ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್!

By Suvarna NewsFirst Published Jan 3, 2021, 11:16 AM IST
Highlights

ಕೊರೋನಾ ನಿಯಂತ್ರಿಸಲು  ಬ್ರಿಟನ್ನಿನ ಲಸಿಕೆ ಕೋವಿಶೀಲ್ಡ್‌ ಹಾಗೂ ಭಾರತದ ದೇಸಿ ಲಸಿಕೆ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ| ತಜ್ಞರು ಶಿಫಾರಸು ಮಾಡಿದ ಬೆನ್ನಲ್ಲೇ ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಅಂಗೀಕಾರ| ಶೀಘ್ರದಲ್ಲೇ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭ

ಕೊರೋನಾ ನಿಯಂತ್ರಿಸಲು  ಬ್ರಿಟನ್ನಿನ ಲಸಿಕೆ ಕೋವಿಶೀಲ್ಡ್‌ ಹಾಗೂ ಭಾರತದ ದೇಸಿ ಲಸಿಕೆ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ತಜ್ಞರು ಶಿಫಾರಸು ಮಾಡಿದ ಬೆನ್ನಲ್ಲೇ ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಇದನ್ನು ಅಂಗೀಕರಿಸಿದೆ. ಈ ಮೂಲಕ ಶೀಘ್ರದಲ್ಲೇ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾಗಲಿದೆ.

ಇಂದು ಭಾನುವಾರ DGCI ಅಧ್ಯಕ್ಷ ವಿ. ಜಿ. ಸೋಮಾನಿ ಸುದ್ದಿಗೋಷ್ಠಿ ನಡೆಸಿದ್ದು, ಈ ಎರಡು ಕೊರೋನಾ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿವೆ. ಪಗ್ರಯೋಗದ ವೇಳೆಯೂ ಇದು ಸಾಬೀತಾಗಿದೆ. ಹೀಗಾಗಿ ಭಾರತದಲ್ಲಿ ಇವುಗಳ ತುರ್ತು ಬಳಕೆಯನ್ನು ಅಂಗೀಕರಿಸುವುದಾಗಿ ಹೇಳಿದ್ದಾರೆ.

Latest Videos

ಅಣಕು ಲಸಿಕೆ ನೀಡಿಕೆ ಅಭಿಯಾನವೂ ಯಶಸ್ವಿ

ಶನಿವಾರವಷ್ಟೇ ದೇಶಾದ್ಯಂತ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ ಕೂಡ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಲಸಿಕೆ ಕಳುಹಿಸಿದ ತಕ್ಷಣ ಅದನ್ನು ವಿತರಿಸಲು ತಾವು ಸಿದ್ಧರಿದ್ದೇವೆ ಎಂದು ರಾಜ್ಯಗಳು ಹೇಳಿವೆ. ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ‘ಕೇಂದ್ರ ಸರ್ಕಾರ 2-3 ದಿನದಲ್ಲಿ ಸಾಕಷ್ಟುಲಸಿಕೆಯ ಸ್ಟಾಕ್‌ ಕಳುಹಿಸುವುದಾಗಿ ತಿಳಿಸಿದೆ’ ಎಂದು ಹೇಳಿದ್ದು, ರಾಜ್ಯಗಳಿಗೆ ಶೀಘ್ರದಲ್ಲೇ ಲಸಿಕೆ ಪೂರೈಕೆಯಾಗಲಿದೆ ಎಂಬ ಸುಳಿವು ಲಭಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಜ.14ರ ಮಕರ ಸಂಕ್ರಾಂತಿಯ ಶುಭ ವೇಳೆಗೆ ದೇಶದಲ್ಲಿ ಲಸಿಕೆ ವಿತರಣೆ ಆರಂಭವಾಗಬಹುದು ಎಂದು ತಿಳಿಸಿದ್ದಾರೆ.

ಕೋವ್ಯಾಕ್ಸಿನ್‌ಗೆ ತಜ್ಞರ ಒಪ್ಪಿಗೆ:

ಕೊರೋನಾ ಲಸಿಕೆಯ ಪರಿಶೀಲನೆಗೆ ಕೇಂದ್ರ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನೇಮಕ ಮಾಡಿದ್ದ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶನಿವಾರ ಮತ್ತೊಮ್ಮೆ ಸಭೆ ನಡೆಸಿತು. ಈ ಸಭೆಯಲ್ಲಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌) ಜಂಟಿಯಾಗಿ ತಯಾರಿಸಿದ ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ಈ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ನೀಡಬಹುದು ಎಂದು ಎಂದು ಶಿಫಾರಸು ಮಾಡಿತು. ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡಿಸಿಜಿಐಗೆ ಭಾರತ್‌ ಬಯೋಟೆಕ್‌ ಕಂಪನಿ ಡಿ.7ರಂದು ಮನವಿ ಸಲ್ಲಿಸಿತ್ತು.

click me!