ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಇದರ ತೀರ್ಪು ಬರುವವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಂಸದರೋರ್ವರು ಹೇಳಿಕೆ ನೀಡಿದ್ದಾರೆ.
ಬೆಳಗಾವಿ (ಫೆ.15): ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣವು ಇತ್ಯರ್ಥವಾಗುವವರೆಗೆ ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರ ಆಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಲೋಕಸಭೆಯಲ್ಲಿ ಮಹಾರಾಷ್ಟ್ರದ ಶಿವಸೇನೆ ಸಂಸದ ರಾಹುಲ್ ಶೆವಾಳೆ ಆಗ್ರಹಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಮಹಾರಾಷ್ಟ್ರಕ್ಕೆ ಕರ್ನಾಟಕದ ಗಡಿಯ 7 ಸಾವಿರ ಕಿ.ಮೀ. ಪ್ರದೇಶ ಬರುತ್ತದೆ. ಬೆಳಗಾವಿ, ಕಾರವಾರ, ಬೀದರ್, ಕಲಬುರಗಿ, ನಿಪ್ಪಾಣಿಯ 814 ಹಳ್ಳಿಗಳು ಮರಾಠಿ ಭಾಷಿಕ ಪ್ರದೇಶ ಇವೆ. 1956ರಲ್ಲಿ ರಾಜ್ಯ ಪುನರ್‌ವಿಂಗಡನೆ ವೇಳೆ ಈ ಎಲ್ಲಾ ಹಳ್ಳಿಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿವೆ. ಕಳೆದ 2020 ರ ಮಾಚ್‌ರ್ 17 ರಂದು ನಡೆಯಬೇಕಾಗಿದ್ದ ವಿಚಾರಣೆಯು ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಹೀಗಾಗಿ ಕೋರ್ಟ್ ತೀರ್ಪು ಬರುವ ವರೆಗೂ ಆ ಪ್ರದೇಶಗಳನ್ನು ಕೇಂದ್ರ ಆಡಳಿತ ಪ್ರದೇಶವಾಗಿ ಘೋಷಿಸಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಹ ಇದನ್ನು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ಉದ್ಧವ್ ಉದ್ಧಟತನಕ್ಕೆ ಮರಾಠಿಗರಿಂದಲೇ ವಿರೋಧ: ಮೊದ್ಲು ಮಹಾರಾಷ್ಟ್ರದ ಸಮಸ್ಯೆ ಪರಿಹರಿಸಿ ಎಂದ ಜನ ...
ಇದಕ್ಕೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ರಾಜ್ಯದ ಸಂಸದರು ಧ್ವನಿ ಎತ್ತದಿರುವುದು ಅತ್ಯಂತ ಶೋಚನೀಯ. ನ್ಯಾಯಾಲಯದಲ್ಲಿ ಗಡಿವಿವಾದ ಬಾಕಿ ಇರುವಾಗ ಆ ಪ್ರಕರಣದ ಬಗ್ಗೆ ಮಾತನಾಡುವುದು, ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಯಾವ ಸಂಸದರೂ ಎದಿರೇಟು ಕೊಡಲಿಲ್ಲವೇಕೆ ಎಂದು ಪ್ರಶ್ನಿಸಿದರು.