
ಬೆಂಗಳೂರು (ಮೇ. 20): ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗೆ ಬುಧವಾರ ಅಪ್ಪಳಿಸುವ ‘ಅಂಫನ್’ ಚಂಡಮಾರುತದ ವೇಗ ಅದೃಷ್ಟವಶಾತ್ ಕೊಂಚ ಕಡಿಮೆಯಾಗಿದ್ದು, ಈಗ ಅದು ‘ಸೂಪರ್ ಸೈಕ್ಲೋನ್’ ಬದಲು ‘ಅತ್ಯಂತ ತೀವ್ರ ವೇಗದ ಚಂಡಮಾರುತ’ವಾಗಿ ಬದಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಸರ್ಕಾರಗಳು ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿವೆ.
ಗಂಟೆಗೆ 195-200 ಕಿ.ಮೀ. ವೇಗದ ಬದಲು ಅಂಫನ್ ಚಂಡಮಾರುತ 155-165 ಕಿ.ಮೀ. ವೇಗದಲ್ಲಿ ಬಂಗಾಳ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸಬಹುದು ಎಂದು ಅಂದಾಜು ಮಾಡಲಾಗಿದೆ. ‘ಮುನ್ನೆಚ್ಚರಿಕೆ ಕ್ರಮವಾಗಿ 3 ಲಕ್ಷ ಜನರನ್ನು ಸೈಕ್ಲೋನ್ ಶೆಲ್ಟರ್‌ಗಳಿಗೆ ಸ್ಥಳಾಂತರ ಮಾಡಲಾಗಿದೆ’ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಒಡಿಶಾ ಸರ್ಕಾರ ಸುಮಾರು 11 ಲಕ್ಷ ಜನರನ್ನು ಸ್ಥಳಾಂತರ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೋನಾ ಆಯ್ತು, ಭಾರತಕ್ಕೆ ಎದುರಾಗಿದೆ ಇನ್ನೊಂದು ಆತಂಕ
‘ಅಂಫನ್’ ಚಂಡಮಾರುತ ಸೂಪರ್ ಸೈಕ್ಲೋನ್ ಆಗಿ ಮಾರ್ಪಟ್ಟಿದೆ ಎಂದು ಸೋಮವಾರವಷ್ಟೇ ಹವಾಮಾನ ಇಲಾಖೆ ಹೇಳಿತ್ತು. 1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್‌ಗೆ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಹೀಗಾಗಿ ಆತಂಕ ಹೆಚ್ಚಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತ ಕೊಂಚ ವೇಗ ಕಳೆದುಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದ ಪರಿಣಾಮ ಉಭಯ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ.
ಸೈಕ್ಲೋನ್ ಶೆಲ್ಟರ್‌ಗಳಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಮಮತಾ ಬ್ಯಾನರ್ಜಿ ಅವರು ಒಂದೆರಡು ದಿನಗಳ ಕಾಲ ಪಶ್ಚಿಮ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಹೊತ್ತು ತರುವ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಕಳಿಸಬೇಡಿ ಎಂದ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ.
ದೇಶಕ್ಕೆ 'ಸೂಪರ್ ಸೈಕ್ಲೋನ್' ಭೀತಿ: 195 ಕಿ.ಮೀ. ವೇಗದಲ್ಲಿ ಭೀಕರ ‘ಅಂಫನ್’!
ಎರಡೂ ರಾಜ್ಯಗಳಿಗೂ ಸೇರಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್)ಯ 41 ತಂಡಗಳನ್ನು ನಿಯೋಜಿಸಲಾಗಿದೆ. ಫನಿ ಹಾಗೂ ಬುಲ್‌ಬುಲ್ ಚಂಡಮಾರುತವನ್ನು ಎದುರಿಸಿದ ಅನುಭವದ ಹಿನ್ನೆಲೆಯಲ್ಲಿ ಅಂಫನ್ ಚಂಡಮಾರುತ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಒಡಿಶಾ ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ