33 ವಾರದ ಗರ್ಭಪಾತಕ್ಕೆ ದಿಲ್ಲಿ ಹೈಕೋರ್ಟ್‌ ಅಸ್ತು

By Kannadaprabha NewsFirst Published Dec 7, 2022, 1:00 AM IST
Highlights

ಹುಟ್ಟಲಿರುವ ಮಗುವಿಗೆ ಸಮಾಜದಲ್ಲಿ ಗೌರವಯುತ ಬದುಕನ್ನು ದೊರಕಿಸಿಕೊಡುವುದು ಸಹ ಅವಶ್ಯವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ. 

ನವದೆಹಲಿ(ಡಿ.07):‘ಗರ್ಭಪಾತದ ವಿಷಯದಲ್ಲಿ ತಾಯಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಹಾಗೂ ಹುಟ್ಟಲಿರುವ ಮಗುವಿಗೆ ಗೌರವಯುತ ಜೀವನ ಒದಗಿಸುವ ದೃಷ್ಟಿಯಿಂದ ತಾಯಿಯ ಗರ್ಭಪಾತ ನಿರ್ಧಾರವನ್ನು ಕೋರ್ಟ್‌ ಮಾನ್ಯ ಮಾಡುತ್ತದೆ’ ಎಂದ ಹೇಳಿರುವ ದೆಹಲಿ ಹೈಕೋರ್ಟ್‌, 33 ವಾರದ ಗರ್ಭಿಣಿಯ ಗರ್ಭಪಾತಕ್ಕೆ ಅವಕಾಶ ನೀಡಿದೆ. ಪ್ರಸ್ತುತ 24 ವಾರದವರೆಗಿನ ಗರ್ಭಿಣಿಯ ಗರ್ಭಪಾತಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೋರ್ಟ್‌ ಈ ಅನುಮತಿ ನೀಡಿದೆ.

‘ಗರ್ಭದಲ್ಲಿರುವ ಮಗುವಿಗೆ ಮಿದುಳಿನ ಸಮಸ್ಯೆ ಇದೆ. ಅಂಗವಿಕಲ ಆಗುವ ಭೀತಿ ಇದೆ. ಹೀಗಾಗಿ 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅವಕಾಶ ನೀಡಬೇಕು’ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ.ಸಿಂಗ್‌, ‘ಮಹಿಳೆ ತನ್ನ ಗರ್ಭವನ್ನು ಅಂತ್ಯಗೊಳಿಸುವ ವಿಷಯ ಪ್ರಪಂಚಾದ್ಯಂತ ಚರ್ಚೆಯ ವಿಷಯವಾಗಿದ್ದರೂ ಭಾರತವು ತನ್ನ ಕಾನೂನಿನಲ್ಲಿ ಮಹಿಳೆಯ ಆಯ್ಕೆಯನ್ನು ಗುರುತಿಸುತ್ತದೆ. ಅಲ್ಲದೇ ಹುಟ್ಟಲಿರುವ ಮಗುವಿಗೆ ಸಮಾಜದಲ್ಲಿ ಗೌರವಯುತ ಬದುಕನ್ನು ದೊರಕಿಸಿಕೊಡುವುದು ಸಹ ಅವಶ್ಯವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ಗರ್ಭಪಾತ ಬಯಸುವ ಅಪ್ರಾಪ್ತರ ಗುರುತು ಬಹಿರಂಗಪಡಿಸಬೇಕಿಲ್ಲ, ಐತಿಹಾಸಿಕ ತೀರ್ಪಿನಲ್ಲಿದೆ ಸ್ಪಷ್ಟ ಉಲ್ಲೇಖ!

‘ಪ್ರಸ್ತುತ ಕಾನೂನಿನ ಪ್ರಕಾರ 24 ವಾರಗಳ ಗರ್ಭಿಣಿಗೆ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ’ ಎಂಬ ಕಾರಣ ನೀಡಿ ಅವಧಿ ಮೀರಿರುವುದರಿಂದ ಆಸ್ಪತ್ರೆಯು ಗರ್ಭಪಾತಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆ, ‘ಗರ್ಭದಲ್ಲಿರುವ ಮಗು ಕೆಲವು ಅಂಗವಿಕಲತೆಯಿಂದ ಬಳಲುತ್ತಿದೆ. ಹೀಗಾಗಿ 24 ವಾರ ಮೀರಿದ್ದರೂ ಗರ್ಭಪಾತಕ್ಕೆ ಅವಕಾಶ ನೀಡಬೇಕು’ ಎಂದು ಕೋರಿದ್ದರು.

ತಾಯಿ ಕೈಗೊಳ್ಳುವ ನಿರ್ಧಾರವೇ ಅಂತಿಮ

ಗರ್ಭಪಾತದ ವಿಷಯದಲ್ಲಿ ತಾಯಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಹಾಗೂ ಹುಟ್ಟಲಿರುವ ಮಗುವಿಗೆ ಗೌರವಯುತ ಜೀವನ ಒದಗಿಸುವ ದೃಷ್ಟಿಯಿಂದ ತಾಯಿಯ ಗರ್ಭಪಾತ ನಿರ್ಧಾರವನ್ನು ಕೋರ್ಟ್‌ ಮಾನ್ಯ ಮಾಡುತ್ತದೆ.
 

click me!