ನಾಳೆಯಿಂದ 2ನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ

By Kannadaprabha NewsFirst Published Feb 28, 2021, 12:29 PM IST
Highlights

ನಾಳೆಯಿಂದ 2ನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ| 10000 ಸರ್ಕಾರಿ, 20000 ಖಾಸಗಿ ಆಸ್ಪತ್ರೆಗಳಲ್ಲಿ ವಿತರಣೆ| 60 ಮೇಲ್ಪಟ್ಟವರು, 45 ಮೀರಿದ ಕಾಯಿಲೆಪೀಡಿತರಿಗೆ ಲಸಿಕೆ| ದೇಶಾದ್ಯಂತ 27 ಕೋಟಿ ಜನರಿಗೆ ಲಸಿಕೆ ವಿತರಣೆಯ ಗುರಿ

ನವದೆಹಲಿ(ಫೆ.28): ಕೊರೋನಾ ನಿರ್ಮೂಲನೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಡಲು ಸಜ್ಜಾಗಿರುವ ಭಾರತ, ಸೋಮವಾರದಿಂದ ದೇಶವ್ಯಾಪಿ 2ನೇ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದೆ. 60 ವರ್ಷ ಮೇಲ್ಪಟ್ಟಎಲ್ಲಾ ವ್ಯಕ್ತಿಗಳಿಗೆ ಮತ್ತು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಈ ಹಂತದಲ್ಲಿ ಲಸಿಕೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಈ ಹಂತದಲ್ಲಿ ಲಸಿಕೆ ವಿತರಿಸಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ 1 ಡೋಸ್‌ಗೆ 250 ರು. ನೀಡಬೇಕು.

ಮಾ.1ರ ಸೋಮವಾರದಿಂದ ಆರಂಭವಾಗುವ ಲಸಿಕಾ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟಎಲ್ಲಾ ವ್ಯಕ್ತಿಗಳು, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಆರೋಗ್ಯ ಸಮಸ್ಯೆ ವ್ಯಾಪ್ತಿಯಲ್ಲಿ ಏನೆಲ್ಲಾ ಕಾಯಿಲೆಗಳು ಬರುತ್ತವೆ ಮತ್ತು ಅದಕ್ಕೆ ಏನೇನು ದಾಖಲೆಗಳನ್ನು ತರಬೇಕು ಎಂಬುದರ ಬಗ್ಗೆ ಭಾನುವಾರ ಅಥವಾ ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದ ಸರ್ಕಾರ, 2ನೇ ಹಂತದಲ್ಲಿ 27 ಕೋಟಿ ಜನರಿಗೆ ಲಸಿಕೆ ವಿತರಿಸುವ ಉದ್ದೇಶ ಹೊಂದಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ:

ಈ ಹಂತದಲ್ಲಿ 10,000 ಸರ್ಕಾರಿ ಹಾಗೂ 20 ಸಾವಿರ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು. ಇದಕ್ಕಾಗಿ ಅರ್ಹರು ಕೋ- ವಿನ್‌, ಆರೋಗ್ಯ ಸೇತು ಆ್ಯಪ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ ನೇರವಾಗಿ ಸ್ಥಳಕ್ಕೆ ಬಂದು ಅಲ್ಲಿಯೂ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜನಪ್ರತಿನಿಧಿಗಳಿಗೂ ಲಸಿಕೆ?:

2ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟಜನಪ್ರತಿನಿಧಿಗಳಿಗೂ ಲಸಿಕೆ ಪಡೆಯುವ ಅವಕಾಶ ಇದೆ. ಜೊತೆಗೆ ಜನರಲ್ಲಿ ಲಸಿಕೆ ಕುರಿತು ಇರುವ ಅನುಮಾನ ದೂರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಈ ಹಂತದಲ್ಲಿ ಲಸಿಕೆ ಪಡೆಯಬಹುದು ಎನ್ನಲಾಗುತ್ತಿದೆ. ಆದರೆ ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

click me!