ಮನೆಯಲ್ಲಿ ನಿದ್ರಿಸುತ್ತಿದ್ದಾಗ, ಈ ದುರಂತ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ಪ್ರಕಾರ, ದಿನೇಶ್ ಗಾಢ ನಿದ್ದೆ ಮಾಡುತ್ತಿದ್ದಾಗ ಆತನ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆತನ ದೇಹದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ ಈ ವೇಳೆ ದಂಪತಿಯ ಎಂಟು ವರ್ಷದ ಮಗಳು ಸಹ ಮನೆಯಲ್ಲಿದ್ದಳು.
ಅಕ್ಟೋಬರ್ 2 ರಂದು ಕೆಲಸ ಮುಗಿಸಿ ತಡರಾತ್ರಿ ಮನೆಗೆ ಹಿಂತಿರುಗಿದೆ. ನಂತರ ಊಟ ಮಾಡಿ ಮಲಗಿದ್ದಾಗ ಘಟನೆ ನಡೆದಿದೆ. ನನ್ನ ಹೆಂಡತಿ ಮತ್ತು ಮಗಳು ಹತ್ತಿರದಲ್ಲೇ ಮಲಗಿದ್ದರು. ಬೆಳಗಿನ ಜಾವ 3.15 ರ ಸುಮಾರಿಗೆ, ಇದ್ದಕ್ಕಿದ್ದಂತೆ ನನ್ನ ದೇಹದಾದ್ಯಂತ ತೀವ್ರವಾದ, ಸುಡುವ ನೋವು ಶುರುವಾಯ್ತು. ಎಚ್ಚರವಾಗಿ ನೋಡಿದಾಗ ನನ್ನ ಹೆಂಡತಿ ನಿಂತುಕೊಂಡು ನನ್ನ ದೇಹ ಹಾಗೂ ಮುಖದ ಮೇಲೆ ಕುದಿಯುವ ಎಣ್ಣೆಯನ್ನು ಸುರಿಯುವುದನ್ನು ನಾನು ನೋಡಿದೆ. ನಾನು ಎದ್ದೇಳಲು ಅಥವಾ ಸಹಾಯಕ್ಕಾಗಿ ಕರೆಯುವ ಮೊದಲು, ಅವಳು ನನ್ನ ಸುಟ್ಟಗಾಯಗಳ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಎರಚಿದಳು ಎಂದು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಿರುಚಿದರೆ ಮತ್ತಷ್ಟು ಎಣ್ಣೆ ಎರಚುವುದಾಗಿ ಬೆದರಿಸಿದ ಪತ್ನಿ
ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ಜೋರಾಗಿ ಕೂಗಿದರೆ ಮತ್ತಷ್ಟು ಇನ್ನಷ್ಟು ಎಣ್ಣೆಯನ್ನು ಎರಚುವುದಾಗಿ ಬೆದರಿಸಿದಳು ಎಂದು ದಿನೇಶ್ ಹೇಳಿದ್ದಾರೆ. ಆದರೆ ಎಣ್ಣೆಯಿಂದ ಬೆಂದ ಉರಿಯ ಜೊತೆಗೆ ಖಾರದ ಪುಡಿಯ ಉರಿ ತಡೆದುಕೊಳ್ಳಲಾಗದೇ ಆತ ಜೋರಾಗಿ ಕೂಗಿಕೊಂಡಿದ್ದು, ಈತನ ಕೂಗಾಟ ಶಾಂತವಾಗಿ ಮಲಗಿದ್ದ ನೆರೆಹೊರೆಯ ಮನೆಯವರನ್ನೆಲ್ಲಾ ಬೆಚ್ಚಿ ಬಿದ್ದು ಎದ್ದೇಳುವಂತೆ ಮಾಡಿದೆ. ಈತನ ಕೂಗಾಟ ಕೇಳಿ ಹೊರಗೆ ಬಂದವರಲ್ಲಿ ಮನೆ ಮಾಲೀಕರ ಮಗಳು ಅಂಜಲಿ ಕೂಡ ಒಬ್ಬರಾಗಿದ್ದಾರೆ.
ಏನಾಗುತ್ತಿದೆ ಎಂದು ನೋಡಲು ನನ್ನ ತಂದೆ ಮೇಲಕ್ಕೆ ಹೋದರು. ಬಾಗಿಲು ಲಾಕ್ ಆಗಿತ್ತು. ಅವರ ಪತ್ನಿ ಒಳಗಿನಿಂದ ಬಾಗಿಲಿಗೆ ಲಾಕ್ ಮಾಡಿದ್ದರು. ನಾವು ಅವರನ್ನು ಬಾಗಿಲು ತೆರೆಯಲು ಕೇಳಿದೆವು. ಕೊನೆಗೆ ಬಾಗಿಲು ತೆರೆದಾಗ, ಅವರು ನೋವಿನಿಂದ ನರಳುತ್ತಿರುವುದನ್ನು ಮತ್ತು ಅವರ ಪತ್ನಿ ಮನೆಯೊಳಗೆ ಅಡಗಿಕೊಂಡಿರುವುದನ್ನು ನಾವು ನೋಡಿದ್ದೇವೆ ಎಂದು ಅಂಜಲಿ ಅವರು ಪಿಟಿಐಗೆ ತಿಳಿಸಿದ್ದಾರೆ.
ನನ್ನ ತಂದೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಮಹಿಳೆ ಆಕೆಯ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದಳು. ಆದರೆ ಅವಳು ಅವನೊಂದಿಗೆ ಹೊರಬಂದಾಗ, ಅವಳು ವಿರುದ್ಧ ದಿಕ್ಕಿನ ಕಡೆಗೆ ಹೋದಳು ಹೀಗಾಗಿ ನಮಗೆ ಅನುಮಾನ ಬಂತು. ನನ್ನ ತಂದೆ ಅವಳನ್ನು ತಡೆದು ಆಟೋ ವ್ಯವಸ್ಥೆ ಮಾಡಿ, ದಿನೇಶ್‌ನನ್ನು ಒಬ್ಬಂಟಿಯಾಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ಅಂಜಲಿ ಹೇಳಿದ್ದಾರೆ. ದಿನೇಶ್ ಅವರನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಎದೆ, ಮುಖ ಮತ್ತು ತೋಳುಗಳಲ್ಲಿ ಆಳವಾದ ಸುಟ್ಟಗಾಯಗಳನ್ನು ನೋಡಿದ ವೈದ್ಯರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ವೈದ್ಯಕೀಯ ವರದಿಯಲ್ಲಿ ಅವರ ಗಾಯಗಳನ್ನು ಬಹಳ ಅಪಾಯಕಾರಿ ಎಂದು ವಿವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆನ ಪ್ರಕಾರ, ದಂಪತಿಗಳು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರ ಮಧ್ಯೆ ದಾಂಪತ್ಯಕ್ಕೆ ಸಂಬಂಧಿಸಿದಂತೆ ಸಾಮರಸ್ಯ ಇರಲಿಲ್ಲ. ಎರಡು ವರ್ಷಗಳ ಹಿಂದೆ, ಅವರ ಪತ್ನಿ ದಾಂಪತ್ಯ ಕಲಹಕ್ಕೆ ಸಂಬಂಧಿಸಿದಂತೆ ಮಹಿಳೆಯರ ವಿರುದ್ಧದ ಅಪರಾಧ (CAW) ಕೋಶಕ್ಕೆ ದೂರು ನೀಡಿದ್ದರೂ, ರಾಜಿ ಮೂಲಕ ವಿಷಯವನ್ನು ಇತ್ಯರ್ಥಪಡಿಸಲಾಯಿತು.
ಘಟನೆಗೆ ಸಂಬಂಧಿಸಿದಂತೆ ದಿನೇಶ್ ಅವರ ಪತ್ನಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳನ್ನು ಬಳಸಿಕೊಂಡು ಸ್ವಯಂಪ್ರೇರಣೆಯಿಂದ ಗಾಯ ಅಥವಾ ಗಂಭೀರ ಗಾಯವನ್ನುಂಟುಮಾಡುವುದು), 124 (ಆಸಿಡ್ ಮುಂತಾದ ವಸ್ತುಗಳಿಂದ ಸ್ವಯಂಪ್ರೇರಣೆಯಿಂದ ಗಂಭೀರ ಗಾಯವನ್ನುಂಟುಮಾಡುವುದು) ಮತ್ತು 326 (ಗಾಯ, ನೀರು ತುಂಬುವಿಕೆ, ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲು 60 ಕೋಟಿ ಪಾವತಿಸಿ: ಶಿಲ್ಪಾ ಶೆಟ್ಟಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್
ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ ಆರು ಬಲಿ: ದೀಪಾವಳಿಗೂ ಮುನ್ನ ಬಾಳಿಗೆ ಕತ್ತಲು ತಂದ ಪಟಾಕಿ ದುರಂತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ