'ಕೊರೋನಾಗಿಂತ ಮೊದಲು, ಆಸ್ಪತ್ರೆಯ 'ವಿದೇಶೀ' ಫ್ಯಾನ್‌ ನನ್ನನ್ನು ಸಾಯಿಸುತ್ತೆ!'

By Suvarna NewsFirst Published Apr 25, 2021, 4:36 PM IST
Highlights

ಆಸ್ಪತ್ರೆಯೊಳಗಿನ ದೃಶ್ಯ ಚಿತ್ರೀಕರಿಸಿದ ಕೊರೋನಾ ಸೋಂಕಿತ| ಕೊರೋನಾ ಭಯವಿಲ್ಲ, ಈ ಫ್ಯಾನ್‌ ಭಯವಾಗುತ್ತಿದೆ ಎಂದ ಸೋಂಕಿತ| ಸರ್ಕಾರ ಬದಲಾಯಿಸುವುದೋ? ಸಿಬ್ಬಂದಿಯೋ? ಫ್ಯಾನೋ ಅಥವಾ ನಾನಿದ್ದ ಬೆಡ್‌ ಬದಲಾಯಿಸಬೇಕಾ?

ಮುಂಬೈ(ಏ.25): ಕೊರೋನಾ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಪ್ರತೀ ದಿನ ಲಕ್ಷಾಂತರ ಮಂದಿಗೆ ಕೊರೋನಾ ಸೋಂಕು ತಗುಲುತ್ತಿದ್ದು, ಸಾವಿರಾರು ಮಂದಿ ಮೃತಪಡುತ್ತಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಮೆಡಿಕಲ್ ಎಮರ್ಜೆನ್ಸಿಯಂತಹ ಪರಿಸ್ಥಿತಿ ದೇಶದಲ್ಲಿ ಮನೆ ಮಾಡಿದೆ. ಆದರೀಗ ಈ ಎಲ್ಲಾ ಆತಂಕದ ನಡುವೆಯೇ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋ ನಗು ತರಿಸುವಂತಿದ್ದರೂ, ಆಸ್ಪತ್ರೆಯಲ್ಲಿರುವ ವ್ಯವಸ್ಥೆಯ ಅಸಲಿಯತ್ತನ್ನು ಇದು ಬಯಲು ಮಾಡಿದೆ.

ಹೌದು ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ತಾನು ದಾಖಲಾದ ಆಸ್ಪತ್ರೆಯಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ವಿಡಿಯೋ ಮೂಲಕ ಅನಾವರಣಗೊಳಿಸಿದ್ದಾರೆ. ಮಹಾರಾಷ್ಟ್ರದ ಚಿನ್ವಾಡಾ ಜಿಲ್ಲೆಯ ಆಸ್ಪತ್ರೆಯ ದೃಶ್ಯ ಇದಾಗಿದ್ದು, ಸೋಂಕಿತ ವ್ಯಕ್ತಿ ತನಗೆ ಕೊರೋನಾದ ಭಯವಾಗುತ್ತಿಲ್ಲ. ಬದಲಾಗಿ ಇಲ್ಲಿರುವ 'ವಿದೇಶೀ' ಫ್ಯಾನ್‌ ಕಂಡು ಭಯವಾಗುತ್ತಿದೆ. ಇಡೀ ರಾತ್ರಿ ಈ ಫ್ಯಾನ್‌ನಿಂದಾಗಿ ನಿದ್ದೆ ಬರಲಿಲ್ಲ ಎಂದು ದೂರಿದ್ದಾರೆ.

Latest Videos

ರೋಗಿ ಹೀಗೆಂದಿದ್ದು ಯಾಕೆ?

ಆರಂಭದಲ್ಲಿ ಆಸ್ಪತ್ರೆಯೊಳಗಿನ ದೃಶ್ಯ, ರೋಗಿಗಳನ್ನು ತೋರಿಸುವ ರೋಗಿ ಎಲ್ಲರೂ ತಮ್ಮದೇ ಕೆಲಸದಲ್ಲಿ ವ್ಯಸ್ತರಾಗಿದ್ದಾರೆ ಎನ್ನುತ್ತಾರೆ. ಇದಾದ ಬಳಿಕ ತನ್ನ ಬೆಡ್‌ ಬಳಿ ಒಂದು ವಿದೇಶೀ ಫ್ಯಾನ್ ಅಳವಡಿಸಿದ್ದಾರೆ ಎನ್ನುವ ರೋಗಿ, ಅಲ್ಲಿನ ದೃಶ್ಯ ತೋರಿಸುತ್ತಾ, ಇದನ್ನು ನೋಡಿಯೇ ಭಯವಾಗುತ್ತದೆ. ಕೊರೋನಾಗಿಂತ ಈ ಫ್ಯಾನ್ ಕಂಡು ಭಯವಾಗುತ್ತದೆ. ಈ ವಿದೇಶೀ ಫ್ಯಾನ್ ರಾತ್ರಿ ಇಡೀ ಮಲಗಲು ಬಿಡುವುದಲ್ಲ. ಈಗಲೋ, ಆಗಲೋ ಬೀಳುತ್ತದೆ ಎನ್ನುವ ಹಾಗಿದೆ. ಸಿಬ್ಬಂದಿಗೂ ಹಲವಾರು ಬಾರಿ ಈ ಫ್ಯಾನ್ ಬದಲಾಯಿಸಿ ಇಲ್ಲವೇ ನನ್ನ ಬೆಡ್‌ ಬದಲಾಯಿಸಿ ಎಂದಿದ್ದೇನೆ. ಆದರೆ ಯಾರೂ ನನ್ನ ಮಾತು ಕೇಳುತ್ತಿಲ್ಲ.  ಇದು ನಮ್ಮ ಕೆಲಸ ಅಲ್ಲ ಎನ್ನುವ ಉತ್ತರವಷ್ಟೇ ಸಿಗುತ್ತದೆ. 

ಈ ಫ್ಯಾನ್‌ ನೋಡಿದರೆ ಕೊರೋನಾಗಿಂತ ಮೊದಲು ಇದೇ ನನ್ನನ್ನು ಬಲಿ ಪಡೆಯುತ್ತದೆ ಎಂದು ಅನಿಸುತ್ತದೆ. ಗೆಳೆಯರೇ ನೀವೇ ಹೇಳಿ, ಫ್ಯಾನ್‌ ಬದಲಾಯಿಸೋದಾ? ಬೆಡ್‌ ಬದಲಾಯಿಸೋದಾ? ಇಲ್ಲಿನ ಸಿಬ್ಬಂದಿ ಬದಲಾಯಿಸೋದಾ ಅಥವಾ ಸರ್ಕಾರವನ್ನೇ ಬದಲಾಯಿಸೋದಾ? ನೀವೇ ಹೇಳಿ ಎಂದೂ ಮನವಿ ಮಾಡಿದ್ದಾರೆ.

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಆಸ್ಪತ್ರೆಯಲ್ಲಿರುವ ವ್ಯವಸ್ಥೆಯನ್ನು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ನಮ್ಮ ದೇಶದ ವಾಸ್ತವ ಸ್ಥಿತಿ ಹೀಗಿದೆ ಎಂದು ಅನೇಕ ಮಂದಿ ಹಣಿದಿದ್ದಾರೆ. 

click me!