180 ಕಿ.ಮೀ. ವೇಗದಲ್ಲಿ ಬರಲಿದೆ ‘ಅಂಫನ್‌’ ಮಾರುತ!

By Kannadaprabha NewsFirst Published May 18, 2020, 8:47 AM IST
Highlights

180 ಕಿ.ಮೀ. ವೇಗದಲ್ಲಿ ಬರಲಿದೆ ‘ಅಂಫನ್‌’ ಮಾರುತ| 20, 21ಕ್ಕೆ ಬಂಗಾಳ, ಒಡಿಶಾದಲ್ಲಿ ಬಿರುಗಾಳಿ ಮಳೆ

ಕೋಲ್ಕತಾ(ಮೇ.18): ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಅಂಫನ್‌ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇ 20, 21ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರಿ ಬಿರುಗಾಳಿ, ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ಪರಿಹಾರ ದಳ (ಎನ್‌ಡಿಆರ್‌ಎಫ್‌) ತನ್ನ 17 ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಈ ರಾಜ್ಯಗಳಿಗೆ ಕಳುಹಿಸಿದೆ.

‘ಅಂಫನ್‌’ ಚಂಡಮಾರುತ: ರಾಜ್ಯದಲ್ಲಿ 2 ದಿನ ಭಾರೀ ಮಳೆ!

ಮೇ 20ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸಲಿದೆ. ಅಂದು ಗಂಟೆಗೆ 180 ಕಿ.ಮೀ. ವೇಗದವರೆಗೂ ಗಾಳಿ ಬೀಸಲಿದ್ದು, ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಮೇ 21ರಂದೂ ಈ ಬಿರುಗಾಳಿ, ಮಳೆ ಮುಂದುವರೆಯಲಿದೆ. ಮೇ 18, 19ರಿಂದಲೇ ಚಂಡಮಾರುತದ ಪ್ರಭಾವದಿಂದ ಎರಡೂ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇಂದ್ರ ಗೃಹ ಇಲಾಖೆ ಕೂಡ ಈ ಕುರಿತು ಎಚ್ಚರಿಕೆ ವಹಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಕೊರೋನಾ ವೈರಸ್‌ ನಿಯಂತ್ರಿಸಲು ಹೋರಾಡುತ್ತಿರುವ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಈಗ ಚಂಡಮಾರುತದ ಆಪತ್ತು ಎದುರಾಗಿದ್ದು, ಜನರು ಆತಂಕಗೊಂಡಿದ್ದಾರೆ.

click me!