ಏನೇ ಆಗಲಿ ಚುನಾವಣೆ ಪ್ರಚಾರ ನಡೆಸುವ ರೀತಿಯನ್ನು ಮಾತ್ರ ಬದಲಾಯಿಸಲು ರಾಜಕಾರಣಿಗಳು ತಯಾರಿಲ್ಲ. ಮಹಾಮಾರಿ ಇದೆಯೆಂದು ಚುನಾವಣೆ ನಿಲ್ಲಿಸಲು ಆಗೋದಿಲ್ಲ ಹೌದು, ಆದರೆ ಮಾಸ್ಕ್ ಇಲ್ಲದೇ ದೊಡ್ಡ ದೊಡ್ಡ ಸಭೆಗಳು, ರೋಡ್ ಶೋಗಳು ಯಾವುದನ್ನೂ ಬದಲಾಯಿಸಲು ಯಾವ ರಾಜಕೀಯ ಪಕ್ಷಗಳೂ ತಯಾರಿಲ್ಲ.
ನವದೆಹಲಿ (ಏ. 16): ಒಂದು ವರ್ಷದ ಕೊರೋನಾ ಸೋಂಕು ಜಗತ್ತಿನ ಚಲನೆಯ ಗತಿ ಮತ್ತು ಸ್ವರೂಪವನ್ನು ಬದಲಾಯಿಸಿದೆ. ಶಾಲಾ ಕಾಲೇಜ್‌ಗಳು ಸಂದರ್ಭಕ್ಕೆ ತಕ್ಕಂತೆ ಕೊಠಡಿಯ ಪಾಠದಿಂದ ಮೊಬೈಲ್‌ಗೆ ಶಿಫ್ಟ್ ಆಗಿವೆ. ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಹೇಳುತ್ತಿದ್ದರೆ, ಮೀಟಿಂಗ್‌ಗಳು ಅಂತರ್ಜಾಲದಿಂದ ನಡೆಯುತ್ತಿವೆ.
ಆದರೆ, ಏನೇ ಆಗಲಿ ಚುನಾವಣೆ ಪ್ರಚಾರ ನಡೆಸುವ ರೀತಿಯನ್ನು ಮಾತ್ರ ಬದಲಾಯಿಸಲು ರಾಜಕಾರಣಿಗಳು ತಯಾರಿಲ್ಲ. ಮಹಾಮಾರಿ ಇದೆಯೆಂದು ಚುನಾವಣೆ ನಿಲ್ಲಿಸಲು ಆಗೋದಿಲ್ಲ ಹೌದು, ಆದರೆ ಮಾÓ್ಕ… ಇಲ್ಲದೇ ದೊಡ್ಡ ದೊಡ್ಡ ಸಭೆಗಳು, ರೋಡ್ ಶೋಗಳು, ಅಂತರ ಇಲ್ಲದೇ ಓಡಾಟ ಊಹೂಂ ಯಾವುದನ್ನೂ ಬದಲಾಯಿಸಲು ಯಾವ ರಾಜಕೀಯ ಪಕ್ಷಗಳೂ ತಯಾರಿಲ್ಲ.
ಶಾಲೆಗೆ ಹೋಗುವ ಪುಟ್ಟಮಗು ಕಂಪ್ಯೂಟರ್‌ನಲ್ಲಿ ಪರಿಚಯವೇ ಇರದ ಪಾಠ ಕೇಳಿ ಪರೀಕ್ಷೆ ಬರೆಯಲಿ ಎಂದು ನಿಯಮ ಮಾಡುವವರು ಬಹುತೇಕರ ಕೈಯಲ್ಲಿ ಮೊಬೈಲ್ ಬಂದಿರುವಾಗ ಅಲ್ಲಿಂದಲೇ ಮತ ಕೇಳುವ, ಪ್ರಚಾರ ಮಾಡುವ, ಜನರನ್ನು ತಲುಪುವ ಪ್ರಯತ್ನ ಮಾಡಬಹುದಿತ್ತು ಅಲ್ಲವೇ? ನಮ್ಮ ದೊಡ್ಡ ದುರಂತ ಎಂದರೆ ಸಾಮಾನ್ಯ ಮನುಷ್ಯನಿಂದ ಹಿಡಿದು ಜಾನುವಾರುಗಳಿಗೂ ನಿಯಮ ರೂಪಿಸುವವರು ತಾವು ನಿಯಮಗಳಿಗೆ ಅತೀತರಾಗಿ ಉಳಿಯುವುದು. ಹೀಗಾದಾಗ 2ನೇ ಅಲೆ ಬರದೇ ಇರುತ್ತದೆಯೇ?
ಲಸಿಕೆ ಪಾಲಿಟಿಕ್ಸ್ ಎಂಬ ಸೋಂಕು!
2 ತಿಂಗಳ ಹಿಂದೆಯಷ್ಟೇ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಆದಿಯಾಗಿ ಎಲ್ಲ ವಿಪಕ್ಷಗಳ ನಾಯಕರು ಲಸಿಕೆ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ, ಇದು ಬಿಜೆಪಿ ಲಸಿಕೆ ಎಂದೆಲ್ಲ ಟೀಕಿಸಿ ಜನರಲ್ಲಿ ಹೆದರಿಕೆ ಹುಟ್ಟಿಸಿದ್ದರು. ಆದರೆ, ಈಗ 2ನೇ ಅಲೆ ಶುರು ಆದಾಗ ಲಸಿಕೆಗಳು ಎಲ್ಲಿವೆ, ಪೂರ್ತಿ 140 ಕೋಟಿ ಜನರಿಗೆ ಕೂಡಲೇ ಲಸಿಕೆ ಕೊಡಿ ಎನ್ನುತ್ತಿದ್ದಾರೆ. ಭಾರತದ ಬಳಿ ಇರುವುದೇ 13 ಕೋಟಿ ಲಸಿಕೆಗಳು. ಅದರಲ್ಲಿ 11 ಕೋಟಿ ಜನರಿಗೆ ತಲುಪಿವೆ. 2 ಕೋಟಿ ಕೊಡಲು ರೆಡಿ ಇವೆ. 6 ಕೋಟಿ ಲಸಿಕೆಗಳು ಸುಮಾರು 82 ದೇಶಗಳಿಗೆ ರಫ್ತಾಗಿವೆ.
ಬೇಸರದ ಸಂಗತಿ ಎಂದರೆ ತೆಲಂಗಾಣದಲ್ಲಿ 17 ಪ್ರತಿಶತ, ಆಂಧ್ರದಲ್ಲಿ 12 ಪ್ರತಿಶತ, ಕರ್ನಾಟಕದಲ್ಲಿ 6.9 ಪ್ರತಿಶತ ಲಸಿಕೆಗಳು ಕೊಡಲು ಆಗದೇ ಹಾಳಾಗುತ್ತಿವೆ. ಪೊಲಿಟಿಕ್ಸ್ ಮಾಡುವುದರಲ್ಲಿ ಯಾರೂ ಕಮ್ಮಿ ಇಲ್ಲ. ಸೋಂಕು ವೇಗವಾಗಿ ಬೆಳೆಯುತ್ತಿದ್ದ ಮಹಾರಾಷ್ಟ್ರ, ಪಂಜಾಬ್, ಛತ್ತೀಸ್‌ಗಢಕ್ಕೆ ಹೆಚ್ಚು ಲಸಿಕೆ ಕೊಡದೆ ಯುಪಿ, ಹರ್ಯಾಣ, ಮಧ್ಯ ಪ್ರದೇಶಕ್ಕೆ ಜಾಸ್ತಿ ಲಸಿಕೆ ಪೂರೈಸಿರುವುದು ಯಾಕೆಂದು ಇತರ ರಾಜ್ಯಗಳು ಕೇಳುತ್ತಿವೆ. ಹರ್ಯಾಣದಂಥ ರಾಜ್ಯಕ್ಕೆ ದಿನಕ್ಕೆ 80 ಸಾವಿರಕ್ಕಿಂತ ಹೆಚ್ಚು ಲಸಿಕೆ ಕೊಡಲು ಕೂಡ ಆಗುತ್ತಿಲ್ಲ. ಮೊದಲೇ ಕೊರೋನಾ ಒಂದು ಮಹಾಮಾರಿ, ಅದರ ಮೇಲೆ ರಾಜಕೀಯ ಒಂದು ಹೆಚ್ಚುವರಿ ಸೋಂಕು.
ಸಟ್ಟಾ ಬಜಾರ್‌ನಲ್ಲಿ ಯಾರು?
ಪಶ್ಚಿಮ ಬಂಗಾಳದಲ್ಲಿ ಮೋದಿ ಗೆಲ್ಲುತ್ತಾರೋ ಅಥವಾ ದೀದಿಯೋ ಎಂಬುದು ರಾಜಕೀಯ ವಲಯಕ್ಕಿಂತ ಹೆಚ್ಚು ಮುಂಬೈ, ರಾಜಸ್ಥಾನದ ಸಟ್ಟಾಬಾಜಾರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ 190ರಿಂದ 195 ಸೀಟು ಗೆಲ್ಲಬಹುದು ಎಂದು 8 ಪೈಸೆ ಬೆಟ್ಟಿಂಗ್ ನಡೆಯುತ್ತಿದ್ದರೆ, ಮಮತಾ 85ರಿಂದ 93 ಸೀಟು ಗೆಲ್ಲಬಹುದು ಎಂದು 13 ಪೈಸೆ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು 13ರಿಂದ 17 ಸೀಟ್ ಗೆಲ್ಲಬಹುದು ಎಂದು 29 ಪೈಸೆ ಕಟ್ಟಲಾಗುತ್ತಿದೆ. ಮೇ 2ರ ಮಧ್ಯಾಹ್ನ ಗಳಿಸುವವರು ಯಾರು, ಕಳೆದುಕೊಳ್ಳೋರು ಯಾರು ಎಂದು ಗೊತ್ತಾಗಲಿದೆ. ಮಮತಾ ಗೆದ್ದರೆ ಅಭೂತಪೂರ್ವ. ಮೋದಿ ಗೆದ್ದರೆ ಇತಿಹಾಸ. ಬಂಗಾಳದ ಚುನಾವಣೆಗಳು ದೇಶದ ಉಳಿದ ಭಾಗದ ಜನಕ್ಕೆ ಯಾವತ್ತೂ ಇಷ್ಟುರೋಚಕ ವಾಗಿರಲಿಲ್ಲ.
ಕುಂಭ ಮೇಳ ಈಗ ಬೇಕಿತ್ತಾ?
ಕಳೆದ ವರ್ಷ ಚೀನಾದಿಂದ ಇಟಲಿಗೆ ಹೋಗಿ ಕೊರೋನಾ ಭಾರತಕ್ಕೆ ಕಾಲಿಟ್ಟಾಗ ಅದನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದು ತಬ್ಲಿಘೀ ಜಮಾತ್‌ನ ಒಂದು ಸಮಾವೇಶ ಎಂಬ ಆರೋಪಗಳಿವೆ. ಆಗ ಈಡೀ ಭಾರತದಲ್ಲಿ ಹೆಚ್ಚು ಎಂದರೆ 500 ಕೇಸ್‌ಗಳಿದ್ದವು. ಈಗ 2ನೇ ಅಲೆಯ ಆರಂಭಕ್ಕೆ ದೇಶದಲ್ಲಿ ದಿನಕ್ಕೆ ಒಂದು ಲಕ್ಷದ 80 ಸಾವಿರ ಕೇಸ್‌ಗಳಿವೆ. ಆದರೆ, ಗಂಗೆಯಲ್ಲಿ 25 ಲಕ್ಷ ಜನ ಸಾಮೂಹಿಕ ಸ್ನಾನ ಮಾಡುತ್ತಿದ್ದಾರೆ. ಹರಿದ್ವಾರದಲ್ಲಿ ನಿನ್ನೆ ಒಂದೇ ದಿನಕ್ಕೆ 1200 ಕೇಸ್‌ಗಳು ಪತ್ತೆಯಾಗಿದ್ದರೂ ಕೂಡ ಸರ್ಕಾರಗಳು ದೇಶದ ಮೂಲೆ ಮೂಲೆಯಿಂದ ಜನರನ್ನು ಕುಂಭ ಮೇಳಕ್ಕೆ ಆಹ್ವಾನಿಸುತ್ತಿವೆ.
ಕುಂಭ ಮೇಳ ಇವತ್ತಿನ ಸ್ಥಿತಿಯಲ್ಲಿ ಟೈಮ್ ಬಾಂಬ್ ಇದ್ದಂತೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುತ್ತಿದ್ದಾರೆ. ಅದು ಇನ್ನೂ ಜೋರಾಗಿ ಸ್ಫೋಟಿಸಿದರೆ ತುಲನಾತ್ಮಕವಾಗಿ ಸೋಂಕು ಕಡಿಮೆ ಇರುವ ಉತ್ತರದ ರಾಜ್ಯಗಳಲ್ಲಿ ಮುಂದಿನ 15 ದಿನಗಳಲ್ಲಿ ವಿಪರೀತ ಅಲ್ಲೋಲ ಕಲ್ಲೋಲದ ಸ್ಥಿತಿ ನಿರ್ಮಾಣ ಆಗಬಹುದು. ಮುಂಬೈ, ಪುಣೆ, ನಾಗಪುರ, ದಿಲ್ಲಿ, ಬೆಂಗಳೂರಿನಲ್ಲಿ ಇನ್ನು ಒಂದು ತಿಂಗಳಿಗೆ ಹೇಗೋ ಮಾಡಿ ಸೋಂಕು ನಿಯಂತ್ರಿಸಬಹುದು. ಇಲ್ಲಿ ಆರೋಗ್ಯ ಸೌಕರ್ಯಗಳಾದರೂ ಇವೆ. ಆದರೆ ಕಾನ್ಪುರ್, ಗೋರಖ್ಪುರ್, ಫೈಝಾಬಾದ್, ಬಸ್ತಿ, ವೈಶಾಲಿ, ಪಾಟ್ನಾ, ಮುಜಫರ್‌ಪುರಗಳ ಹಳ್ಳಿಗಳಿಗೆ ತಲುಪಿದರೆ ನಿಯಂತ್ರಣ ಬಲು ಕಷ್ಟ. ಒಂದು, ಅಲ್ಲಿ ಜನ ಸಾಂಧ್ರತೆ ಹೆಚ್ಚು. ಆಸ್ಪತ್ರೆ ಮತ್ತು ವೈದ್ಯರ ಸೌಕರ್ಯ ಕಡಿಮೆ. ಜೊತೆಗೆ ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಅರಾಜಕತೆ ಮತ್ತು ಅಶಿಸ್ತು ಬಹಳವೇ ಜಾಸ್ತಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ