Death Rate: ರಾಜ್ಯದ ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಭಾರಿ ಏರಿಕೆ! ಕೇಂದ್ರದಿಂದ ಆತಂಕಕಾರಿ ವರದಿ!

Kannadaprabha News   | Kannada Prabha
Published : Jun 08, 2025, 05:59 AM IST
Death rate higher than birth in 7 districts of Karnataka report rav

ಸಾರಾಂಶ

ಕರ್ನಾಟಕದ 7 ಜಿಲ್ಲೆಗಳಲ್ಲಿ ಹುಟ್ಟುವವರಿಗಿಂತ ಮರಣ ಹೊಂದುವವರ ಸಂಖ್ಯೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕುಸಿಯುತ್ತಿದ್ದರೆ, ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ.

ನವದೆಹಲಿ (ಜೂ.8): ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಕರ್ನಾಟಕದ 7 ಜಿಲ್ಲೆಗಳಲ್ಲಿ, ಹುಟ್ಟುವವರಿಗಿಂತ ಮರಣ ಹೊಂದುವವರ ಪ್ರಮಾಣವೇ ಹೆಚ್ಚಾಗಿದೆ ಎಂಬ ಎಚ್ಚರಿಕೆಯ ಗಂಟೆಯನ್ನು ಕೇಂದ್ರ ಸರ್ಕಾರದ ವರದಿಯೊಂದು ಮೊಳಗಿಸಿದೆ. ಸಾಮಾನ್ಯವಾಗಿ ಮರಣ ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಿರುತ್ತದೆ. ಆದರೆ ಮರಣ ಪ್ರಮಾಣವೇ ಅಧಿಕವಾಗಿ ಜನನ ಪ್ರಮಾಣ ಕುಸಿಯುತ್ತಿದೆ ಎಂದರೆ, ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದರ್ಥ!

ಈ ರೀತಿಯ ಟ್ರೆಂಡ್‌ ದೇಶದ 49 ಜಿಲ್ಲೆಗಳಲ್ಲಿ ಕಂಡುಬಂದಿದೆ. ಗಮನಾರ್ಹ ಎಂದರೆ, ಆ ಪೈಕಿ 34 ಜಿಲ್ಲೆಗಳು ದಕ್ಷಿಣ ಭಾರತಕ್ಕೆ ಸೇರಿದವಾಗಿವೆ. ತಮಿಳುನಾಡಿನಲ್ಲೇ ಇಂತಹ 17 ಜಿಲ್ಲೆಗಳು ಇವೆ. ಕರ್ನಾಟಕದ 7, ಕೇರಳದ 6, ಪುದುಚೇರಿಯ 2, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ತಲಾ 1 ಜಿಲ್ಲೆಗಳಲ್ಲಿ ಮರಣದರ ಹೆಚ್ಚಿದೆ. ತಮಿಳುನಾಡಿನ ಯಾವುದೇ ಜಿಲ್ಲೆಯಲ್ಲೂ ಜನನ ದರ ಹೆಚ್ಚುತ್ತಿಲ್ಲ.

ಆಘಾತಕಾರಿ ಎಂದರೆ, ದಕ್ಷಿಣದ ರಾಜ್ಯಗಳಲ್ಲಿ ಈ ರೀತಿ ಜನಸಂಖ್ಯೆ ಕ್ಷೀಣಿಸುತ್ತಿದ್ದರೆ, ಉತ್ತರ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಮರಣ ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಿದೆ. ಅದರಲ್ಲಿಯೂ ಬಿಹಾರ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಜನನ ದರ ಅತಿ ಹೆಚ್ಚು ದಾಖಲಾಗಿದ್ದು, 3 ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ಕಂಡಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್‌ನಲ್ಲಿ ಮರಣದರ ಕಡಿಮೆ ದಾಖಲಾಗಿದೆ. ಪರಿಣಾಮವಾಗಿ, ಅಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.

ಕೇಂದ್ರ ಸರ್ಕಾರದ 2021ರ ನಾಗರಿಕ ನೋಂದಣಿ ದತ್ತಾಂಶದಲ್ಲಿ ಈ ಅಂಶವಿದೆ. ಈ ವರದಿಯಲ್ಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮರಣದರ ಹೆಚ್ಚಿದ್ದು, ಅತಿ ಹೆಚ್ಚು ಜನಸಂಖ್ಯೆ ಕುಸಿತ ಭೀತಿ ಅನುಭವಿಸುತ್ತಿವೆ. ಜೊತೆಗೆ ಜನಸಂಖ್ಯೆಯು ವೃದ್ಧಾಪ್ಯದ ಕಡೆಗೆ ಮುಖ ಮಾಡುತ್ತಿದ್ದು, ಇದರ ಜೊತೆಗೆ ಎಳೆವಯಸ್ಸಿನವರ ಮರಣವೂ ದಕ್ಷಿಣಕ್ಕೆ ಆತಂಕವನ್ನು ತಂದೊಡ್ಡುತ್ತಿದೆ. ಉತ್ತರದಲ್ಲಿ ಮರಣ ಪ್ರಮಾಣ ಕಡಿಮೆ ಇದ್ದು, ಜನಸಂಖ್ಯೆ ಹೆಚ್ಚು ಏರಿಕೆಯಾಗುತ್ತಿದೆ ಎಂಬ ಅಂಶವಿದೆ.

ಇತ್ತೀಚೆಗೆ ಚಂದ್ರಬಾಬು ನಾಯ್ಡು, ಎಂ.ಕೆ. ಸ್ಟಾಲಿನ್‌ ಸೇರಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ‘ದಕ್ಷಿಣ ರಾಜ್ಯಗಳ ಜನಸಂಖ್ಯೆ ಕುಸಿಯುತ್ತಿದ್ದು, ಉತ್ತರ ಭಾರತದ ಜನಸಂಖ್ಯೆ ಏರುತ್ತಿದೆ. ಇದು ಪ್ರಾದೇಶಿಕ ಜನಸಂಖ್ಯಾ ಅಸಮತೋಲನಕ್ಕೆ ನಾಂದಿ ಹಾಡುತ್ತಿದೆ’ ಎಂದಿದ್ದರು. ಇದಕ್ಕೆ ಈ ಅಂಕಿ-ಅಂಶಗಳು ಪುಷ್ಟಿ ನೀಡುತ್ತಿವೆ.

ಕರ್ನಾಟಕದ ಈ 7 ಜಿಲ್ಲೆಗಳಲ್ಲಿ ಅಪಾಯ

2021ರ ನಾಗರಿಕ ನೋಂದಣಿ ದತ್ತಾಂಶದ ಅನ್ವಯ ಕರ್ನಾಟಕದ 7 ಜಿಲ್ಲೆಗಳು ಹೆಚ್ಚು ಮರಣವನ್ನು ಕಾಣುತ್ತಿವೆ. ಉಡುಪಿ, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಜನನಕ್ಕಿಂತ ಸಾವಿನ ಸಂಖ್ಯೆಯೇ ಅಧಿಕವಾಗಿದೆ. 2019ರಲ್ಲಿ ಕೇವಲ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾತ್ರ ಮರಣದರ ಹೆಚ್ಚಿತ್ತು.

ಕಲ್ಯಾಣ ಕರ್ನಾಟಕ ಮಾಮೂಲು ಸ್ಥಿತಿ

ಕಲ್ಯಾಣ ಕರ್ನಾಟಕ ಭಾಗದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಜನನವೇ ಹೆಚ್ಚಿದೆ ಎಂದು ದತ್ತಾಂಶ ಹೇಳಿದೆ. ಮಿಕ್ಕಂತೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಆತಂಕದ ಹೊಸ್ತಿಲಲ್ಲಿವೆ.

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿದೆ ಅಪಾಯ

ಇನ್ನು ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ತುಮಕೂರು, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ತುಂಬಾ ಕಡಿಮೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!