ನಿವಾರ್‌ ದಾಳಿಗೆ ತ.ನಾಡು ತತ್ತರ: 5 ಬಲಿ, 1 ಸಾವಿರ ಮರ ಧರೆಗೆ!

By Suvarna NewsFirst Published Nov 27, 2020, 8:04 AM IST
Highlights

ನಿವಾರ್‌ ದಾಳಿಗೆ ತ.ನಾಡು ತತ್ತರ| 145 ಕಿ.ಮೀ. ವೇಗದಲ್ಲಿ ಪುದುಚೇರಿಗೆ ಅಪ್ಪಳಿಸಿದ ಚಂಡಮಾರುತ| 5 ಬಲಿ, 1 ಸಾವಿರ ಮರ ಧರೆಗೆ| ವಾಯುಭಾರ ಕುಸಿತವಾಗಿ ಪರಿವರ್ತನೆ| ಮಳೆ ಮುಂದುವರಿಕೆ| ಬಸ್‌, ರೈಲು, ವಿಮಾನ ಸೇವೆ ಶುರು

ಚೆನ್ನೈ/ಪುದುಚೇರಿ(ನ.27):: ಬುಧವಾರ ತಡರಾತ್ರಿ ಪುದುಚೇರಿ ಕರಾವಳಿಗೆ ಅಪ್ಪಳಿಸಿದ ‘ನಿವಾರ್‌’ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಸಾಕಷ್ಟುಪ್ರಾಕೃತಿಕ ವಿಕೋಪ ಸೃಷ್ಟಿಸಿದೆ. ಬಿರುಗಾಳಿಸಹಿತ ಭಾರಿ ಮಳೆಯಿಂದ ಅನೇಕ ಪ್ರದೇಶಗಳು ಮುಳುಗಡೆ ಆಗಿದ್ದು, 1000ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಾಣಹಾನಿ ಅತ್ಯಲ್ಪವಾಗಿದ್ದು, 5 ಜನ ಸಾವಿಗೀಡಾದ ವರದಿಯಾಗಿದೆ.

"

ಗಂಟೆಗೆ 120ರಿಂದ 145 ಕಿ.ಮೀ. ವೇಗವಾಗಿ ಅಪ್ಪಳಿಸಿದ ‘ಅತಿ ಗಂಭೀರ ಚಂಡಮಾರುತ’ವು ಈಗ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಗುರುವಾರ ಸಂಜೆಯ ವೇಳೆಗೆ ಮಳೆ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೂ ಶುಕ್ರವಾರದವರೆಗೆ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಮಳೆ ಇಳಿಮುಖವಾದ ಕಾರಣ ತಮಿಳುನಾಡಿನಲ್ಲಿ ರಸ್ತೆ, ರೈಲು ಹಾಗೂ ವಿಮಾನ ಸಂಚಾರ ಆರಂಭವಾಗಿದೆ. ಕಡಿತಗೊಂಡಿದ್ದ ವಿದ್ಯುತ್‌ ಸಂಪರ್ಕ ಮರುಕಲ್ಪಿಸುವ ಕಾಮಗಾರಿಗಳೂ ಭರದಿಂದ ನಡೆದಿವೆ.

ಚಂಡಮಾರುತದಿಂದ ಆದ ಹಾನಿಯ ಪ್ರಮಾಣ ಎಷ್ಟುಎಂಬ ಲೆಕ್ಕಾಚಾರ ನಡೆದಿದ್ದು, ಇನ್ನಷ್ಟೇ ಅಂತಿಮ ಅಂಕಿ-ಅಂಶ ಲಭಿಸಬೇಕಿದೆ. ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಕೇಂದ್ರದಿಂದ ಸಕಲ ಸಹಾಯದ ಭರವಸೆ ನೀಡಿದ್ದಾರೆ. ಈಗಾಗಲೇ ತಮಿಳುನಾಡಿಗೆ 24 ಎನ್‌ಡಿಆರ್‌ಎಫ್‌ ತಂಡಗಳು ಶಾ ಸೂಚನೆ ಮೇರೆಗೆ ತಮಿಳುನಾಡಿನಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ತಮಿಳುನಾಡಿನ ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಈ ವೇಳೆ ಅವರು ಮಾತನಾಡಿ, ‘ಹಾನಿಯ ಅಂದಾಜು ನಡೆಸಲಾಗುವುದು. ಅಂತಿಮ ಅಂಕಿ- ಸಂಖ್ಯೆ ಲಭಿಸಿದ ನಂತರ ಪರಿಹಾರ ವಿತರಿಸಲಾಗುವುದು’ ಎಂದರು.

ಮಳೆ ಅಬ್ಬರ:

ಅತಿ ಹೆಚ್ಚು ಮಳೆ ಪುದುಚೇರಿಯಲ್ಲಿ 30 ಸೆಂ.ಮೀ.ನಷ್ಟುಬಿದ್ದಿದ್ದರೆ, ತಮಿಳುನಾಡಿನ ಕಡಲೂರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 27 ಸೆಂ.ಮೀ. ಮಳೆ ಸುರಿದಿದೆ. ಚೆನ್ನೈನಲ್ಲಿ 12 ಸೆಂ.ಮೀ., ಕಾರೈಕಲ್‌ನಲ್ಲಿ 10, ನಾಗಪಟ್ಟಿಣಂನಲ್ಲಿ 6.3 ಸೆಂ.ಮೀ. ಮಳೆ ಸುರಿದಿದೆ.

ಚಂಡಮಾರುತ ಅಪ್ಪಳಿಸಿದಾಗ ಭೀಕರತೆ ಎಷ್ಟಿತ್ತೆಂದರೆ ಮರ ಬೀಳುತ್ತಿರುವ ಹಾಗೂ ತಗಡುಗಳು ಹಾರಿ ಜನವಸತಿ ಪ್ರದೇಶಗಳ ಮೇಲೆ ಬೀಳುತ್ತಿರುವ ದೃಶ್ಯಗಳು ಮೈ ಝಲ್ಲೆನ್ನಿಸಿದವು.

ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿದ ಕಾರಣ ಜನರು ಮನೆಯಿಂದ ಹೊರಬರಲಾರದೇ ಪರದಾಡಿದರು.

* 2.5 ಲಕ್ಷ: ತಮಿಳ್ನಾಡಿನಲ್ಲಿ ಸ್ಥಳಾಂತರಗೊಂಡಿದ್ದ ಜನರು

* 24 ತಂಡ: ರಕ್ಷಣೆಗೆ ಎನ್‌ಡಿಆರ್‌ಎಫ್‌ ತಂಡಗಳ ಬಳಕೆ

* 1200 ಮಂದಿ: ರಕ್ಷಣೆಗಿಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸಂಖ್ಯೆ

* 30 ಸೆಂ.ಮೀ.: ಚಂಡಮಾರುತದಿಂದ ಪುದುಚೇರಿಯಲ್ಲಿ ಸುರಿದ ಮಳೆ

* 27 ಸೆಂ.ಮೀ.: ತಮಿಳುನಾಡಿನ ಕಡಲೂರಲ್ಲೂ ಭಾರಿ ಮಳೆ

click me!