* ಒಡಿಶಾದ 4 ಜಿಲ್ಲೆಗಳಲ್ಲಿ ಜನರ ಸ್ಥಳಾಂತರ
* ‘ಆಸಾನಿ’ಯಿಂದಾಗಿ ಪೂರ್ವ ಕರಾವಳಿಗೆ ಭಾರಿ ಮಳೆ ಭೀತಿ
* ತೀರಕ್ಕೆ ಅಪ್ಪಳಿಸದು ಈ ಚಂಡಮಾರುತ
ಕೋಲ್ಕತಾ(ಮೇ.10): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಆಸಾನಿ’ ಚಂಡಮಾರುತದ ಪ್ರಭಾವದಿಂದಾಗಿ ದೇಶದ ಪೂರ್ವ ಕರಾವಳಿಯಲ್ಲಿ ಗರಿಷ್ಠ 120 ಕಿ.ಮೀ. ವೇಗದ ಗಾಳಿ ಬೀಸುವ ಹಾಗೂ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿರುವ ತನ್ನ ಕರಾವಳಿಯ 4 ಜಿಲ್ಲೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಒಡಿಶಾ ಸರ್ಕಾರ ಸಿದ್ಧತೆ ಆರಂಭಿಸಿದೆ.
ಸದ್ಯ ಆಸಾನಿ (ಸಿಂಹಳಿ ಭಾಷೆಯಲ್ಲಿ ಕ್ರೋಧ ಎಂದರ್ಥ) ವಿಶಾಖಪಟ್ಟಣದಿಂದ 550 ಕಿ.ಮೀ. ಹಾಗೂ ಪುರಿಯಿಂದ 680 ಕಿ.ಮೀ. ದೂರದಲ್ಲಿದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಕರಾವಳಿಯತ್ತ ಬರುತ್ತಿದೆ. ಈ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ ಎಲ್ಲ ಬಂದರುಗಳಲ್ಲಿ ‘ಸಿಗ್ನಲ್ 2’ ಘೋಷಣೆ ಮಾಡಲಾಗಿದೆ. ಅಂದರೆ ಯಾವುದೇ ಹಡಗು ತೀರದತ್ತ ಬರಕೂಡದು ಎಂಬ ಸಂದೇಶ ರವಾನಿಸಲಾಗಿದೆ.
ಮಂಗಳವಾರ ಚಂಡಮಾರುತ ಮತ್ತಷ್ಟುಬಿರುಸು ಪಡೆದುಕೊಳ್ಳಲಿದ್ದು, ಕರಾವಳಿಯ ಬದಲಿಗೆ ವಾಪಸ್ ಬಂಗಾಳ ಕೊಲ್ಲಿಯತ್ತ ನುಗ್ಗಿ, ಬಳಿಕ ದುರ್ಬಲಗೊಳ್ಳಲಿದೆ. ಹೀಗಾಗಿ ಒಡಿಶಾ ಅಥವಾ ಆಂಧ್ರಪ್ರದೇಶಕ್ಕೆ ಲಗ್ಗೆ ಇಡುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಕರಾವಳಿಯ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದ ಬಳಿಯೇ ಹಾದು ಹೋಗುವ ಕಾರಣ ಈ ಚಂಡಮಾರುತದಿಂದಾಗಿ ಈ ರಾಜ್ಯಗಳಲ್ಲಿ ಮಂಗಳವಾರ ಸಂಜೆಯಿಂದ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. 7ರಿಂದ 11 ಸೆಂ.ಮೀ.ವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.