ಭಾರತದಲ್ಲಿ ಇನ್ನೊಂದು ತಿಂಗಳಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಖಚಿತ ಯಶಸ್ಸಿನೊಂದಿಗೆ ಲಸಿಕೆ ಕೊಡಲಾಗುತ್ತಿದೆ.
ನವದೆಹಲಿ (ನ.15): ಪ್ರಯೋಗ ಹಂತದಲ್ಲಿರುವ ಕೋವಿಶೀಲ್ಡ್ ಕೊರೋನಾ ಲಸಿಕೆ ಖಚಿತವಾಗಿ ಯಶಸ್ವಿಯಾಗಲಿದೆ ಎಂಬ ಅದಮ್ಯ ವಿಶ್ವಾಸದೊಂದಿಗೆ ಈಗಾಗಲೇ 4 ಕೋಟಿ ಡೋಸ್‌ಗಳನ್ನು ಉತ್ಪಾದಿಸಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್, ಡಿಸೆಂಬರ್ ವೇಳೆಗೆ ಭಾರತಕ್ಕೂ 10 ಕೋಟಿ ಕೊರೋನಾ ಲಸಿಕೆ ನೀಡುವುದಾಗಿ ಹೇಳಿದೆ. ಇದರಿಂದಾಗಿ ಮುಂದಿನ ತಿಂಗಳು ಅಥವಾ ಜನವರಿಯಿಂದ ಭಾರತದಲ್ಲಿ ಲಸಿಕೆ ವಿತರಣೆ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಭಾರತ ಸರ್ಕಾರ ಡಿಸೆಂಬರ್ ವೇಳೆಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂಬ ವರದಿಗಳ ಬೆನ್ನಲ್ಲೇ ಸೀರಂ ಇನ್ಸ್‌ಟಿಟ್ಯೂಟ್ ಮುಖ್ಯಸ್ಥ ಅದರ್ ಪೂನಾವಾಲಾ ಈ ಹೇಳಿಕೆ ನೀಡಿದ್ದಾರೆ. ಲಸಿಕೆಯನ್ನು ಮೊದಲ ಹಂತದಲ್ಲಿ ಕೊರೋನಾ ವಾರಿಯರ್‌ಗಳು ಸೇರಿದಂತೆ 30 ಕೋಟಿ ಆದ್ಯತಾ ವರ್ಗಕ್ಕೆ ನೀಡಲು ಸರ್ಕಾರ ಈಗಾಗಲೇ ನೀಲನಕ್ಷೆ ತಯಾರಿಸಿದೆ ಎಂಬುದು ಗಮನಾರ್ಹ.
undefined
ಕೊರೋನಾ ಲಸಿಕೆ ಫೈಝರ್ ಹಿಂದೆ ದಂಪತಿ ಶ್ರಮ, ಐವರು ಮಕ್ಕಳ ದತ್ತು ಪಡೆದ ತಂದೆ ...
ಕೋವಿಶೀಲ್ಡ್‌ನ 3ನೇ ಹಂತದ ಪ್ರಯೋಗದ ವರದಿಯನ್ನು ಶೀಘ್ರವೇ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆ ಇದೆ. ಅದೇ ವರದಿಯನ್ನು ನಾವು ಭಾರತ ಸರ್ಕಾರಕ್ಕೂ ಸಲ್ಲಿಸಲಿದ್ದೇವೆ. ಹೀಗಾಗಿ ಡಿಸೆಂಬರ್ ವೇಳೆ ಭಾರತದಲ್ಲೂ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ನಾವು ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ. ಡಿಸೆಂಬರ್ ವೇಳೆಗೆ ಭಾರತಕ್ಕೆ 10 ಕೋಟಿಯಷ್ಟುಲಸಿಕೆ ಲಭ್ಯವಾಗಲಿದೆ. ಇನ್ನು ಮುಂದಿನ ವರ್ಷ ಪೂರ್ಣ ಅನುಮತಿ ಸಿಕ್ಕ ಬಳಿಕ ನಾವು ನಮ್ಮ ಉತ್ಪಾದನೆಯಲ್ಲಿ ಶೇ.50ರಷ್ಟನ್ನು ಭಾರತಕ್ಕೆ ಮತ್ತು ಉಳಿದ ಶೇ.50ರಷ್ಟನ್ನು ಬಡ ದೇಶಗಳಿಗೆ ಲಸಿಕೆ ಹಂಚಲು ರಚಿಸಲಾಗಿರುವ ಕೋವ್ಯಾಕ್ಸ್ ಸಂಸ್ಥೆಗೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಸೀರಂ ಇನ್ಸ್‌ಟಿಟ್ಯೂಟ್ ಸದ್ಯ ಅಭಿವೃದ್ಧಿಪಡಿಸಿದ 5 ಲಸಿಕೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರನ್ವಯ ಈಗಾಗಲೇ ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಹೆಸರಿನ 4 ಕೋಟಿ ಲಸಿಕೆ ಸಿದ್ಧಪಡಿಸಿದೆ.
ಇತರೆ ಕೆಲ ಲಸಿಕೆಗೆ ಹೋಲಿಸಿದರೆ ಕೋವಿಶೀಲ್ಡ್ ನಿರ್ವಹಣೆ ಸುಲಭ. ಇದನ್ನು ಸಾಮಾನ್ಯ ರೆಫ್ರಿಜರೇಟರ್‌ನಲ್ಲೇ ಇಡಬಹುದು. ಆದರೆ ಫೈಝರ್ ಲಸಿಕೆಯನ್ನು -70 ಡಿ.ಸೆ ತಾಪಮಾನದಲ್ಲಿ ಇಡಬೇಕು. ಇದು ವಿಶ್ವದ ಬಹುತೇಕ ದೇಶಗಳಿಗೆ ಸಾಧ್ಯವಾಗದು ಎಂದು ಪೂನಾವಾಲಾ ಹೇಳಿದ್ದಾರೆ.