ಜನ ಸಾಮಾನ್ಯರಿಗೆ ತಕ್ಷಣಕ್ಕೆ ಕೋ ವಿನ್‌ ಆ್ಯಪ್‌ ಲಭ್ಯ ಇಲ್ಲ!

By Suvarna NewsFirst Published Jan 17, 2021, 9:41 AM IST
Highlights

ಜನ ಸಾಮಾನ್ಯರಿಗೆ ತಕ್ಷಣಕ್ಕೆ ಕೋ ವಿನ್‌ ಆ್ಯಪ್‌ ಲಭ್ಯ ಇಲ್ಲ| ಸದ್ಯಕ್ಕೆ ಇದು ಸರ್ಕಾರದ ಮಟ್ಟದಲ್ಲಿ ಮಾತ್ರ ಬಳಕೆ

ನವದೆಹಲಿ(ಜ.17): ಕೊರೋನಾ ಲಸಿಕಾ ಅಭಿಯಾನವನ್ನು ನಿರ್ವಹಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಕೋ ವಿನ್‌ ಆ್ಯಪ್‌, ಸದ್ಯಕ್ಕೆ ಜನ ಸಾಮಾನ್ಯರ ಬಳಕೆಗೆ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಯಾವಾಗ ಇದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದೋ ಆಗ ಜನರು ಇದನ್ನು ಪ್ಲೇಸ್ಟೋರ್‌ಗಳಿಂದ ಡೌನ್‌ಲೋಡ್‌ ಮಾಡಿಕೊಂಡು ಹೆಸರು ನೋಂದಣಿ ಮಾಡಿಕೊಳ್ಳಬಹುದು. ಹೀಗಾಗಿ ಸದ್ಯ ಪ್ಲೇಸ್ಟೋರ್‌ಗಳಲ್ಲಿ ಇರುವ ಇದೇ ಹೆಸರಿನ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು ಎಂದು ಸೂಚಿಸಿದೆ.

ಪ್ರಸಕ್ತ ಕೋ ವಿನ್‌ ಆ್ಯಪ್‌ ಅನ್ನು ಅಧಿಕಾರಿಗಳ ಬಳಕೆಗೆ ಮಾತ್ರ ಸೀಮಿತವಾಗಿಡಲಾಗಿದೆ. ಅದಕ್ಕೆ ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿಗಳ ಹೆಸರು ಸೇರ್ಪಡೆ ಕೆಲಸವನ್ನು ಸರ್ಕಾರವೇ ನೇರವಾಗಿ ಮಾಡುತ್ತಿದೆ.

ಮುಂದೆ ಜನ ಸಾಮಾನ್ಯರಿಗೆ ಬಿಡುಗಡೆ ಮಾಡುವ ಆ್ಯಪ್‌ನಲ್ಲಿ ನಾಲ್ಕು ಮಾದರಿಗಳಿರುತ್ತದೆ. ಅವುಗಳೆಂದರೆ ಅಡ್ಮಿನಿಸ್ಪ್ರೇಷನ್‌, ಬೆನಿಫಿಷಿಯರಿ, ವ್ಯಾಕ್ಸಿನೇಷನ್‌ ಆ್ಯಂಡ್‌ ಬೆನಿಫಿಷಿಯರಿ ಮತ್ತು ಸ್ಟೇಟಸ್‌ ಅಪ್‌ಡೇಟ್‌ ಎಂಬ ಮಾದರಿಗಳಿರುತ್ತದೆ. ಈ ಆ್ಯಪ್‌ ನಿರ್ದಿಷ್ಟವರ್ಗದ ಜನರ ಗುರುತಿಸುವಿಕೆಗೆ ಮತ್ತು ಲಸಿಕೆ ನೀಡಬೇಕಾದವರ ಮೇಲೆ ನಿಗಾಕ್ಕೆ ಮತ್ತು ಯಾವುದೇ ಅಕ್ರಮ ಹಾಗೂ ಗೊಂದಲಗಳನ್ನು ತಡೆಯಲು ನೆರವಾಗಲಿದೆ. ಲಸಿಕೆ ಪಡೆಯಲು ಅರ್ಹತೆ ಪಡೆದವರಿಗೆ ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಸಂದೇಶ ರವಾನಿಸುವ ಮೂಲಕ ಅವರಿಗೆ ಲಸಿಕೆ ಪಡೆಯುವ ಸ್ಥಳ, ದಿನ, ಸಮಯದ ಬಗ್ಗೆ ಪೂರ್ವ ಮಾಹಿತಿ ನೀಡಲಾಗುತ್ತದೆ. ಲಸಿಕೆ ನೀಡಿದ ಬಳಿಕ ಕ್ಯುಆರ್‌ಕೋಡ್‌ ಆಧರಿತ ಡಿಜಿಟಲ್‌ ಲಸಿಕಾ ಪ್ರಮಾಣವನ್ನು ವಿತರಿಸಲಾಗುತ್ತದೆ.

click me!