Latest Videos

ಬಂಗಾಳಕ್ಕೆ ಇಂದು 135 ಕಿ.ಮೀ ವೇಗದ ಚಂಡಮಾರುತ ದಾಳಿ

By Kannadaprabha NewsFirst Published May 26, 2024, 6:20 AM IST
Highlights

ಚಂಡಮಾರುತದ ಕಾರಣ ಬಂಗಾಳದಲ್ಲಿ ಮೇ 26 ಮತ್ತು 27ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಒಡಿಶಾದಲ್ಲಿ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ರೆಮಲ್ ಎಂದರೆ ಅರೇಬಿಕ್‌ ಭಾಷೆಯಲ್ಲಿ ಮರಳು ಎಂದರ್ಥ. ಓಮಾನ್‌ ದೇಶವು ಈ ಸಲ ಚಂಡಮಾರುತಕ್ಕೆ ಹೆಸರಿಟ್ಟಿದೆ.

ಕೋಲ್ಕತಾ(ಮೇ.26):  ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಶನಿವಾರ ರಾತ್ರಿ ರೆಮಲ್‌ ಚಂಡಮಾರುತವಾಗಿ ಬದಲಾಗಿದ್ದು, ಭಾನುವಾರ ರಾತ್ರಿ ಪ.ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿ ಮಧ್ಯೆ ಅಪ್ಪಳಿಸಲಿದೆ. ಹೀಗಾಗಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಭಾಗಗಳಲ್ಲಿ ಬಿರುಗಾಳಿ ಹಾಗೂ ಮಳೆ ಆರಂಭವಾಗಿದೆ.

ಚಂಡಮಾರುತದ ಕಾರಣ ಬಂಗಾಳದಲ್ಲಿ ಮೇ 26 ಮತ್ತು 27ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಒಡಿಶಾದಲ್ಲಿ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ರೆಮಲ್ ಎಂದರೆ ಅರೇಬಿಕ್‌ ಭಾಷೆಯಲ್ಲಿ ಮರಳು ಎಂದರ್ಥ. ಓಮಾನ್‌ ದೇಶವು ಈ ಸಲ ಚಂಡಮಾರುತಕ್ಕೆ ಹೆಸರಿಟ್ಟಿದೆ.

ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ

ಇಂದು ರೌದ್ರರೂಪ:

ರೆಮಲ್‌ ಚಂಡಮಾರುತವು ಭಾನುವಾರ ಮುಂಜಾನೆ ತನ್ನ ರೌದ್ರ ರೂಪವನ್ನು ಪಡೆದುಕೊಳ್ಳಲಿದ್ದು, ಗಂಟೆಗೆ ಗರಿಷ್ಠ 135 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಹೌರಾ, ಕೋಲ್ಕತಾ, ಉತ್ತರ ಮತ್ತು ದಕ್ಷಿಣ ಪರಗಣ, ಒಡಿಶಾದ ಭದ್ರಕ್, ಬಾಲಸೋರ್‌ ಮತ್ತು ಕೇಂದ್ರಪಾರ ಜಿಲ್ಲೆಗಳಲ್ಲಿ ಕರಾವಳಿ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇದರ ಜೊತೆಗೆ ಜನರಿಗೆ ಒಳಾಂಗಣದಲ್ಲೇ ಇರುವಂತೆ ಸೂಚಿಸಲಾಗಿದ್ದು, ಮೀನುಗಾರರಿಗೆ ಮೇ 27ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಚಂಡಮಾರುತವು ಪಶ್ಚಿಮ ಬಂಗಾಳದ ಸಾಗರ್‌ ದ್ವೀಪದಲ್ಲಿ ರೂಪುಗೊಂಡಿದ್ದು, ಮೇ 27ರ ಬೆಳಗ್ಗೆ ವೇಳೆಗೆ ಬಾಂಗ್ಲಾದೇಶದ ಖೇಪುಪಾರಾ ಪ್ರದೇಶವನ್ನು ತಲುಪಲಿದೆ ಮತ್ತು ಅಲ್ಲಿಯೇ ತನ್ನ ಕಸುವು (ಬಲ) ಕಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲೂ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!