ಶಾಲೆ ಪುನಾರಂಭ: ರಾಜ್ಯಗಳಿಗೇ ಇನ್ನೂ ಗೊಂದಲ| ಸೆಪ್ಟೆಂಬರ್ ಆರಂಭದವರೆಗೂ ಆರಂಭಿಸದೇ ಇರಲು ಕರ್ನಾಟಕದ ಒಲವು| ಜುಲೈ ಅಂತ್ಯ ಆರಂಭಕ್ಕೆ 1, ಆಗಸ್ಟ್‌ನಲ್ಲಿ ಆರಂಭಕ್ಕೆ 4 ರಾಜ್ಯಗಳ ಆಸಕ್ತಿ| 21 ರಾಜ್ಯಗಳಿಂದ ಶಾಲೆ ಆರಂಭದ ಕುರಿತು ಇನ್ನೂ ಯಾವುದೆ ನಿರ್ಧಾರವಿಲ್ಲ
ನವದೆಹಲಿ(ಜು.21): ಕೊರೋನಾ ಹಿನ್ನೆಲೆಯಲ್ಲಿ ಮಾಚ್‌ರ್‍ನಿಂದ ಬಂದ್ ಮಾಡಲಾಗಿರುವ ಶಾಲೆಗಳ ಪುನಾರಂಭ ಕುರಿತಂತೆ ರಾಜ್ಯ ಸರ್ಕಾರಗಳಲ್ಲಿ ಇನ್ನೂ ಗೊಂದಲವಿರುವ ವಿಷಯ ಕೇಂದ್ರ ಸರ್ಕಾರ ಕಲೆ ಹಾಕಿದ ಮಾಹಿತಿಯಿಂದ ಹೊರಬಿದ್ದಿದೆ. ಕರ್ನಾಟಕ ಸೇರಿದಂತೆ 4 ರಾಜ್ಯಗಳು ಸೆಪ್ಟೆಂಬರ್‌ವರೆಗೂ ಶಾಲೆ ಪುನಾರಂಭ ಮಾಡದೇ ಇರುವ ನಿರ್ಧಾರ ಕೈಗೊಂಡಿದ್ದರೆ, 21 ರಾಜ್ಯಗಳು ಆರಂಭದ ದಿನಾಂಕದ ಬಗ್ಗೆ ಇನ್ನೂ ಯಾವುದೇ ಚಿಂತನೆಯನ್ನೂ ನಡೆಸದೇ ಇರುವುದು ಕಂಡುಬಂದಿದೆ.
ಶಾಲೆ, ಕಾಲೇಜು ಆರಂಭಿಸಿ: ಏಮ್ಸ್ ತಜ್ಞರಿಂದ ಶಿಫಾರಸು!
ಶಾಲೆಗಳ ಪುನಾರಂಭದ ಮತ್ತು ಶಾಲಾ ಸುರಕ್ಷಿತ ಯೋಜನೆ ಕುರಿತು ಮಾಹಿತಿ ಕಲೆಹಾಕಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಜು.15ರಂದು ಎಲ್ಲಾ ರಾಜ್ಯಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ಆಯೋಜಿಸಿತ್ತು. ಅದರಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಿಸಿ, ಆ ಮೂಲಕ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಪೈಕಿ ಯಾವ ತಿಂಗಳಲ್ಲಿ ಶಾಲೆ ಆರಂಭಿಸಬಹುದು ಎಂಬ ಬಗ್ಗೆ ಜು.20ರೊಳಗೆ ಮಾಹಿತಿ ನೀಡಿ ಎಂದು ಕೋರಿತ್ತು.
ಅದಕ್ಕೆ ಎಲ್ಲಾ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ಸಲ್ಲಿಸಿವೆ. ಅದರನ್ವಯ ಅಸ್ಸಾಂ ಜುಲೈ 31ರಿಂದ, ದೆಹಲಿ, ಹರ್ಯಾಣ, ಬಿಹಾರ ಮತ್ತು ಚಂಡೀಗಢ ರಾಜ್ಯಗಳು ಆ.15ರಿಂದ ಶಾಲೆ ಪುನಾರಂಭಕ್ಕೆ ಸಿದ್ಧರಾಗಿರುವ ಮಾಹಿತಿ ನೀಡಿವೆ. ಇನ್ನು ಕಳೆದ ಕೆಲ ದಿನಗಳಿಂದ ಹೆಚ್ಚು ಕೊರೋನಾ ಸೋಂಕು ದೃಢಪಡುತ್ತಿರುವ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಸೇರಿ ಕೆಲ ರಾಜ್ಯಗಳು ಸೆಪ್ಟೆಂಬರ್‌ವರೆಗೂ ಆರಂಭಿಸದೇ ಇರುವ ನಿರ್ಧಾರ ಪ್ರಕಟಿಸಿವೆ. ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬ ಮಾಹಿತಿಯನ್ನು ರವಾನಿಸಿವೆ.
SSLC ರಿಸಲ್ಟ್‌ಗಾಗಿ ಕಾಯುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಜುಲೈ 31: ಅಸ್ಸಾಂ
ಆಗಸ್ಟ್: ದೆಹಲಿ, ಹರ್ಯಾಣ, ಬಿಹಾರ, ಚಂಡೀಗಢ
ಸೆಪ್ಟೆಂಬರ್: ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಲಡಾಖ್, ಮಣಿಪುರ, ನಾಗಾಲ್ಯಾಂಡ್, ರಾಜಸ್ಥಾನ, ಅರುಣಾಚಲ ಪ್ರದೇಶ, ಒಡಿಶಾ
ಇನ್ನೂ ನಿರ್ಧಾರ ಕೈಗೊಳ್ಳದ ರಾಜ್ಯಗಳು
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಗೋವಾ, ಮೇಘಾಲಯ, ಮಿಜೊರಾಂ, ಪುದುಚೇರಿ, ಪಂಜಾಬ್, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಾರ್ಖಂಡ್, ಲಕ್ಷದ್ವೀಪ, ದಿಯು-ದಮನ್ ಸೇರಿ ಇನ್ನಿತರ ರಾಜ್ಯಗಳು