
ನವದೆಹಲಿ/ಭುವನೇಶ್ವರ(ಸೆ.27): ಆಂಧ್ರಪ್ರದೇಶ(Andhra Pradesh) ಉತ್ತರ ಭಾಗ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಲಾಬ್ ಚಂಡಮಾರುತ(Gulab Cyclone) ಅಪ್ಪಳಿಸಿದೆ. ಇದಕ್ಕೆ ಮುಂಚಿತವಾಗಿಯೇ ಉಭಯ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಂಜೆ 6 ಗಂಟೆಗೆ ಅಪ್ಪಳಿಸುವಿಕೆ ಆರಂಭವಾಗಿದ್ದು, ನಂತರದ 3 ಗಂಟೆಗಳಲ್ಲಿ ಆಂಧ್ರಪ್ರದೇಶದ ಕಾಳಿಂಗಪಟ್ಟಣಂ ಮತ್ತು ಒಡಿಶಾದ ಗೋಪಾಲ್‌ಪುರ ಮಧ್ಯೆ ಚಂಡಮಾರುತ(Cyclone) ಹಾದುಹೋಗಿದೆ. ಈ ವೇಳೆ ಚಂಡಮಾರುತದ ವೇಗ ಪ್ರತೀ ಗಂಟೆಗೆ 100 ಕಿ.ಮೀ.ನಷ್ಟಿತ್ತು.
ಇದರ ಪರಿಣಾಮ ಒಡಿಶಾದ ದಕ್ಷಿಣ ಮತ್ತು ಕರಾವಳಿ ತೀರದ 11 ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಸಂಭಾವ್ಯ ಅನಾಹುತ ತಡೆಗೆ ಜನರ ರಕ್ಷಣೆಗಾಗಿ ಒಡಿಶಾ ವಿಪತ್ತು ನಿರ್ವಹಣಾ ಪಡೆಯ 42 ತಂಡಗಳು, ಎನ್‌ಡಿಆರ್‌ಎಫ್‌ನ 24 ತುಕಡಿಗಳು, 102 ಅಗ್ನಿಶಾಮಕ ಸಿಬ್ಬಂದಿಯನ್ನು ಅತಿಹೆಚ್ಚು ಹಾನಿಗೊಳಗಾಗಲಿರುವ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
ಒಡಿಶಾದಲ್ಲಿ ಅಪಾಯದಲ್ಲಿದ್ದ 4 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಂಧ್ರದಲ್ಲಿ 86 ಸಾವಿರ ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
6 ಮೀನುಗಾರರು ಬಲಿ?:
ಗುಲಾಬ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಶ್ರೀಕಾಕುಳಂ ಜಿಲ್ಲೆಯ 6 ಮಂದಿ ಮೀನುಗಾರರು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಗುಲಾಬ್‌ಗೆ ಸಿಲುಕಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಶೂನ್ಯ ಸಾವಿನ ಗುರಿ: ಒಡಿಶಾ ಸಿಎಂ
ಗುಲಾಬ್ ಅಪ್ಪಳಿಸುವ ಮುನ್ನ ಮಾತನಾಡಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ‘ನಾವು ಸಾವು-ನೋವಿನ ಗುರಿ ಹೊಂದಿದ್ದೇವೆ. ಗುಲಾಬ್ ಪ್ರಭಾವಕ್ಕೆ ಸಿಲುಕಿರುವ 7 ಜಿಲ್ಲೆಗಳಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಸಣ್ಣ-ಪುಟ್ಟಅನಾಹುತವಾಗದಂತೆ ತಡೆಯುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಇರಬೇಕು’ ಎಂದು ತಿಳಿಸಿದ್ದಾರೆ.
ಸಕಲ ಸಹಾಯ: ಮೋದಿ ಘೋಷಣೆ
ಗುಲಾಬ್ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶ ಮತ್ತು ಒಡಿಶಾ ಮುಖ್ಯಮಂತ್ರಿಗಳಾದ ಜಗನ್ ಮೋಹನ್ ರೆಡ್ಡಿ ಮತ್ತು ನವೀನ್ ಪಟ್ನಾಯಕ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಈ ವೇಳೆ ಚಂಡಮಾರುತ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಎರಡೂ ರಾಜ್ಯಗಳಿಂದಲೂ ಮಾಹಿತಿ ಪಡೆದರು. ಅಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ. ಚಂಡಮಾರುತದ ಹೊರತಾಗಿಯೂ, ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ