
ನವದೆಹಲಿ(ಏ.02): ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆ ಎದುರಿಸಿದ ವೇಳೆ ದೆಹಲಿಯ ಇಬ್ಬರು ಮಂತ್ರಿಗಳಾದ ಅತಿಷಿ ಹಾಗೂ ಸೌರಭ್ ಭಾರದ್ವಾಜ್ ಅವರ ಹೆಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಾಯಿಬಿಟ್ಟಿದ್ದಾರೆ ಎಂದು ಇ.ಡಿ. ಹೇಳಿಕೊಂಡಿದೆ.
ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆಮ್ ಆದ್ಮಿ ಪಕ್ಷದ ಸಂವಹನ ವಿಭಾಗದ ಮಾಜಿ ಮುಖ್ಯಸ್ಥ ವಿಜಯ್ ನಾಯರ್ ನನಗೇನೂ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಅತಿಷಿ ಹಾಗೂ ಸೌರಭ್ ಜತೆ ಮಾತನಾಡುತ್ತಿದ್ದ. ಆತನ ಜತೆ ನನ್ನ ಮಾತುಕತೆ ಸೀಮಿತವಾಗಿತ್ತು ಎಂದು ಕೇಜ್ರಿ ಹೇಳಿದ್ದಾರೆ ಎಂದು ಇ.ಡಿ. ತಿಳಿಸಿದೆ. ಇದರಿಂದಾಗಿ ಕೇಜ್ರಿವಾಲ್ ಬಂಧನ ಖಂಡಿಸಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಾಗೂ ದೆಹಲಿ ಸರ್ಕಾರವನ್ನು ಮುನ್ನಡೆಸುತ್ತಿರುವ ಈ ಇಬ್ಬರೂ ಮಂತ್ರಿಗಳಿಗೆ ಸಂಕಷ್ಟ ಎದುರಾದಂತಾಗಿದೆ. ಈ ನಡುವೆ, ಅತಿಷಿ ಅವರನ್ನು ಈ ಬಗ್ಗೆ ಸುದ್ದಿಗಾರರು ಮಾತನಾಡಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಡಿ ತನಿಖೆಗೆ ಅಸಹಕಾರ, ತನ್ನ ಪಕ್ಷದವರ ವಿರುದ್ಧವೇ ಕೇಜ್ರಿವಾಲ್ ಸುಳ್ಳು ಸಾಕ್ಷ್ಯ: ಕೇಜ್ರಿ ವಿರುದ್ಧ ಇಡಿ ಆರೋಪ
ಯಾರು ಈ ನಾಯರ್?:
ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯ ಪ್ರಕಾರ, ವಿಜಯ್ ನಾಯರ್ ‘ಸೌತ್ ಗ್ರೂಪ್’ಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ದೆಹಲಿ ಅಬಕಾರಿ ಲೈಸೆನ್ಸ್ ಅನ್ನು ಬೇಕಾದವರಿಗೆ ಮಂಜೂರು ಮಾಡಿಸಲು 100 ಕೋಟಿ ರು. ಲಂಚವನ್ನು ಕೇಜ್ರಿವಾಲ್ ಸರ್ಕಾರಕ್ಕೆ ಕೊಡಿಸಿದ್ದ. ಪ್ರಕರಣದಲ್ಲಿ ಆರೋಪಿಯಾಗಿರುವ ಸಮೀರ್ ಮಹೇಂದ್ರು ಎಂಬಾತನಿಗೆ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ನಾಯರ್ ಸಮಯ ನಿಗದಿ ಮಾಡಿಸಿದ್ದ. ಆದರೆ ಭೇಟಿ ಸಾಧ್ಯವಾಗದೆ, ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆದಿತ್ತು. ಆ ವೇಳೆ, ‘ನಾಯರ್ ನಮ್ಮ ಹುಡುಗ, ಆತನನ್ನು ನಂಬಬಹುದು. ಅವರ ಜತೆ ವ್ಯವಹಾರ ಮುಂದುವರಿಸಿಕೊಂಡು ಹೋಗಬಹುದು’ ಎಂದು ಕೇಜ್ರಿವಾಲ್ ತಿಳಿಸಿದ್ದರು.
ನಾಯರ್‌ನನ್ನು ಹಗರಣ ಸಂಬಂಧ ಸಿಬಿಐ ಹಾಗೂ ಇ.ಡಿ. ಬಂಧಿಸಿದ್ದವು. ಸದ್ಯ ಆತ ಜೈಲಿನಲ್ಲಿ ಇದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ