Latest Videos

ದೆಹಲಿಯಲ್ಲಿ ಮತ್ತೆ ಕೊರೋನಾ ಅಬ್ಬರ, ಪಾಸಿಟಿವಿಟಿ ದರ ಶೇ.3.85ಗೆ ಜಿಗಿತ!

By Suvarna NewsFirst Published Apr 16, 2022, 5:55 AM IST
Highlights

* ದಿಲ್ಲಿ: ಮತ್ತೆ ಸೋಂಕು ಏರಿಕೆ

* ಪಾಸಿಟಿವಿಟಿ ದರ ಶೇ.3.85ಗೆ ಜಿಗಿತ

* 366 ಮಂದಿಗೆ ಸೋಂಕು

* ಎನ್‌ಸಿಆರ್‌ನಲ್ಲೂ ತೀವ್ರ ಏರಿಕೆ

ನವದೆಹಲಿ(ಏ.16): 4ನೇ ಅಲೆ ಜೂನ್‌ನಲ್ಲಿ ಬರಬಹುದು ಎಂಬ ಆತಂಕದ ಮಧ್ಯೆಯೇ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಇಳಿಕೆಯ ಹಾದಿಯಲ್ಲಿದ್ದ ಕೋವಿಡ್‌ ಪ್ರಕರಣಗಳು ಶಾಲಾ ಮಕ್ಕಳಲ್ಲಿ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ದೆಹಲಿಯಲ್ಲಿ ಶುಕ್ರವಾರ 366 ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.3.95ಕ್ಕೆ ಏರಿದೆ. ಆದರೆ ಯಾರೂ ಸಾವನ್ನಪ್ಪಿಲ್ಲ ಎಂಬುದಷ್ಟೇ ಸಮಾಧಾನದ ವಿಚಾರ.

9275 ಪರೀಕ್ಷೆ ನಡೆಸಲಾಗಿತ್ತು. ಆದರೂ ಪಾಸಿಟಿವ್‌ ಪ್ರಮಾಣ ಹೆಚ್ಚಿದೆ. 21 ಜನ ಆಸ್ಪತ್ರೆಯಲ್ಲಿದ್ದು 685 ಜನ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಗುರುವಾರ ಪಾಸಿಟಿವಿಟಿ ಶೇ.2.39 ಇತ್ತು ಹಾಗೂ 325 ಪ್ರಕರಣ ದಾಖಲಾಗಿದ್ದವು. ಇದು 40 ದಿನಗಳ ಗರಿಷ್ಠವಾಗಿತ್ತು.

ಇನ್ನು ದಿಲ್ಲಿ ಪಕ್ಕದ ಗೌತಮ ಬುದ್ಧನಗರದಲ್ಲಿ ಕಳೆದ 7 ದಿನಗಳಿಂದ 44 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ನೊಯ್ಡಾ ಪ್ರದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ 167ಕ್ಕೆ ಏರಿಕೆಯಾಗಿದೆ.

ಗುರುಗ್ರಾಮದಲ್ಲಿ ಸೋಂಕು ಶೇ.9ರಷ್ಟುಹೆಚ್ಚಾಗಿದ್ದು, ಕಳೆದ 4 ದಿನಗಳಿಂದ ನಗರದಲ್ಲಿ 100ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶುಕ್ರವಾರ 150 ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳು 589ಕ್ಕೆ ಏರಿಕೆಯಾಗಿದೆ.

ಇಡೀ ಶಾಲೆ ಮುಚ್ಚಲ್ಲ- ಸಿಸೋಡಿಯಾ:

ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡರೆ ಇಡೀ ಶಾಲೆಯನ್ನು ಮುಚ್ಚುವುದಿಲ್ಲ. ಸಂಬಂಧಿಸಿದ ತರಗತಿ ಅಥವಾ ನಿರ್ದಿಷ್ಟಪ್ರದೇಶವನ್ನು ಮುಚ್ಚಲಾಗುತ್ತದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಶುಕ್ರವಾರ ಹೇಳಿದ್ದಾರೆ.

‘ನಾವು ಶಾಲೆಗಳನ್ನು ಮುಚ್ಚುವಂತೆ ಸೂಚನೆ ನೀಡಿಲ್ಲ. ನಿರ್ದಿಷ್ಟಪ್ರದೇಶ ಅಥವಾ ತರಗತಿಯನ್ನು ಮುಚ್ಚುವಂತೆ ಮಾತ್ರ ನಿರ್ದೇಶನ ನೀಡಲಾಗಿದೆ. ಶಾಲೆ ಸಿಬ್ಬಂದಿಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡರೆ ಮಾತ್ರ ಶಾಲೆಯನ್ನು ಮುಚ್ಚಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

click me!