ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್ ಪಡೆದವರಿಗೆ ನೆಮ್ಮದಿಯ ಸುದ್ದಿ, ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!

By Suvarna NewsFirst Published Jun 16, 2022, 8:36 AM IST
Highlights

* ಐಸಿಎಂಆರ್‌ ಹಾಗೂ ಭಾರತ ಬಯೋಟೆಕ್‌ ಅಧ್ಯಯನ ವರದಿ

* ಲಸಿಕೆಯ ಪರಿಣಾಮಕಾರಿತ್ವ ಹೆಚ್ಚಿಸಲು ಬೂಸ್ಟರ್‌ ಸಹಾಯ

* ಡೆಲ್ಟಾ, ಒಮಿಕ್ರೋನ್‌ ಉಪತಳಿ ವಿರುದ್ಧ ಕೋವ್ಯಾಕ್ಸಿನ್‌ ಬೂಸ್ಟರ್‌ ಪರಿಣಾಮಕಾರಿ

ನವದೆಹಲಿ(ಜೂ.16): ಕೊರೋನಾ ಸೋಂಕಿನ ಮಾರಕ ತಳಿಗಳಾದ ಡೆಲ್ಟಾ ಮತ್ತು ಒಮಿಕ್ರೋನ್‌ನ ಉಪತಳಿಗಳಾದ ಬಿಎ.1.1 ಮತ್ತು ಬಿಎ.2 ಮೇಲೂ ಕೋವ್ಯಾಕ್ಸಿನ್‌ನ ಬೂಸ್ಟರ್‌ ಡೋಸ್‌ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಐಸಿಎಂಆರ್‌ ಹಾಗೂ ಭಾರತ ಬಯೋಟೆಕ್‌ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ದೇಶದಲ್ಲಿ ಕೋವಿಡ್‌ 4 ನೇ ಅಲೆಯ ಭೀತಿ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಅಧ್ಯಯನ ಮಹತ್ವ ಪಡೆದುಕೊಂಡಿದೆ.

ಭಾರತ ಬಯೋಟೆಕ್‌ ಕೋವ್ಯಾಕ್ಸಿನ್‌ ಲಸಿಕೆಯನ್ನು ಸಿರಿಯನ್‌ ಹ್ಯಾಮಸ್ಟರ್‌ ಮಾದರಿ (ಮಾನವ ಸಂಬಂಧೀ ರೋಗಗಳ ಚಿಕಿತ್ಸೆ ಪ್ರಾಣಿಗಳ ಪ್ರಯೋಗ) ಮೂಲಕ ಅಧ್ಯಯನಕ್ಕೆ ಒಳಪಡಿಸಿದ್ದು, ಮೂರು ಡೋಸುಗಳ ಲಸಿಕೆಯು ಡೆಲ್ಟಾಮಾತ್ರವಲ್ಲದೇ ಒಮಿಕ್ರೋನ್‌ನ ಉಪತಳಿಗಳ ವಿರುದ್ಧವೂ ಸಾಕಷ್ಟುಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

‘ಲಸಿಕೆಯ ಮೂರನೇ ಡೋಸು ಪಡೆದವರಲ್ಲಿ ವೈರಸ್‌ ಹರಡುವಿಕೆಯ ಪ್ರಮಾಣ, ಶ್ವಾಸಕೋಶದಲ್ಲಿನ ವೈರಲ್‌ ಲೋಡ್‌ ಹಾಗ ಶ್ವಾಸಕೋಶವನ್ನು ಹಾನಿಗೊಳಗಾಗಿಸುವ ತೀವ್ರತೆಯ ಕಡಿಮೆಯಾಗಿದ್ದು ಕಂಡುಬಂದಿದೆ. ಇದು ಲಸಿಕೆಯ ಪರಿಣಾಮಕತ್ವವನ್ನು ಸೂಚಿಸುತ್ತದೆ’ ಎಂದು ಅಧ್ಯಯನ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 4024, ದೆಹಲಿಯಲ್ಲಿ 1375 ಕೋವಿಡ್‌ ಕೇಸು ದಾಖಲು

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಬುಧವಾರ 4,024 ಪ್ರಕರಣಗಳು ದಾಖಲಾಗಿವೆ. ಮಂಗಳವಾರಕ್ಕೆ ಹೋಲಿಸಿದರೆ ದೈನಂದಿನ ಪ್ರಕರಣಗಳಲ್ಲಿ ಶೇ.36ರಷ್ಟುಏರಿಕೆಯಾಗಿದೆ. ಇದು ಫೆ.12ರ ನಂತರದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ. ಇನ್ನು ಇದೇ ಅವಧಿಯಲ್ಲಿ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ.

ಮಂಗಳವಾರ ಮಹಾರಾಷ್ಟ್ರದಲ್ಲಿ 2,956 ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸಾವಿಗೀಡಾಗಿದ್ದರು. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ 1,375 ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.7.01ಕ್ಕೆ ಏರಿಕೆಯಾಗಿದೆ. ಆದರೆ ದೆಹಲಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಸತತ 2ನೇ ದಿನ ದೆಹಲಿಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ 638 ಕೋವಿಡ್‌ ಕೇಸು: 112 ದಿನದ ಗರಿಷ್ಠ

 

 ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬುಧವಾರ 648 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದು 112 ದಿನದ ಗರಿಷ್ಠ. ಬೆಂಗಳೂರಿನ 72 ವರ್ಷದ ಪುರುಷರೊಬ್ಬರು ಮರಣವನ್ನಪ್ಪಿದ್ದಾರೆ. ಇದು 10 ದಿನಗಳ ನಂತರ ಮೊದಲ ಕೋವಿಡ್‌ ಸಾವಾಗಿದೆ.

ಜೂನ್‌ ಐದಕ್ಕೆ ಒಬ್ಬರು ಮೃತರಾಗಿದ್ದು ಈ ತಿಂಗಳಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದಂತಾಗಿದೆ. ಕಳೆದ ಕೆಲ ದಿನಗಳಿಂದ 20 ಸಾವಿರದ ಅಸುಪಾಸಿನಲ್ಲಿ ನಿತ್ಯದ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದರೂ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಫೆಬ್ರವರಿ 23ಕ್ಕೆ 667 ಪ್ರಕರಣ ದಾಖಲಾಗಿತ್ತು. ಇದಾದ ನಂತರ ಗರಿಷ್ಠ ಪ್ರಕರಣ ಬುಧವಾರ ವರದಿಯಾಗಿವೆ. ಪಾಸಿಟಿವಿಟಿ ದರ ಶೇ. 2.76 ದಾಖಲಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4000ದ ಗಡಿ ತಲುಪಿದ್ದು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 30 ಮುಟ್ಟಿದೆ. ಒಟ್ಟು ಸೋಂಕಿತರಲ್ಲಿ ಶೇ. 0.75 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!