
ನವದೆಹಲಿ(ಸೆ.30): ವಿಶ್ವವನ್ನೇ ನಡುಗಿಸಿರುವ ಕೊರೋನಾ ಮಹಾಮಾರಿ ದೇಶದಲ್ಲಿ ಇನ್ನೂ ತುತ್ತತುದಿ ತಲುಪಿಲ್ಲ ಎಂಬ ಸಂಶೋಧಕರ ವಾದಗಳ ನಡುವೆಯೇ, ಸದಿಲ್ಲದೆ ಈ ಮಾರಕ ವೈರಸ್ ತನ್ನ ಗರಿಷ್ಠ ಮಟ್ಟವನ್ನು ತಲುಪಿ ಇಳಿಮುಖವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ 9 ದಿನಗಳಿಂದ ಕೊರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಇಳಿಯುತ್ತಲೇ ಇರುವುದು ಇದಕ್ಕೆ ಕಾರಣ.
ಸೆ.17ರಂದು ದೇಶದಲ್ಲಿ 93,199 ಕೊರೋನಾ ಸೋಂಕಿತರು ಪತ್ತೆಯಾಗಿದ್ದರು. ಅನಂತರ ಸತತ 9 ದಿನಗಳ ಕಾಲ ಈ ಸಂಖ್ಯೆ ಭಾರಿ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧಪಡಿಸಿರುವ ಮಂಗಳವಾರ ಬೆಳಗ್ಗೆ 8ರವರೆಗಿನ ಅಂಕಿ-ಸಂಖ್ಯೆಗಳ ಪ್ರಕಾರ, ದೇಶದಲ್ಲಿ 24 ತಾಸುಗಳ ಅವಧಿಯಲ್ಲಿ 70,589 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. 776 ಮಂದಿ ಸಾವಿಗೀಡಾಗಿದ್ದಾರೆ. ಇಷ್ಟುಕಡಿಮೆ ಸೋಂಕು, ಸಾವು ಕಂಡುಬರುತ್ತಿರುವುದು ಒಂದು ತಿಂಗಳ ಬಳಿಕ ಇದೇ ಮೊದಲು. ಅದೂ ಅಲ್ಲದೆ ಇಷ್ಟುಸುದೀರ್ಘ ಅವಧಿಗೆ ಸೋಂಕಿತರ ಸಂಖ್ಯೆ ಕಡಿಮೆ ಅವಧಿಯಾಗುತ್ತಿರುವುದು ಕೂಡ ದೇಶದಲ್ಲಿ ಇದೇ ಮೊದಲು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಸದ್ಯ ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 61,45,291 ಹಾಗೂ ಮೃತರ ಸಂಖ್ಯೆ 96,318ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.83.01ಕ್ಕೆ ತಲುಪಿದ್ದು, ಸೋಂಕಿಗೆ ತುತ್ತಾಗಿದ್ದವರಲ್ಲಿ 51,01,397 ಮಂದಿ ಗುಣಮುಖರಾಗಿದ್ದಾರೆ. 9.47 ಲಕ್ಷ ಸಕ್ರಿಯ ಪ್ರಕರಣಗಳು ಇವೆ.
ವಿಶೇಷ ಎಂದರೆ, ಕೊರೋನಾ ಪರೀಕ್ಷೆ ಸಂಖ್ಯೆ ಕಡಿಮೆ ಇದ್ದಾಗ ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದರು. ಸೆ.17ರಂದು 93 ಸಾವಿರ ಸೋಂಕಿತರು ಪತ್ತೆಯಾದ ದಿನ 10.7 ಲಕ್ಷ ಪರೀಕ್ಷೆಗಳು ನಡೆದಿದ್ದವು. ಆದರೆ ಈಗ 11.2 ಲಕ್ಷಕ್ಕೂ ಅಧಿಕ ಪರೀಕ್ಷೆಗಳು ನಡೆಯುತ್ತಿವೆ. ಆದಾಗ್ಯೂ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ